ADVERTISEMENT

ವಿಶ್ವಾಸ ಯಾಚನೆ | ‘ಅಂತಿಮ ಘಟ್ಟ’ ಎಂದ ಶೆಟ್ಟರ್‌; ಗೆಲ್ಲುವ ವಿಶ್ವಾದಲ್ಲಿ‘ಮೈತ್ರಿ’

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 10:59 IST
Last Updated 15 ಜುಲೈ 2019, 10:59 IST
   

ಬೆಂಗಳೂರು:ಸರ್ಕಾರ ಉಳಿಸಿಕೊಳ್ಳು ಕಸರತ್ತು ನಡೆಸಿರುವ ಮೈತ್ರಿ ನಾಯಕರು ವಿಶ್ವಾಸ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾದಲ್ಲಿದ್ದಾರೆ. ಅತ್ತ, ವಿರೋಧ ಪಕ್ಷದ ನಾಯಕರು ಸರ್ಕಾರ ಸತ್ತೋಗಿದೆ, ಐಸಿಯುನಲ್ಲಿದ್ದು, ವಿಶ್ವಾಸ ಯಾಚನೆ ಎಂಬುದು ‘ಅಂತಿಮ ಘಟ್ಟ’ ಎಂದು ಟೀಕಿಸಿದ್ದಾರೆ.

ಸೋಮವಾರ ವಿಧಾನಸಭೆ ಕಲಾಪವನ್ನು ಗುರುವಾರಕ್ಕೆ ಮುಂದೂಡಿದ ಬಳಿಕ ಸದನದಿಂದ ಹೊರ ಬಂದ ನಾಯಕರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರದು.

‘ಅಸಮಾಧಾನಿತರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಮತ್ತು ಸಿಎಂಗೆ ನೈತಿಕತೆ ಇಲ್ಲ. ಅವರು ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಆದರೆ, ಅವರು ಅದನ್ನು ಮಾಡಿಲ್ಲ. ಅವರ ವಿಶ್ವಾಸ ಗೆಲ್ಲುವುದಿಲ್ಲ. ಸರ್ಕಾರ ಸತ್ತೋಗಿದೆ. ಐಸಿಯುನಲ್ಲಿದೆ. ವಿಶ್ವಾಸಮತ ಅಂತಿಮ ಘಟ್ಟ ಮಾತ್ರ. ಗುರುವಾರ ಸರ್ಕಾರ ಬಿದ್ದೋಗಲಿದೆ’ ಎಂದು ಬಿಜೆಪಿ ಮುಖಂಡ ಜಗದೀಶ ಶೆಟ್ಟರ್‌ ಹೇಳಿದರು.

ADVERTISEMENT

‘ನಮಗೆ ರಿವರ್ಸ್‌ ಆಪರೇಷನ್‌ ಭಯವಿಲ್ಲ. ಈ ವಿಷಯವನ್ನು ಅವರು ಐದಾರು ತಿಂಗಳಿಂದ ಹೇಳುತ್ತಿದ್ದಾರೆ. ಅದನ್ನು ಅವರಿಂದ ಮಾಡಲು ಸಾಧ್ಯವಿಲ್ಲ. ರಿವರ್ಸ್ ಆಪರೇಷನ್, ಮತ್ತೊಂದನ್ನು ಬಿಡಿ. ನಿಮ್ಮ ಮನೆಯನ್ನು ನೀವು ಸರಿಮಾಡಿಕೊಳ್ಳಿ’ ಎಂದು ಶೆಟ್ಟರ್‌ ಮೈತ್ರಿ ಮುಖಂಡರಿಗೆ ಸಲಹೆ ನೀಡಿದರು.

‌ವಿಶ್ವಾಸ ಗೆಲ್ಲುತ್ತೇವೆ: ಈಶ್ವರ್‌ ಖಂಡ್ರೆ

‘ಆಡಳಿತ ಮತ್ತು ವಿರೋಧ ಪಕ್ಷದ ಮುಖಂಡರನ್ನು ಕರೆಸಿ ಸ್ಪೀಕರ್‌ ಮಾತನಾಡಿದ್ದಾರೆ. ಗುರುವಾರ ವಿಶ್ವಾಸ ಮತ ಯಾಚನೆಯಲ್ಲಿ ನಾವು ಯಶಸ್ವಿಯಾಗುತ್ತೇವೆ. ಕಾದು ನೋಡಿ. ಮುಂಬೈನಲ್ಲಿರುವವರು ಮೊನ್ನೆ ಮೊನ್ನೆವರೆಗೆ ಇಲ್ಲೇ ಇದ್ದರು. ಈಗ ಮುಂಬೈಗೆ ಹೋಗಿದ್ದಾರೆ ಅಷ್ಟೆ. ಅವರು ಇಲ್ಲಿಗೇ ಬರಬೇಕಲ್ವಾ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹೇಳಿದರು.

ವಿಪ್‌ ಇದೆ, ಉಲ್ಲಂಘನೆ ಮಾಡುವಂತಿಲ್ಲ: ಡಿಕೆಶಿ

‘ವಿಶ್ವಾಸ ಮತ ಯಾಚನೆಗೆ ನಾವು ರೆಡಿ ಇದ್ದೇವೆ. ಗುರುವಾರ ಬೆಳಿಗ್ಗೆ 11ಕ್ಕೆ ಕಲಾಪದಲ್ಲಿ ವಿಶ್ವಾಸ ಗೆಲ್ಲುತ್ತೇವೆ. ವಿಪ್‌ ಇದೆ, ಯಾರೂ ಉಲ್ಲಂಘನೆ ಮಾಡುವಂತಿಲ್ಲ’ ಎಂದಷ್ಟೇ ಹೇಳಿದ ಸಚಿವ ಡಿ.ಕೆ.ಶಿವಕುಮಾರ್‌, ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.