ADVERTISEMENT

ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ 5 ದಿನದ ‘ಪುಸ್ತಕ ಮೇಳ’ಕ್ಕೆ ₹4.50ಕೋಟಿ ವೆಚ್ಚ

ವಿಧಾನ ಸಭೆ ಸಚಿವಾಲಯದಿಂದ ಐದು ದಿನ ನಡೆದ ಕಾರ್ಯಕ್ರಮ

ರಾಜೇಶ್ ರೈ ಚಟ್ಲ
Published 13 ಅಕ್ಟೋಬರ್ 2025, 1:06 IST
Last Updated 13 ಅಕ್ಟೋಬರ್ 2025, 1:06 IST
<div class="paragraphs"><p>ನಗರದ ವಿಧಾನಸೌಧ ಆವರಣದಲ್ಲಿ ವಿಧಾನಸಭೆ ಸಚಿವಾಲಯ ಆಯೋಜಿಸಿದ್ದ ಪುಸ್ತಕ ಮೇಳದಲ್ಲಿ ಜನರು ಪುಸ್ತಕವನ್ನು ಖರೀದಿಸುತ್ತಿರುವ ದೃಶ್ಯ&nbsp;<br></p></div>

ನಗರದ ವಿಧಾನಸೌಧ ಆವರಣದಲ್ಲಿ ವಿಧಾನಸಭೆ ಸಚಿವಾಲಯ ಆಯೋಜಿಸಿದ್ದ ಪುಸ್ತಕ ಮೇಳದಲ್ಲಿ ಜನರು ಪುಸ್ತಕವನ್ನು ಖರೀದಿಸುತ್ತಿರುವ ದೃಶ್ಯ 

   

  ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್

ಬೆಂಗಳೂರು: ವಿಧಾನಸಭೆ ಸಚಿವಾಲಯದ ವತಿಯಿಂದ ಫೆ. 27ರಿಂದ ಮಾರ್ಚ್‌ 3ರವರೆಗೆ ವಿಧಾನಸೌಧದ ಆವರಣದಲ್ಲಿ ಐದು ದಿನ ಆಯೋಜಿಸಲಾಗಿದ್ದ ‘ಪುಸ್ತಕ ಮೇಳ– 2025’ಕ್ಕೆ ₹4.50 ಕೋಟಿಗೂ ಹೆಚ್ಚು ವೆಚ್ಚವಾಗಿದೆ.

ADVERTISEMENT

ಮಾಹಿತಿ ಹಕ್ಕಿನಡಿ ಪಡೆದ ದಾಖಲೆ ಗಳಿಂದ ಈ ವಿಷಯ ಬಹಿರಂಗ ವಾಗಿದೆ. ಈ ಮೇಳದ ಖರ್ಚು ವೆಚ್ಚಕ್ಕೆ  ಪ್ರಯಾಣ ವೆಚ್ಚಗಳಡಿ ಲಭ್ಯ ಇರುವ ಅನುದಾನದಲ್ಲಿ ₹4.50 ಕೋಟಿಯನ್ನು ಸಾಮಾನ್ಯ ವೆಚ್ಚಗಳಡಿ ಮರು ಹೊಂದಾಣಿಕೆ ಮಾಡುವಂತೆವಿಧಾನಸಭೆ
ಸಚಿವಾಲಯವು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಅದಕ್ಕೆ ಸ್ಪಂದಿಸಿದ್ದ ಇಲಾಖೆ, ₹1 ಕೋಟಿ ಮಾತ್ರ ಮರು ಹೊಂದಾಣಿಕೆ ಮಾಡಲು ಫೆ. 25ರಂದು ಮಂಜೂರಾತಿ ನೀಡಿತ್ತು.

ನಂತರ, ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಿದ್ದ ಸಚಿವಾಲಯವು, ₹3.50 ಕೋಟಿ ಮರು ಹೊಂದಾಣಿಕೆಗೆ ಕೋರಿತ್ತು. ಮಾರ್ಚ್‌ 5ರಂದು ಕೋರಿಕೆಯಷ್ಟು ಹಣ ಬಳಸಿ ಕೊಳ್ಳಲು ಆರ್ಥಿಕ ಇಲಾಖೆ ಅನುಮೋದಿಸಿದೆ.

ಮೇಳದಲ್ಲಿ ಮೈಸೂರು ವಿಶ್ವವಿದ್ಯಾಲಯ ಹಾಗೂ ಕನ್ನಡ ವಿಶ್ವವಿದ್ಯಾಲಯಗಳ ಪ್ರಸಾರಾಂಗ, ಕನ್ನಡ ಸಾಹಿತ್ಯ ಪರಿಷತ್‌, ವಿವಿಧ ಅಕಾಡೆಮಿಗಳು ಸೇರಿದಂತೆ 160 ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿತ್ತು.

