ವಿಧಾನಸೌಧ
ಬೆಂಗಳೂರು: ವಿಧಾನಸೌಧದ ನಿರ್ಮಾಣ, ಇತಿಹಾಸ, ವಾಸ್ತುಶಿಲ್ಪ, ನಾಯಕರ ಪ್ರತಿಮೆಗಳು, ಶಾಸಕಾಂಗದ ಕಾರ್ಯನಿರ್ವಹಣೆಯ ಮಾಹಿತಿಗಳನ್ನು ನೀಡುವ ‘ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸ’ದತ್ತ ಸ್ಥಳೀಯರಲ್ಲದೆ, ಹೊರರಾಜ್ಯ, ವಿದೇಶಿಯರೂ ಹೆಚ್ಚು ಆಕರ್ಷಿತರಾಗಿದ್ದಾರೆ.
ಪ್ರವಾಸೋದ್ಯಮ ಇಲಾಖೆ, ವಿಧಾನಸೌಧದ ಸಚಿವಾಲಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಭಾಗಿತ್ವದಲ್ಲಿ ‘ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸ’ ನಡೆಯುತ್ತಿದೆ. ಜೂನ್ 1ರಿಂದ ಸೆಪ್ಟೆಂಬರ್ 21ರವರೆಗೆ, ಕನ್ನಡದಲ್ಲಿ 62 ಮತ್ತು ಇಂಗ್ಲಿಷ್‌ನಲ್ಲಿ 94 ತಂಡಗಳಲ್ಲಿ 4,674 ಮಂದಿ ಪ್ರವಾಸ ಕೈಗೊಂಡು, ಸರ್ಕಾರದ ಆಡಳಿತ ಯಂತ್ರದ ಕೇಂದ್ರ ಸ್ಥಾನ ವಿಧಾನಸೌಧದ ಮಾಹಿತಿ
ಪಡೆದುಕೊಂಡಿದ್ದಾರೆ.
ಪ್ರವಾಸ ಕೈಗೊಳ್ಳಲು ಬಯಸುವವರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ದಿನ ಮತ್ತು ಸಮಯವನ್ನು ಆಯ್ಕೆ ಮಾಡಿಕೊಂಡು, ವೈಯಕ್ತಿಕ ವಿವರದ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಪ್ರವೇಶ ಶುಲ್ಕವನ್ನು ಪಾವತಿಸಬೇಕು. ಪ್ರವಾಸಕ್ಕೂ ಮುನ್ನ, ಈ ದಾಖಲೆಗಳನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸಿ, ಪ್ರವೇಶಕ್ಕೆ ಅವಕಾಶ ನೀಡುತ್ತಾರೆ.
‘ಪ್ರತಿ ಭಾನುವಾರ, ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಮಾರ್ಗದರ್ಶಿ ಪ್ರವಾಸ ಇರುತ್ತದೆ. ದಿನಕ್ಕೆ ಎಂಟು ತಂಡಗಳಿಗೆ (ಒಂದು ತಂಡದಲ್ಲಿ 30 ಮಂದಿ) ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಲಾಗುತ್ತದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಪ್ರವೇಶ. ಈ ಪ್ರವಾಸಿ ಮಾರ್ಗದರ್ಶಿಗೆ ಐಟಿ ಕಂಪನಿಗಳ ಉದ್ಯೋಗಿಗಳು, ಹೊರ ರಾಜ್ಯ ಹಾಗೂ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ’ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿಧಾನಸೌಧ ಬಲ ಭಾಗದಲ್ಲಿರುವ ಗಾಂಧೀಜಿ ಪ್ರತಿಮೆಯ ಸಮೀಪದಿಂದ ಪ್ರವಾಸ ಆರಂಭ
ಆಗಲಿದೆ. ಅಲ್ಲಿಂದ ವಿಧಾನಸೌಧ ನಿರ್ಮಾಣದ ಶಂಕು ಸ್ಥಾಪನೆಯ ಶಿಲಾಫಲಕ, ವಿಧಾನಸೌಧದ ಶ್ರೀಗಂಧದ ಮಾದರಿ ವೀಕ್ಷಣೆಗೆ ಅವಕಾಶವಿದೆ. ಬ್ಯಾಂಕ್ವೆಟ್ ಸಭಾಂಗಣ ನೋಡಬಹುದು. ವಿಧಾನಸಭೆ ಅಧ್ಯಕ್ಷರ ಗ್ಯಾಲರಿಗೆ ಪ್ರವೇಶ, ಸಭೆಯ ನಡಾವಳಿಗಳ ಬಗ್ಗೆ ಮಾರ್ಷಲ್‌ಗಳು ವಿವರಣೆ ನೀಡುವರು’ ಎಂದು ಮಾರ್ಗದರ್ಶಕ ಜೆ. ಜ್ಞಾನೇಶ್ ಕುಮಾರ್ ಹೇಳಿದರು.
