ADVERTISEMENT

ವಿಕಾಸ ಸೌಧ ಕಳಪೆ ಕಾಮಗಾರಿ: 6 ಎಂಜಿನಿಯರ್‌ಗಳಿಂದ ನಷ್ಟ ವಸೂಲಿಗೆ ಮುಂದಾದ ಸರ್ಕಾರ

ರಾಜೇಶ್ ರೈ ಚಟ್ಲ
Published 8 ಜನವರಿ 2026, 2:53 IST
Last Updated 8 ಜನವರಿ 2026, 2:53 IST
ವಿಕಾಸ ಸೌಧ ಪಾರಂಪರಿಕ ಕಟ್ಟಡ!
ವಿಕಾಸ ಸೌಧ ಪಾರಂಪರಿಕ ಕಟ್ಟಡ!   

ಬೆಂಗಳೂರು: ವಿಕಾಸ ಸೌಧ ಕಟ್ಟಡದ ಕಳಪೆ ಕಾಮಗಾರಿಯಿಂದ ಬೊಕ್ಕಸಕ್ಕೆ ಆಗಿರುವ ಕೋಟ್ಯಂತರ ರೂಪಾಯಿ ನಷ್ಟವನ್ನು ಗುತ್ತಿಗೆದಾರರಿಂದ ವಸೂಲು ಮಾಡಲು ಸಾಧ್ಯವಾಗದಿದ್ದರೆ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಬಿ.ಕೆ. ಪವಿತ್ರ ಸೇರಿ ಒಟ್ಟು ಆರು ಎಂಜಿನಿಯರ್‌ಗಳಿಂದ ವಸೂಲಿ ಮಾಡಲು ಸರ್ಕಾರ ಮುಂದಾಗಿದೆ.

ಕಾಮಗಾರಿಗಳ ನಿರ್ವಹಣೆಯಲ್ಲಿ ಕರ್ತವ್ಯಲೋಪ ಎಸಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸುವಂತೆ ಸರ್ಕಾರವು ಲೋಕಾಯುಕ್ತಕ್ಕೆ ಸೂಚಿಸಿತ್ತು. ಲೋಕಾಯುಕ್ತದ ವರದಿ ಹಾಗೂ ಶಿಫಾರಸಿನಂತೆ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.

ಕಟ್ಟಡದ ಕಾಮಗಾರಿ 2001ರಿಂದ 2005ರ ನಡುವೆ ನಡೆದಿತ್ತು. ಆ ಅವಧಿಯಲ್ಲಿ ಕಟ್ಟಡಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದ ಎನ್‌.ಜಿ. ಗೌಡಯ್ಯ ಮತ್ತು ಕಾರ್ಯಪಾಲಕ ಎಂಜಿನಿಯರ್ ಆಗಿದ್ದ ಬಿ.ಕೆ. ಪವಿತ್ರ ಸೇರಿ ಆರು ಎಂಜಿನಿಯರ್‌ಗಳಿಗೆ ದಂಡ ವಿಧಿಸಲಾಗಿದೆ.

ADVERTISEMENT

ಗೌಡಯ್ಯ 2022ರ ಫೆ. 28ರಂದು ನಿವೃತ್ತರಾಗಿದ್ದು, ಪವಿತ್ರ 2028ರ ಜುಲೈ 31ರಂದು ನಿವೃತ್ತರಾಗಲಿದ್ದಾರೆ. ಇಬ್ಬರಿಗೂ ದಂಡ ವಿಧಿಸಿ ಡಿ. 15ರಂದು ಡಿಪಿಎಆರ್ ಆದೇಶ ಹೊರಡಿಸಿದೆ. ಈ ಹಿಂದೆಯೇ ನಿವೃತ್ತರಾಗಿರುವ ಹಿಂದಿನ ಸಹಾಯಕ ಎಂಜಿನಿಯರ್‌ಗಳಾದ ಕೆ. ಶಿವಕುಮಾರ್, ಎನ್‌.ಎಸ್‌. ಸತೀಶ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್‌.ವಿ. ನರಸೇಗೌಡ, ಕಾರ್ಯಪಾಲಕ ಎಂಜಿನಿಯರ್‌ ಸಿ. ವಿರೂಪಾಕ್ಷಪ್ಪ ಅವರಿಗೆ 2021ರ ಜ. 1ರಂದೇ ದಂಡ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಆ ಆದೇಶ ಊರ್ಜಿತದಲ್ಲಿರಲಿದೆ ಎಂದು ಹೊಸ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

