ADVERTISEMENT

ಗ್ಯಾರಂಟಿ: ಕೈ–ಕಮಲ ಏಟು ಎದಿರೇಟು

ಹೆಣ್ಣು ಮಕ್ಕಳಿಗೆ ಉಚಿತ ಕೊಡುವುದನ್ನು ವಿರೋಧ ಮಾಡುತ್ತೀರಾ?: ಸಿಎಂ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ವಿಧಾನ ಪರಿಷತ್‌ನ ಬುಧವಾರದ ಕಲಾಪದಲ್ಲಿ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಮುಂದೆ  ಧರಣಿ ನಡೆಸಿದರು –ಪ್ರಜಾವಾಣಿ ಚಿತ್ರ
ವಿಧಾನ ಪರಿಷತ್‌ನ ಬುಧವಾರದ ಕಲಾಪದಲ್ಲಿ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಮುಂದೆ  ಧರಣಿ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ನಿಲುವಳಿ ಸೂಚನೆಯಡಿ ಚರ್ಚೆಗೆ ಪಟ್ಟು ಹಿಡಿದು ಮಂಗಳವಾರ ವಿಧಾನಸಭೆಯಲ್ಲಿ ಧರಣಿ ನಡೆಸಿದ್ದ ಬಿಜೆಪಿ ಸದಸ್ಯರಿಗೆ ಈ ಕುರಿತು ಆರಂಭಿಕ ವಿಷಯ ಮಂಡಿಸಲು ಸಭಾಧ್ಯಕ್ಷ ಯು.ಟಿ.ಖಾದರ್‌ ಬುಧವಾರ ಅವಕಾಶ ನೀಡಿದರು. ಆದ್ದರಿಂದ ಬಿಜೆಪಿ ಸದಸ್ಯರು ಧರಣಿ ಕೈಬಿಟ್ಟರು. ಆರ್.ಅಶೋಕ ವಿಷಯ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಸದಸ್ಯರ ಸ್ವಾರಸ್ಯಕರ ಮಾತುಗಳು ಹೀಗಿದ್ದವು–

3 ದಿನವಾದರೂ ವಿಪಕ್ಷ ನಾಯಕನಿಲ್ಲ: ಸಿದ್ದರಾಮಯ್ಯ

* ಮೂರು ದಿನ ಆಯ್ತು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆಗದೇ ಈಗ ಬುರುಡೆ ಹೊಡೆಯುತ್ತಿದ್ದೀರಿ. ಅವರಿಗೆ ಆರಂಭಿಕ ಮಾತುಗಳಿಗೂ ಅವಕಾಶ ಕೊಡಬಾರದಾಗಿತ್ತು. ಹೆಣ್ಣು ಮಕ್ಕಳಿಗೆ ಉಚಿತ ಕೊಡುವುದನ್ನು ವಿರೋಧ ಮಾಡುತ್ತೀರಾ?

ADVERTISEMENT

* ಅಶೋಕ ಮಾತನಾಡುವಾಗ ಉಳಿದರು ಎಕೆ ಎದ್ದು ನಿಂತು ಮಾತನಾಡುತ್ತೀರಿ? ಅವರಿಗೆ ಸಾಮರ್ಥ್ಯ ಇದೆ. ಎಲ್ಲ ಎದ್ದು ನಿಂತರೂ ನಾನು ಹೆದರೊಲ್ಲ. ಜನ ನಿಮ್ಮ ವಿರುದ್ಧ ತೀರ್ಪು ನೀಡಿದ್ದರೂ ನಿಮಗೆ ಬುದ್ದಿ ಬಂದಿಲ್ಲ.

*ಸರ್ಕಾರಿ ಎಕ್ಸ್‌ಪ್ರೆಸ್‌ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಓಡಾಡಲು ಅವಕಾಶ ಕೊಟ್ಟಿದ್ದೇವೆ. 2018 ರ ನಿಮ್ಮ ಪ್ರಣಾಳಿಕೆ ನೀಡಿದ್ದ ಭರವಸೆಯಲ್ಲಿ ಎಷ್ಟು ಈಡೇರಿಸಿದ್ದೀರಿ?

* ನೀವು ಏನೇ ಹೇಳಿದರೂ ಎಷ್ಟೇ ಗದ್ದಲ ಮಾಡಿದರೂ ನಾವು ನೂರಕ್ಕೆ  ನೂರು ಪ್ರತಿಶತ ಇದೇ ಆರ್ಥಿಕ ವರ್ಷದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ.

ಗ್ಯಾರಂಟಿ ಕಾರ್ಡಿನಲ್ಲಿ ಹೇಳಿದ್ದನ್ನು ಮಾಡಿ: ಅಶೋಕ

* ಸರ್ಕಾರ ಬಂದ 24 ಗಂಟೆಗಳಲ್ಲಿ ಯಾವುದೇ ಷರತ್ತುಗಳಿಲ್ಲದೇ ಐದೂ ಉಚಿತ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಈಗ ಷರತ್ತುಗಳನ್ನು ಒಡ್ಡುತ್ತಿದ್ದೀರಿ. ನಾವು ಉಚಿತ ಕೊಡುವುದಕ್ಕೆ ವಿರೋಧ ಇಲ್ಲ. ಆದರೆ, ನೀವು ಗ್ಯಾರಂಟಿ ಕಾರ್ಡ್‌ನಲ್ಲಿ ಏನು ಹೇಳಿದ್ದೀರೋ ಅದನ್ನು ಅಕ್ಷರಶಃ ಪಾಲನೆ ಮಾಡಿ.

