ವಿಜಯಪುರ: ‘ವಕ್ಫ್ ವಿರುದ್ಧದ ಹೋರಾಟ ಕೈಬಿಟ್ಟು ತಕ್ಷಣ ದೆಹಲಿಗೆ ಬರುವಂತೆ ನನಗೆ ಪಕ್ಷದ ವರಿಷ್ಠರಿಂದ ಕರೆ ಬಂದಿತ್ತು. ಆದರೆ, ನಾನು ಬರುವುದಿಲ್ಲ, ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದೇನೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಕ್ಫ್ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ನಾವೊಂದು ತಂಡ ಮಾಡಿಕೊಂಡು ಹೋರಾಟ ಮಾಡುತ್ತಿದ್ದೇವೆ. ಬೇಕಾದರೆ ಇಡೀ ನಮ್ಮ ತಂಡವನ್ನು ದೆಹಲಿಗೆ ಕರೆಯಿಸಿ, ನಾವು ಏನು ಹೇಳಬೇಕೋ ಎಲ್ಲವನ್ನು ಹೇಳುತ್ತೇವೆ ಎಂದು ಉತ್ತರಿಸಿದ್ದೇನೆ’ ಎಂದರು.
‘ದೆಹಲಿಗೆ ಕೇವಲ ಯತ್ನಾಳ ಒಬ್ಬನನ್ನೇ ಕರೆಯಿಸಿ ಸಮಾದಾನ ಮಾಡಬಹುದು, ಬೆದರಿಸಬಹುದು ಎಂದು ತಿಳಿದುಕೊಂಡಿದ್ದರೆ ನಾನು ಯಾವುದಕ್ಕೂ ಬೆದರುವುದಿಲ್ಲ, ಕ್ಷಮಾಪಣೆ ಕೇಳುವುದಿಲ್ಲ, ನಾನು ಇದುವರೆಗೆ ಮಾತನಾಡಿರುವ ಒಂದೇ ಒಂದು ಶಬ್ಧವನ್ನೂ ವಾಪಸ್ ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿದರು.
‘ನಾವು ರೈತರ ಸಲುವಾಗಿ, ಮಠ–ಮಂದಿರಗಳ ಸಲುವಾಗಿ ಹೋರಾಟ ನಡೆಸುತ್ತಿದ್ದೇವೆ. ಯಾವುದೇ ರಾಜಕೀಯ ಉದ್ದೇಶ ಇಲ್ಲ. ಜನರ ಸಲುವಾಗಿ ಹೋರಾಟ ಮಾಡುತ್ತಿದ್ದೇವೆಯೇ ಹೊರತು ನಾವು ಎಲ್ಲಿಯೂ ಬಿಜೆಪಿ ವಿರುದ್ಧವಾಗಲಿ, ಯಡಿಯೂರಪ್ಪ ಕುಟುಂಬದ ವಿರುದ್ಧವಾಗಲಿ ಅಥವಾ ಯಡಿಯೂರಪ್ಪ ಮಾಡಿರುವ ಭ್ರಷ್ಟಾಚಾರದ ವಿರುದ್ಧವಾಗಲಿ ಹೋರಾಟ ಮಾಡುತ್ತಿಲ್ಲ’ ಎಂದು ಹೇಳಿದರು.
‘ಬೀದರ್‌ನಿಂದ ಆರಂಭವಾಗಿರುವ ನಮ್ಮ ಹೋರಾಟಕ್ಕೆ ಎಲ್ಲೂ ಅಪಸ್ವರ ವ್ಯಕ್ತವಾಗಿಲ್ಲ. ಯಾರಿಂದಲೂ ಅಪಮಾನ ಆಗಿಲ್ಲ. ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನಮ್ಮ ಹೋರಾಟ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಬಿಜೆಪಿ ಹೈಕಮಾಂಡ್ ಗಮನಿಸುತ್ತಿದೆ. ನನ್ನ ವಿರುದ್ಧ ಯಾವುದೇ ಕ್ರಮ ಆಗಲ್ಲ, ಯಾರೂ ಗಾಬರಿಯಾಗುವುದು ಬೇಡ’ ಎಂದರು.
‘ಕಾಂಗ್ರೆಸ್‌ನಿಂದ ಲಾಭ ಪಡೆದುಕೊಂಡು ಯತ್ನಾಳ ಹೋರಾಟ ಮಾಡುತ್ತಿದ್ದಾರೆ’ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಯತ್ನಾಳ, ನಾನು ಎಂದೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮನೆಗೆ ಕಾಲಿಟ್ಟಿಲ್ಲ. ನನ್ನಪರವಾಗಿ ಏನಾದರೂ ಮಾಡಿ ಎಂದು ಯಾರ ಬಳಿಯೂ ಅಂಗಲಾಚಿಲ್ಲ. ನನ್ನ ಬಗ್ಗೆ ಮಾತನಾಡುವುದಿದ್ದರೆ ಸತ್ಯ ಮಾತನಾಡಲಿ, ಇಲ್ಲವೇ ಬಾಯಿ ಮುಚ್ಚಿಕೊಂಡು ಇರಲಿ, ಈ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು.