‘ವಿಕಾಸ ಸೌಧದ ಕಟ್ಟಡ ಕಾಮಗಾರಿಯನ್ನು ನಿಗದಿತ ತಾಂತ್ರಿಕ ಮಾನದಂಡದ ಅನುಸಾರ ನಿರ್ಮಿಸಿಲ್ಲ. ಕಳಪೆ ಗುಣಮಟ್ಟದಿಂದ ಕೂಡಿದೆ’ ಎಂದು ಆರೋಪಿಸಿ ಎಸ್‌.ಬಿ. ವಿನೋದಕುಮಾರ್, 2006ರ ಅ. 16ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನಲ್ಲಿ ವಾಸ್ತವಾಂಶ ಇರುವುದನ್ನು ತಾಂತ್ರಿಕ ತಂಡ ಪತ್ತೆ ಮಾಡಿದ್ದು, 14 ಎಂಜಿನಿಯರ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ತಮಗೆ ವಹಿಸಬೇಕೆಂದು ಸರ್ಕಾರಕ್ಕೆ 2008ರ ನ. 7ರಂದು ಲೋಕಾಯುಕ್ತರು ವರದಿ ನೀಡಿದ್ದರು.

ಆರೋಪಿಗಳಾದ ಕೆ. ಶಿವಕುಮಾರ್, ಎನ್‌.ಎಸ್‌. ಸತೀಶ, ಆರ್‌.ವಿ. ನರಸೇಗೌಡ, ನರಸಿಂಹಮೂರ್ತಿ, ಬಿ.ವಿ. ರಮೇಶ, ಸಿ. ವಿರೂಪಾಕ್ಷಪ್ಪ, ಎನ್‌.ಜೆ. ಗೌಡಯ್ಯ, ಬಿ.ಕೆ. ಪವಿತ್ರ, ಎಂ. ನಾಗರಾಜ, ಜಿ. ಮುನಿನಾರಾಯಣಸ್ವಾಮಿ, ಸಿ. ಜಯರಾಂ, ಟಿ.ಡಿ. ಮನಮೋಹನ್‌, ವಿಜಯ ರಾಘವನ್, ಪಿ. ಸಿದ್ದಪ್ಪ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಲೋಕಾಯುಕ್ತರಿಗೆ 2009ರ ಜ. 15ರಂದು ಸರ್ಕಾರ ಸೂಚಿಸಿತ್ತು. 

ಈ ಪೈಕಿ, ಜಯರಾಂ ಮತ್ತು ಮನಮೋಹನ್ ಮೊದಲೇ ನಿವೃತ್ತರಾಗಿದ್ದರು. ನಿವೃತ್ತಿಯಾದ ನಾಲ್ಕು ವರ್ಷಗಳ ನಂತರ ದೋಷಾರೋಪ ಪಟ್ಟಿ ಜಾರಿ ಮಾಡಲು ಅವಕಾಶ ಇಲ್ಲದಿರುವುದರಿಂದ ಅವರ ಮೇಲಿನ ವಿಚಾರಣೆ ಕೈಬಿಡಲಾಗಿತ್ತು. ಉಳಿದ 11 ಎಂಜಿನಿಯರ್‌ಗಳ ಪೈಕಿ ಶಿವಕುಮಾರ್‌, ಸತೀಶ, ನರಸೇಗೌಡ, ವಿರೂಪಾಕ್ಷಪ್ಪ, ಗೌಡಯ್ಯ ಮತ್ತು ಪವಿತ್ರ ವಿರುದ್ಧದ ಆರೋಪಗಳು ಸಾಬೀತಾಗಿರುವುದರಿಂದ ದಂಡ ವಿಧಿಸಲು ಲೋಕಾಯುಕ್ತವು ಶಿಫಾರಸು ಮಾಡಿತ್ತು.