‘ವಿಧಾನ ಪರಿಷತ್ ಪ್ರವೇಶ ದ್ವಾರದ ಬಳಿ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆ 1890ರ ದಶಕದಿಂದ ವಿವಿಧ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸಿ, ವಿಧಾನಸೌಧದವರೆಗೆ ನಡೆದು ಬಂದ ಹಾದಿಯನ್ನು ವಿವರಿಸುವ ಚಿತ್ರಗಳ ಬಗ್ಗೆ ವಿವರಣೆ ನೀಡಲಾಗುತ್ತದೆ. ಅಲ್ಲಿಂದ ಸೆಂಟ್ರಲ್ ಹಾಲ್, ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ, ಗುಲಾಬಿ ಉದ್ಯಾನ, ವಿಧಾನಸೌಧದ ಭವ್ಯಮೆಟ್ಟಿಲುಗಳಲ್ಲಿ ಪ್ರವಾಸ ಕೊನೆಗೊಳ್ಳುತ್ತದೆ’ ಎಂದರು.
ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇಲ್ಲಿನ ವಿಶೇಷಗಳ ಬಗ್ಗೆ ಮಾರ್ಗದರ್ಶಕರು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆಪ್ರಶಾಂತ್ ಕುಮಾರ್ ಮಿಶ್ರಾ, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ
ಅಂಕಿ–ಅಂಶಗಳು
90 ನಿಮಿಷ
ಪ್ರವಾಸದ ಅವಧಿ
1.5 ಕಿ.ಮೀ.
ಪ್ರವಾಸದ ವೇಳೆ ಕ್ರಮಿಸಬೇಕಾದ ದೂರ
₹50
ವಯಸ್ಕರಿಗೆ ಟಿಕೆಟ್ ದರ
ಉಚಿತ ಪ್ರವೇಶ
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ
30
ಪ್ರತಿ ತಂಡದಲ್ಲಿ ಇರಬಹುದಾದ ಪ್ರವಾಸಿಗರ ಸಂಖ್ಯೆ
10 ಮಂದಿ
ಮಾರ್ಗದರ್ಶಕರು
ನೋಂದಣಿ ಹೇಗೆ?
ಕೆಎಸ್‌ಟಿಡಿಸಿಯ www.kstdc.co ವೆಬ್‌ಸೈಟ್‌ನಲ್ಲಿ ಆಸಕ್ತರು ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗೆ: 080-4334 4334,08970650070 ಸಂಪರ್ಕಿಸಬಹುದು. ಟಿಕೆಟ್ ಕಾಯ್ದಿರಿಸಿ
ದವರು, ಖರೀದಿಸಿದವರು ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯ.ಕೆಎಸ್‌ಟಿಡಿಸಿ, ವಿಧಾನಸೌಧದ ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಸಾರ್ವಜನಿಕರು ಏನಂತಾರೆ?
ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧವಿತ್ತು. ಈಗ ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸದ ಮೂಲಕ ನಾಗರಿಕರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ನಿರ್ಧಾರ ಶ್ಲಾಘನೀಯ. ಪ್ರತಿಯೊಬ್ಬರೂ ವಿಧಾನಸೌಧವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು.
–ಮೋಹನ್ ಅಡಿಗ್, ಸುಮನಹಳ್ಳಿ
ಮಾರ್ಗದರ್ಶಿ ಪ್ರವಾಸಿ ನಡಿಗೆಯ ಮೂಲಕ ವಿಧಾನಸೌಧಕ್ಕೆ ಪ್ರವೇಶ ಕಲ್ಪಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಇಲ್ಲಿ ರಾಜಕೀಯ ನಾಯಕರು ಹೇಗೆ ಕಾರ್ಯನಿರ್ವಹಿಸುತ್ತಾರೆ, ಈ ಕಟ್ಟಡ ನಿರ್ಮಾಣದ ಇತಿಹಾಸ, ವಾಸ್ತುಶಿಲ್ಪದ ಮಾಹಿತಿ ತಿಳಿದುಕೊಳ್ಳಲು ಸಹಾಯಕವಾಗಿದೆ
–ಗೀತಾ, ಅಂಜನಾಪುರ
ವಿಧಾನಸೌಧಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದೇನೆ. ವಿಧಾನಸಭೆಯ ಕಾರ್ಯಕಲಾಪಗಳು ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುವ ಕಾರ್ಯವೈಖರಿಯ ಬಗೆಯನ್ನು ತಿಳಿದುಕೊಂಡಿದ್ದೇನೆ. ಶಾಲಾ–ಕಾಲೇಜುಗಳ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬರಬೇಕು.
–ಅಶ್ವಿನಿ, ನಾಗರಬಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.