ADVERTISEMENT

ತಾತನ ಕಾಲದ್ದು, ತಂದೆ ಕಾಲದ್ದು ಅಂತಾ ಅಕ್ರಮ ನಡೆಸುತ್ತೀರಾ? ಕೆಬಿಜಿಗೆ ಬಿವೈವಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 9:44 IST
Last Updated 18 ಡಿಸೆಂಬರ್ 2025, 9:44 IST
<div class="paragraphs"><p>ಬಿ.ವೈ.ವಿಜಯೇಂದ್ರ,&nbsp;ಕೃಷ್ಣ ಬೈರೇಗೌಡ</p></div>

ಬಿ.ವೈ.ವಿಜಯೇಂದ್ರ, ಕೃಷ್ಣ ಬೈರೇಗೌಡ

   

ಬೆಳಗಾವಿ: ‘ಕೋಲಾರ ಜಿಲ್ಲೆಯ ಗರುಡನಪಾಳ್ಯ ಗ್ರಾಮದಲ್ಲಿರುವ 21 ಎಕರೆ 16 ಗುಂಟೆ ಕೆರೆ ಹಾಗೂ ಸ್ಮಶಾನ ಭೂಮಿಯು, ತಮ್ಮ ತಾತನ ಕಾಲದ್ದು, ತಂದೆಯ ಕಾಲದ್ದು ಎಂದು ಹೇಳಿಕೊಂಡು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಕ್ರಮ ನಡೆಸಲು ಕಾನೂನಿನಲ್ಲಿ ಅವಕಾಶವಿದೆಯೆ?’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕೃಷ್ಣ ಬೈರೇಗೌಡ ಅವರು ಸಮಜಾಯಿಷಿ ನೀಡುವ ಮುನ್ನ ಆ ಆಸ್ತಿಯ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕಿತ್ತು. ಕಂದಾಯ ಸಚಿವರಾದ ಅವರಿಗೇ ಅಷ್ಟೂ ಗೊತ್ತಾಗದಿದ್ದರೆ ಹೇಗೆ? ಇದು ಬಹಳ ಗಂಭೀರ ಪ್ರಕರಣ. ಸದನದಲ್ಲಿ ಪ್ರಶ್ನೆ ಮಾಡುವುದು ಖಚಿತ’ ಎಂದರು.

ADVERTISEMENT

‘ಗೃಹಲಕ್ಷ್ಮಿ ಯೋಜನೆಯ ಜವಾಬ್ದಾರಿ ಹೊತ್ತುಕೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಅಪಹಾಸ್ಯಕ್ಕೆ ಈಡಾಗಿದ್ದಾರೆ. ಸದನದಲ್ಲೇ ತಪ್ಪು ಮಾಹಿತಿ ನೀಡಿದ್ದು ಸರಿಯಲ್ಲ. ಮುಂದಿನ ದಿನಗಳಲ್ಲೂ ಇದರ ವಿರುದ್ಧ ಹೋರಾಟ ಮಾಡಲು ಬಿಜೆಪಿ– ಜೆಡಿಎಸ್‌ ಸಭೆಯಲ್ಲಿ ತೀರ್ಮಾನಿಸಿದ್ದೇವೆ’ ಎಂದರು.

‘ಸಿದ್ದರಾಮಯ್ಯ ಔಟ್‌ ಗೋಯಿಂಗ್‌ (ನಿರ್ಗಮಿಸುತ್ತಿರುವ) ಮುಖ್ಯಮಂತ್ರಿ. ತಾನು ಇನ್ನೆಷ್ಟು ದಿನ ಆ ಕುರ್ಚಿಗೆ ಅಂಟಿಕೊಂಡಿರುತ್ತೇನೆ ಎಂಬ ಗೊಂದಲದಲ್ಲಿದ್ದಾರೆ. ಕುರ್ಚಿಗಾಗಿ ಕಾಂಗ್ರೆಸ್ಸಿಗರ ಒಳಜಗಳ ಇನ್ನೂ ಜೀವಂತ ಇದೆ ಎಂಬುದುಕ್ಕೆ ಗುಂಪುಗಾರಿಕೆ ಹಾಗೂ ಡಿನ್ನರ್‌ ಪಾರ್ಟಿಗಳೇ ಸಾಕ್ಷಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೈ ಕಮಾಂಡಿಗಾಗಿ ಖಜಾನೆ ಖಾಲಿ: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ತಮ್ಮ ಹೈ ಕಮಾಂಡಿಗೆ ಹಣ ಸಂದಾಯ ಮಾಡುತ್ತಲೇ ಇದೆ. ಸರ್ಕಾರದ ಖಜಾನೆಯನ್ನು ತಮ್ಮವರಿಗಾಗಿಯೇ ಖಾಲಿ ಮಾಡಿದ್ದಾರೆ. ಈಗ ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವೂ ಇದರಲ್ಲಿ ಒಂದು’ ಎಂದೂ ವಿಜಯೇಂದ್ರ ಆರೋಪಿಸಿದರು.

‘ಗುತ್ತಿಗೆದಾರರಿಂದ ಪರ್ಸಂಟೇಜ್‌ ವಸೂಲಿ ಮಾಡುತ್ತಿರುವ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪತ್ರ ಬರೆದಿದ್ದಾರೆ. ವಸೂಲಿ ಇಲ್ಲದೇ ಈ ಸರ್ಕಾರದಲ್ಲಿ ಯಾವುದೇ ಕೆಲಸಗಳು ಆಗುವುದಿಲ್ಲ. ನೀರಾವರಿ ಯೋಜನೆಗಳೆಲ್ಲ ನನೆಗುದಿಗೆ ಬಿದ್ದಿದ್ದು ಶೇ 10ರಷ್ಟೂ ಪ್ರಗತಿ ಕಂಡಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.