* ಎಲ್ಲ ಮಹಿಳೆಯರು ಬಸ್ಸುಗಳಲ್ಲಿ ಉಚಿತ ಓಡಾಡುತ್ತಾರೆ ಎಂದು ಬೇಕೆಂದೇ ಬಸ್‌ಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಸುಮಾರು 2,444 ಬಸ್ಸುಗಳು ಓಡಾಡುತ್ತಿಲ್ಲ. ನಿಮ್ಮ ಮೂಲ ಭರವಸೆಯಂತೆ ರಾಜಹಂಸ, ಎಸಿ, ಐರಾವತ ಬಸ್ಸುಗಳಲ್ಲೂ ಉಚಿತಕ್ಕೆ ಅವಕಾಶ ನೀಡಿ. ಈ ಬಸ್ಸುಗಳಲ್ಲೂ ಅವಕಾಶ ಕೊಡಿ ಎಂದು ಸುದ್ದಿಗೋಷ್ಠಿಯಲ್ಲಿ ಸಿದ್ರಾಮಣ್ಣನೇ ಹೇಳಿದ್ದರಲ್ಲ.

* ರಾಹುಲ್‌ಗಾಂಧಿ ಅವರನ್ನು ಕರೆಯಿಸಿ  ಯುವನಿಧಿ ಚಾಲನೆ ನೀಡಿ ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ ನೀಡುವುದಾಗಿ ಹೇಳಿ ಈಗ 2022–23 ನೇ ಸಾಲಿನಲ್ಲಿ ಪದವಿ ಪೂರ್ಣಗೊಳಿಸಿ ಆರು ತಿಂಗಳು ಕೆಲಸ ಸಿಗದವರಿಗೆ ಮಾತ್ರ ನೀಡುತ್ತೇವೆ ಎನ್ನುತ್ತೀರಿ, ಇದು ಮೋಸ ಅಲ್ಲವೇ.

* ಬಸ್‌ಗಳಲ್ಲಿ ಕಿಟಿಕಿಗಳ ಮೂಲಕ ತೂರಿಕೊಂಡು ಹೋಗುವ ಸ್ಥಿತಿ ಸೃಷ್ಟಿ ಮಾಡಿದಿರಿ. ಆಟೋ ರಿಕ್ಷಾ ಚಾಲಕರಿಗೆ ಆದಾಯವೇ ಇಲ್ಲದೇ ಸಿದ್ದರಾಮಯ್ಯ ಅವರಿಗೆ ಶಾಪ ಹಾಕುತ್ತಿದ್ದಾರೆ.

ಸುಮಾರು 60 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಆ ಮಹಿಳೆಯರ ಆಶೀರ್ವಾದ ಸಿದ್ದರಾಮಯ್ಯ ಮೇಲಿದೆ
ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವ
ಬಿಜೆಪಿಯವರದು ಪಶ್ಚಾತ್ತಾಪದ ಪ್ರತಿಭಟನೆ. ಅಗತ್ಯ ವಸ್ತುಗಳ ವಿರುದ್ಧ ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ಮೋದಿ ವಿರುದ್ಧ ಪ್ರತಿಭಟನೆ ಮಾಡಲಿ. ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸದ ಕಾರಣ ಎಲ್ಲ ವಸ್ತುಗಳ ಬೆಲೆ ಏರಿದೆ
ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ

’ಗ್ಯಾರಂಟಿ’: ಪರಿಷತ್‌ನಲ್ಲಿ ಬಿಜೆಪಿ ಧರಣಿ ವಾಪಸ್‌

ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನದ ಕುರಿತು ಬುಧವಾರವೂ ವಿಧಾನ ಪರಿಷತ್‌ನಲ್ಲಿ ಧರಣಿ ನಡೆಸಿದ ಬಿಜೆಪಿ ಸದಸ್ಯರು ಸಭಾಪತಿ ಭರವಸೆ ಮೇರೆಗೆ ವಾಪಸ್‌ ಪಡೆದರು. ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ‘ಗ್ಯಾರಂಟಿ’ಗಳ ಅನುಷ್ಠಾನದ ಮೇಲೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸದಸ್ಯರು ಪಟ್ಟು ಹಿಡಿದು ಸಭಾಪತಿ ಪೀಠದ ಮುಂದೆ ಧರಣಿ ನಡೆಸಿ ಘೋಷಣೆಗಳನ್ನು ಹಾಕಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ‘ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಅಸಮರ್ಥರಾಗಿರುವ ಬಿಜೆಪಿ ಸದಸ್ಯರು ವಿನಾಕಾರಣ ಧರಣಿ ನಡೆಸುತ್ತಿದ್ದಾರೆ. ಇದು ಶೋಭೆ ತರುವುದಿಲ್ಲ’ ಎಂದು ಕಿಡಿಕಾರಿದರು.

ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದ್ದರಿಂದ ಕಲಾಪವನ್ನು 10 ನಿಮಿಷ ಮುಂದೂಡಲಾಯಿತು. ಮತ್ತೆ ಕಲಾಪ ಸೇರಿದಾಗಲೂ ಧರಣಿ ಮುಂದುವರಿಯಿತು. ‘ಈ ವಿಷಯದ ಕುರಿತು ಗುರುವಾರ ಮತ್ತೊಮ್ಮೆ ನಿಲುವಳಿ ಸೂಚನೆ ಸಲ್ಲಿಸುತ್ತೇವೆ. ಚರ್ಚೆಗೆ ಅವಕಾಶ ನೀಡಬೇಕು’ ಎಂದು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರ ಸಭಾಪತಿ ಅವರನ್ನು ಕೋರಿದರು. ಈ ಬಗ್ಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ ಬಳಿಕ ಬಿಜೆಪಿ ಸದಸ್ಯರು ಧರಣಿ ವಾಪಸ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.