ಈ ಸಂಸ್ಥೆಗಳಿಗೆ ಮೇಳ ನಡೆದ ಎಲ್ಲ ಐದೂ ದಿನ ಸಚಿವಾಲಯದ ವತಿಯಿಂದ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.

ಮೇಳಕ್ಕೆ ಬಂದ ಇತರ ರಾಜ್ಯಗಳು ಮತ್ತು ವಿವಿಧ ಜಿಲ್ಲೆಗಳಿಂದ ಬಂದಿದ್ದ ವಿಶೇಷ ಆಹ್ವಾನಿತರು, ಸಂವಾದಕರು, ಕವಿಗಳು ಮತ್ತು ಕಲಾವಿದರಿಗೆ ಹೊಸ ಕುಮಾರಕೃಪ ಅತಿಥಿಗೃಹದಲ್ಲಿ ವಿಧಾನಸಭೆ ಸಚಿವಾಲಯದ ವತಿಯಿಂದ ವಾಸ್ತವ್ಯಕ್ಕೆ ಕೊಠಡಿ ಮತ್ತು ಊಟೋಪಾಚಾರ ವ್ಯವಸ್ಥೆ ಮಾಡಲಾಗಿತ್ತು. ವಾಸ್ತವ್ಯಕ್ಕೆ ₹33 ಸಾವಿರ, ಊಟೋಪಾಚಾರಕ್ಕೆ ₹8,943 ಅನ್ನು ಸಚಿವಾಲಯವು ಪಾವತಿಸಿದೆ.

ಮೇಳಕ್ಕೆ ಮಳಿಗೆಗಳ ನಿರ್ಮಾಣ, ಅದಕ್ಕೆ ಅಗತ್ಯವಾದ ಎಲ್ಲ ವ್ಯವಸ್ಥೆ ಸೇರಿದಂತೆ ರೂಪುರೇಷೆ ಸಿದ್ಧಪಡಿಸಿ ನೀಡಲು ಇವೆಂಟ್‌ ಮ್ಯಾಮೇಜ್‌ಮೆಂಟ್‌ ಸಂಸ್ಥೆಯಾದ ಲಾಫಿಂಗ್‌ ವಾಟರ್‌ ಪ್ರೊಡಕ್ಷನ್‌ ಪ್ರೈವೆಟ್‌ ಲಿಮಿಟೆಡ್‌ಗೆ ವಹಿಸಲಾಗಿತ್ತು. ಟೆಂಡರ್‌ ಆಹ್ವಾನಿಸಲು ಸಮಯದ ಅಭಾವದ ಕಾರಣಕ್ಕೆ ಕೆಟಿಪಿಪಿ ಕಾಯ್ದೆ 4 ಜಿಯಡಿ ವಿನಾಯಿತಿ ನೀಡಲಾಗಿತ್ತು. ಈ ಸಂಸ್ಥೆಯು ₹1.18 ಕೋಟಿ (ಜಿಎಸ್‌ಟಿ ಸೇರಿ) ವೆಚ್ಚವಾಗಲಿದೆ ಎಂದು ದರ ಪಟ್ಟಿ ನೀಡಿತ್ತು. ಆ ಬಳಿಕ, ಪ್ರತಿದಿನ 1,500 ಜನರಿಗೆ ಬೆಳಿಗ್ಗೆ ಮತ್ತು ಸಂಜೆ ಲಘು ಉಪಾಹಾರ, ಮಧ್ಯಾಹ್ನ ಲಘು ಭೋಜನ, ಗಣ್ಯರಿಗೆ ವಿಶೇಷ ನೆನಪಿನ ಕಾಣಿಕೆ ಒದಗಿಸುವುದು ಸೇರಿದಂತೆ ಹೆಚ್ಚುವರಿ ವ್ಯವಸ್ಥೆ ಒದಗಿಸಲು ಸೂಚನೆ ನೀಡಲಾಗಿತ್ತು. ಹೀಗಾಗಿ, ಒಟ್ಟು ₹1.56 ಕೋಟಿಯ ಬಿಲ್ ಅನ್ನು ಈ ಸಂಸ್ಥೆಯು ಸಚಿವಾಲಯಕ್ಕೆ ಸಲ್ಲಿಸಿತ್ತು. ಅಷ್ಟೂ ಮೊತ್ತವನ್ನು ಪಾವತಿಸಲಾಗಿದೆ.

