ADVERTISEMENT

ವೀಸಾ ಸಮಸ್ಯೆ: ಆಫ್ರಿಕಾದ ಗಬಾನ್‌ನಲ್ಲಿ ಸಿಲುಕಿದ್ದ 21 ಹಕ್ಕಿಪಿಕ್ಕಿಗಳು ಭಾರತಕ್ಕೆ

ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಎಲ್ಲರೂ ಮಂಗಳವಾರ ದಾವಣಗೆರೆಗೆ ಬರಲಿದ್ದಾರೆ.

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 13:19 IST
Last Updated 24 ಮಾರ್ಚ್ 2025, 13:19 IST
<div class="paragraphs"><p>ವೀಸಾ ಸಮಸ್ಯೆ: ಆಫ್ರಿಕಾದ ಗಬಾನ್‌ನಲ್ಲಿ ಸಿಲುಕಿದ್ದ 21 ಹಕ್ಕಿಪಿಕ್ಕಿಗಳು ಭಾರತಕ್ಕೆ</p></div>

ವೀಸಾ ಸಮಸ್ಯೆ: ಆಫ್ರಿಕಾದ ಗಬಾನ್‌ನಲ್ಲಿ ಸಿಲುಕಿದ್ದ 21 ಹಕ್ಕಿಪಿಕ್ಕಿಗಳು ಭಾರತಕ್ಕೆ

   

ದಾವಣಗೆರೆ: ಆಯುರ್ವೇದ ಗಿಡಮೂಲಿಕೆಗಳ ವ್ಯಾಪಾರಕ್ಕೆ ಆಫ್ರಿಕಾ ರಾಷ್ಟ್ರ ಗಬಾನ್‌ಗೆ ತೆರಳಿದ್ದ ಹಕ್ಕಿಪಿಕ್ಕಿ ಸಮುದಾಯದ 21 ಜನರು ಸೋಮವಾರ ಭಾರತಕ್ಕೆ ಮರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಎಲ್ಲರೂ ಮಂಗಳವಾರ ದಾವಣಗೆರೆಗೆ ಬರಲಿದ್ದಾರೆ.

‘ಗಬಾನ್‌ನ ರಾಜಧಾನಿ ಲಿಬ್ರೆವಿಲ್‌ನಿಂದ ಭಾನುವಾರ ಪ್ರಯಾಣ ಬೆಳೆಸಿದ್ದ ಇವರು ಟರ್ಕಿ ದೇಶದ ಇಸ್ತಾಂಬುಲ್‌ ತಲುಪಿದ್ದರು. ವಿಮಾನ 9 ಗಂಟೆ ವಿಳಂಬವಾಗಿದ್ದರಿಂದ ಸೋಮವಾರ ಬೆಳಿಗ್ಗೆ ಮುಂಬೈಗೆ ಬಂದರು’ ಎಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆರ್. ಪುನೀತ್‌ಕುಮಾರ್ ತಿಳಿಸಿದರು.

ADVERTISEMENT

ಚನ್ನಗಿರಿ ತಾಲ್ಲೂಕಿನ ಗೋಪನಾಳ್‌ ಗ್ರಾಮದ 11 ಹಾಗೂ ಶಿವಮೊಗ್ಗದ ಹಕ್ಕಿಪಿಕ್ಕಿ ಕ್ಯಾಂಪಿನ 10 ಜನರು ಆಯುರ್ವೇದ ಗಿಡಮೂಲಿಕೆಗಳ ಮಾರಾಟಕ್ಕೆ ಗಬಾನ್‌ಗೆ ತೆರಳಿದ್ದರು. ಒಂದೂವರೆ ವರ್ಷದಿಂದ ಅಲ್ಲಿಯೇ ನೆಲೆಸಿದ್ದ ಅವರ ವೀಸಾ ವಿಸ್ತರಣೆಯಲ್ಲಿ ತೊಂದರೆ ಉಂಟಾಗಿತ್ತು. ವೀಸಾ ವ್ಯವಸ್ಥೆ ಮಾಡಿಕೊಟ್ಟಿದ್ದ ಗಬಾನ್‌ ದೇಶದ ಏಜೆಂಟ್‌ ಬಂಧಿಸಿದ ಅಲ್ಲಿನ ಪೊಲೀಸರು, ಅಕ್ರಮವಾಗಿ ನೆಲೆಸಿದ ಆರೋಪದ ಮೇರೆಗೆ ಹಕ್ಕಿಪಿಕ್ಕಿ ಸಮುದಾಯದವರನ್ನೂ ವಶಕ್ಕೆ ಪಡೆದಿದ್ದರು.

‘ಪ್ರತಿಯೊಬ್ಬರಿಗೂ ₹ 70 ಸಾವಿರದಿಂದ ₹ 80 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಿದ ಬಳಿಕ ದೇಶದಿಂದ ಹೊರನಡೆಯಲು ಸೂಚಿಸಲಾಯಿತು. ಈ ಕುರಿತು ಭಾರತೀಯ ರಾಯಬಾರ ಕಚೇರಿಗೆ ಮಾಹಿತಿ ನೀಡಿದರೂ ಸರಿಯಾಗಿ ಸ್ಪಂದಿಸಲಿಲ್ಲ’ ಎಂದು ಪುನೀತ್‌ಕುಮಾರ್ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.