ಬಿ.ವೈ.ವಿಜಯೇಂದ್ರ
(ಸಂಗ್ರಹ ಚಿತ್ರ)
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಗುರುವಾರ ಇಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ವಿಧಾನಪರಿಷತ್‌ನ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಗೆ 2026ರ ನವೆಂಬರ್‌ನಲ್ಲಿ ನಡೆಯುವ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಈಗಾಗಲೇ ಬಿಡುಗಡೆ ಮಾಡಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಗಳಿಗೆ ಸಂಭಾವ್ಯರ ಹೆಸರುಗಳನ್ನು ಬಿಜೆಪಿ ಪ್ರಮುಖರ ಸಭೆಯಲ್ಲಿ ಚರ್ಚಿಸಿ ತಿಂಗಳುಗಳ ಹಿಂದೆಯೇ ವರಿಷ್ಠರಿಗೆ ಕಳುಹಿಸಲಾಗಿದೆ. ಪ‍್ರತಿಯೊಂದು ಕ್ಷೇತ್ರಕ್ಕೆ 3–4 ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಜೆಡಿಎಸ್ ಪಟ್ಟು ಹಿಡಿದಿದೆ. ಚುನಾವಣಾ ಪ್ರಚಾರಕ್ಕೆ ಅನುಕೂಲವಾಗಲು ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರ ಪ್ರಕಟಿಸುವಂತೆ ನಿತಿನ್ ಅವರಿಗೆ ವಿಜಯೇಂದ್ರ ಮನವಿ ಮಾಡಿದರು.
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಶೀಘ್ರ ಉಪಚುನಾವಣೆ ಘೋಷಣೆಯಾಗುವ ಸಂಭವ ಇದೆ. ಬಾಗಲಕೋಟೆಗೆ ವೀರಣ್ಣ ಚರಂತಿಮಠ ಸೇರಿ ಮೂವರು ಆಕಾಂಕ್ಷಿಗಳು ಹಾಗೂ ದಾವಣಗೆರೆ ದಕ್ಷಿಣಕ್ಕೆ ಐದಾರು ಆಕಾಂಕ್ಷಿಗಳಿದ್ದಾರೆ. ಈ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಶೀಘ್ರ ಆಖೈರು ಮಾಡುವ ಬಗ್ಗೆ ಚರ್ಚೆ ನಡೆಯಿತು.
ರಾಜ್ಯದಲ್ಲಿ ಪಕ್ಷದ ಚಟುವಟಿಕೆಗಳು ಹಾಗೂ ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತಂತೆ ವಿಸ್ತೃತವಾಗಿ ಚರ್ಚಿಸಲಾಯಿತು ಎಂದು ವಿಜಯೇಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.