ಇಡೀ ವಿಧಾನಸೌಧ ಕಟ್ಟಡಕ್ಕೆ ಈ ಐದೂ ದಿನ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡಲು ಮಂಡ್ಯ ಜಿಲ್ಲೆ ಮದ್ದೂರಿನ ಶಿವ ಎಲೆಕ್ಟ್ರಿಕಲ್‌ ಆ್ಯಂಡ್‌ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡಲಾಗಿತ್ತು. ಈ ಸಂಸ್ಥೆ ಸಲ್ಲಿಸಿದ್ದ ಬಿಲ್ ಮೊತ್ತ ₹21.34 ಲಕ್ಷ ಪಾವತಿಸಲಾಗಿದೆ. ಮೇಳಕ್ಕೆ ಪ್ರಚಾರ ನೀಡುವ ಉದ್ದೇಶದಿಂದ ಜಾಹೀರಾತುಗಳಿಗೆ ₹31.59 ಲಕ್ಷ ವೆಚ್ಚ ಮಾಡಲಾಗಿದೆ. ಈ ಪೈಕಿ, ಇನ್‌ಸ್ಟಾಗ್ರಾಂ, ಫೇಸ್‌ ಬುಕ್‌, ಯೂ ಟ್ಯೂಬ್‌ ಸೇರಿದಂತೆ 15 ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚಾರದ ವಿಡಿಯೊಗಳಿಗೆ ಸಚಿವಾಲಯದಿಂದ ₹10 ಲಕ್ಷ ಭರಿಸಲಾಗಿದೆ.

ಮೇಳದ ಮೊದಲ ದಿನ 10 ಕಲಾವಿದರೊಂದಿಗೆ ನೀಡಿದ್ದ ಅರ್ಧ ಗಂಟೆ ಅವಧಿಯ ಕಥಕ್ ನೃತ್ಯ ಕಾರ್ಯಕ್ರಮಕ್ಕೆ ₹1 ಲಕ್ಷ ಗೌರವ ಸಂಭಾವನೆ ನೀಡುವಂತೆ ಮಾನಸ ಜೋಶಿ ಆರ್ಟ್ಸ್‌ ಫೌಂಡೇಷನ್‌ ಕೇಳಿತ್ತು. ಸಚಿವಾಲಯವು ₹2 ಸಾವಿರ ಕಡಿತಗೊಳಿಸಿ ₹98 ಸಾವಿರ ಪಾವತಿಸಿದೆ. ಎಂಟು ಕಲಾವಿದರ ಜೊತೆಗೆ ಒಂದು ಗಂಟೆ ಅವಧಿಯ ಸ್ಯಾಕ್ಸೋಪೋನ್‌ ಕಛೇರಿ ನೀಡಿದ್ದ ಉಡುಪಿಯ ಶಿವಪುರದ ತಂಡಕ್ಕೆ ₹98 ಸಾವಿರ ಪಾವತಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಾದ್ಯ ಸಂಗೀತ, ಸುಗಮ ಸಂಗೀತ, ಜನಪದ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಕಲಾ ತಂಡಗಳಿಗೆ ಗೌರವ ಸಂಭಾವನೆ ಪಾವತಿಸಲು ಒಟ್ಟು ₹3.75 ಲಕ್ಷವನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಬ್ಯಾಂಕ್‌ ಖಾತೆಗೆ ವರ್ಗಾಯಿಸುವಂತೆ ಸಚಿವಾಲಯಕ್ಕೆ ಇಲಾಖೆಯ ನಿರ್ದೇಶಕರು ಪತ್ರ ಬರೆದಿದ್ದರು. ಅದರಂತೆ ಹಣ ಪಾವತಿಸಲಾಗಿದೆ.

ಏಳು ರೇಷ್ಮೆ ಶಲ್ಯಕ್ಕೆ ₹88,668

ಪುಸ್ತಕ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರನ್ನು ಸನ್ಮಾನಿಸಲು ಏಳು ರೇಷ್ಮೆ ಶಲ್ಯಗಳನ್ನು ಗರಿಷ್ಠ ಪ್ರಮಾಣದ ರಿಯಾಯಿತಿ ನೀಡಿ ಒದಗಿಸುವಂತೆ ವಿಧಾನಸಭೆ ಸಚಿವಾಲಯವು ರೇಷ್ಮೆ ಉದ್ಯಮಗಳ ನಿಗಮಕ್ಕೆ ಮನವಿ ಮಾಡಿತ್ತು. ನಿಗಮವು 2.25 ಮೀಟರ್‌ ಉದ್ದದ ಪ್ರತಿ ಶಲ್ಯಕ್ಕೆ ತಲಾ ₹13,935 ದರದಲ್ಲಿ ಶೇ 10ರಷ್ಟು ರಿಯಾಯಿತಿ ನೀಡಿತ್ತು. ಅದಕ್ಕೆ ತೆರಿಗೆ ಸೇರಿ ತಲಾ ₹13,168ರಂತೆ ಒಟ್ಟು ₹92,180 ಮೊತ್ತದ ಬಿಲ್‌ ಅನ್ನು ಸಚಿವಾಲಯಕ್ಕೆ ಸಲ್ಲಿಸಿದೆ. ಸರ್ಕಾರವು ₹3,512 ಕಡಿತ ಮಾಡಿ ₹88,668 ಪಾವತಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.