ತಮ್ಮ ಮೇಲಿನ ಆರೋಪವನ್ನು ಪ್ರಶ್ನಿಸಿ ಗೌಡಯ್ಯ ಮತ್ತು ಪವಿತ್ರ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅವರಿಬ್ಬರ ಲಿಖಿತ ಹೇಳಿಕೆಗಳನ್ನು ಪರಿಗಣಿಸಿ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್‌ ಆದೇಶಿಸಿತ್ತು. ಆದರೆ, ಅವರ ಹೇಳಿಕೆಗಳನ್ನು ನಿರಾಕರಿಸಿದ್ದ ಸರ್ಕಾರ, ‘ಕಾಮಗಾರಿಯು ಟೆಂಡರ್‌ ನಿಯಮಗಳ ಪ್ರಕಾರ ನಡೆದಿಲ್ಲ. ಕಾಮಗಾರಿಗೆ ಸಂಬಂಧಿಸಿದ ಮಾಪನ ಪುಸ್ತಕದಲ್ಲಿ (ಎಂ.ಬಿ ಬುಕ್‌) ತಪ್ಪು ದಾಖಲೆಗಳನ್ನು ನಮೂದಿಸಿ, ಗುತ್ತಿಗೆದಾರರಿಗೆ ಹಣ ಪಾವತಿಸಿ ನಷ್ಟಕ್ಕೆ ಕಾರಣರಾಗಿದ್ದಾರೆ’ ಎಂದು ನಮೂದಿಸಿ ಲೋಕಾಯುಕ್ತರು ಶಿಫಾರಸು ಮಾಡಿದ್ದ ದಂಡವನ್ನು ಮಾರ್ಪಡಿಸಿ ಡಿಪಿಎಆರ್‌ ಆದೇಶ ಹೊರಡಿಸಿದೆ.

ಯಾರಿಗೆ ಯಾವ ರೀತಿಯ, ಎಷ್ಟು ದಂಡ?

ಕೆ. ಶಿವಕುಮಾರ್, ಎನ್‌.ಎಸ್‌. ಸತೀಶ್, ಆರ್‌.ವಿ. ನರಸೇಗೌಡ ಮತ್ತು ಸಿ. ವಿರೂಪಾಕ್ಷಪ್ಪ ಅವರ ಪಿಂಚಣಿ ಮೊತ್ತದಲ್ಲಿ ಶೇ 25ರಷ್ಟನ್ನು 5 ವರ್ಷ ತಡೆಹಿಡಿಯಲು ಸರ್ಕಾರ 2021ರಲ್ಲಿಯೇ ಆದೇಶ ಹೊರಡಿಸಿದೆ.