‘ಕಾಂಗ್ರೆಸ್ ಜೊತೆ ನಾನು ಕೈಜೋಡಿಸಿದ್ದೇನೆ ಎಂದು ಆರೋಪ ಮಾಡುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಹೋಗಿ 20 ಪತ್ರಗಳಿಗೆ ಸಹಿ ಮಾಡಿಸಿಕೊಂಡು ಬಂದಿದ್ದಾನೆ. ಈ ಬಗ್ಗೆ ನನ್ನ ಬಳಿ ವಿಡಿಯೋ ಇದೆ’ ಎಂದರು.
‘ವಂಶವಾದ, ಭ್ರಷ್ಟಚಾರದ ವಿರುದ್ಧ ನನ್ನ ಹೋರಾಟ. ಯಡಿಯೂರಪ್ಪ ಅವರನ್ನು ಪಕ್ಷ ನಾಲ್ಕು ಬಾರಿ ಮುಖ್ಯಮಂತ್ರಿ ಮಾಡಿದೆ, ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇನ್ನೂ ನಾನು ಸೈಕಲ್‌ನಲ್ಲಿ ಓಡಾಡಿದ್ದೇನೆ, ಪಕ್ಷ ಕಟ್ಟಿದ್ದೇನೆ ಎಂದು ಹೇಳಿದರೆ ಹೇಗೆ? ನಾವೇನು ಅಂಬಾಸಿಡರ್ ಕಾರಿನಲ್ಲಿ ಓಡಾಡಿದ್ದೇವೆಯೇ? ನಾವು ಕೂಡ ಸೈಕಲ್‌ನಲ್ಲಿ ಓಡಾಡಿ ಪಕ್ಷ ಕಟ್ಟಿದ್ದೇವೆ’ ಎಂದರು.
‘ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜ್ಯಕ್ಕೆ ಬರುತ್ತಿರುವುದು ಸ್ವಾಗತಾರ್ಹ. ನನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಇದ್ದರೆ ದೂರು ಕೊಡುವವರು ಕೊಡಲಿ’ ಎಂದರು.
ಪ್ರಾಮಾಣಿಕರು ರಾಜ್ಯಧ್ಯಕ್ಷರಾಗಲಿ:
‘ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಆಗುವುದಿದ್ದರೆ ಅವರ ಇಡೀ ತಂಡ ಹೋಗಬೇಕು, ಒಬ್ಬ ಒಳ್ಳೆಯ ಪ್ರಾಮಾಣಿಕ, ಯಾವುದೇ ಒಬ್ಬ ವ್ಯಕ್ತಿಗೆ ಬಲಿಯಾಗದೇ ಇರುವವರು ರಾಜ್ಯಧ್ಯಕ್ಷರಾಗಲಿ. ವರಿಷ್ಠರು ಎಲ್ಲರ ಅಭಿಪ್ರಾಯ ತೆಗೆದುಕೊಂಡು ಹೊಸಬರನ್ನು ಬಿಜೆಪಿ ರಾಜ್ಯ ಘಟಕಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು, ಯಾರನ್ನೂ ತಂದು ಹೇರಿದರೆ ಒಪ್ಪಿಕೊಳ್ಳುವುದಿಲ್ಲ’ ಎಂದರು.
‘ವಂಶವಾದ, ಭ್ರಷ್ಟಾಚಾರದ ವ್ಯಕ್ತಿಗಳನ್ನು ದೇಶದ ಯಾವುದೇ ರಾಜ್ಯದಲ್ಲಿ ಇರಲಿ ಕಿತ್ತೊಗೆಯಬೇಕು. ಅಂದಾಗ ಮಾತ್ರ ಪ್ರಧಾನಿ ಮೋದಿ ಅವರ ಮಾತಿಗೆ ಗೌರವ’ ಬರುತ್ತದೆ ಎಂದರು.
ಹೋರಾಟ ನಿಶ್ಚಿತ:
‘ಲಿಂಗಾಯತರನ್ನು ಕೇಂದ್ರ ಸರ್ಕಾರ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು, ರಾಜ್ಯದಲ್ಲಿ ಪಂಚಮಸಾಲಿಗಳನ್ನು 2ಎ ಗೆ ಸೇರ್ಪಡೆ ಮಾಡಬೇಕು. ನಮ್ಮ ಹೋರಾಟಕ್ಕೆ ಯಾರು ಬರಲಿ, ಬಿಡಲಿ ಈ ನಿಟ್ಟಿನಲ್ಲಿ ಡಿಸೆಂಬರ್ 10ರಂದು ಬೆಳಗಾವಿಯಲ್ಲಿ ಹೋರಾಟ ನಿಶ್ಚಿತ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.