ಗೌಡಯ್ಯ ಅವರಿಗೆ ಒಂದು ವಾರ್ಷಿಕ ವೇತನ ಬಡ್ತಿ ತಡೆ ಹಿಡಿಯುವ ಜೊತೆಗೆ 4 ವರ್ಷ ಪಿಂಚಣಿಯಲ್ಲಿ
ಶೇ 25ರಷ್ಟು ತಡೆಹಿಡಿಯಬೇಕು. ಬಿ.ಕೆ. ಪವಿತ್ರ ಅವರ 5 ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿಯಬೇಕು ಎಂದು ಲೋಕಾಯುಕ್ತ 2020ರ ಡಿ. 15ರಂದು ಶಿಫಾರಸು ಮಾಡಿತ್ತು. ಅದನ್ನು ಪರಿಷ್ಕರಿಸಿ, ಗೌಡಯ್ಯ ಅವರಿಗೆ ಪಿಂಚಣಿಯ ಶೇ 25ರಷ್ಟನ್ನು 5 ವರ್ಷ, ಪವಿತ್ರ ಅವರ ಮೂರು ವಾರ್ಷಿಕ ವೇತನ ಬಡ್ತಿ ತಡೆಹಿಡಿಯುವ ಜೊತೆಗೆ 2 ವರ್ಷ ಪಿಂಚಣಿಯ ಶೇ 25ರಷ್ಟು ತಡೆಹಿಡಿಯಬೇಕು ಎಂದು ಆದೇಶ ಹೊರಡಿಸಲಾಗಿದೆ.

ಲೆಕ್ಕಕ್ಕೆ ಸಿಗದ ನಷ್ಟ

ಎಂಜಿನಿಯರ್‌ಗಳಿಂದ ಆಗಿರುವ ಲೋಪದಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿದೆ. ಆದರೆ, ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ಎಷ್ಟು ಕೋಟಿ ರೂಪಾಯಿ ಪಾವತಿಸಲಾಗಿದೆ ಅಥವಾ ನಿಖರವಾಗಿ ಇಂತಿಷ್ಟು ಮೊತ್ತ ನಷ್ಟವಾಗಿದೆ ಎಂದು ವಿಚಾರಣಾಧಿಕಾರಿಗಳು ಸ್ಪಷ್ಟವಾಗಿ ತಿಳಿಸಿಲ್ಲ. ಹೀಗಾಗಿ, ಲೋಕೋಪಯೋಗಿ ಇಲಾಖೆಯು ಆರ್ಥಿಕ ನಷ್ಟವನ್ನು ನಿಖರವಾಗಿ ಲೆಕ್ಕ ಮಾಡಬೇಕು ಎಂದು ಆದೇಶದಲ್ಲಿದೆ. 

ಕಾಮಗಾರಿಯಲ್ಲಿ ಲೋಪವೇನು?:
ಕಟ್ಟಡ ಕಾಮಗಾರಿಯ ಟೆಂಡರ್‌ನಲ್ಲಿ ನಿಗದಿಪಡಿಸಿದ್ದ ಪ್ರಕಾರ ಕಟ್ಟಡಕ್ಕೆ ಏಕರೂಪ, ಗಾತ್ರ ಮತ್ತು ಮೇಲ್ಮೈ ಹೊಂದಿದ್ದ (ಆಶ್ಲರ್‌) ಕಲ್ಲುಗಳನ್ನು ಬಳಸಬೇಕಿತ್ತು. ಆದರೆ, ಕಳಪೆ ಗುಣಮಟ್ಟದ ಕಲ್ಲುಗಳನ್ನು ಬಳಸಲಾಗಿದೆ. ಕಲ್ಲುಗಳ ಮುಖಗಳನ್ನು ಕೆತ್ತಿ ಸಮತಟ್ಟು ಮಾಡದೆ, ಒಂದು ಬದಿಯನ್ನು (ಕಟ್ಟಡ ಮುಂಭಾಗ) ಮಾತ್ರ ಸಮ ಮಾಡಲಾಗಿದೆ. ಕಲ್ಲುಗಳ ಹಿಂಭಾಗಗಳಲ್ಲಿ ಉಬ್ಬುತಗ್ಗುಗಳಿದ್ದು, ಅವುಗಳನ್ನು ಸರಿಪಡಿಸಲು ಸಿಮೆಂಟ್‌ ಉಪಯೋಗಿಸಲಾಗಿತ್ತು ಎಂದು ಲೋಕಾಯುಕ್ತ ವರದಿಯಲ್ಲಿದೆ.