ADVERTISEMENT

ನಾಟಕದಲ್ಲಿ ಅಂಬೇಡ್ಕರ್ ಅವಹೇಳನ| ಯಾರನ್ನಾದರೂ ಹಾಸ್ಯ ಮಾಡುವ ಹಕ್ಕು ಇರಬೇಕು: ಚೇತನ್

ರಾಮ, ಮಹಮ್ಮದ್, ಬಸವ, ಅಂಬೇಡ್ಕರ್, ದಲಿತರ ವಿರುದ್ಧದ ಹಾಸ್ಯ ಅಪರಾಧವೆನ್ನುವುದು ಪ್ರಜಾಪ್ರಭುತ್ವವಲ್ಲ ಎಂದು ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 11:38 IST
Last Updated 12 ಫೆಬ್ರುವರಿ 2023, 11:38 IST
   

ಬೆಂಗಳೂರು: ’ರಾಮ, ಮಹಮ್ಮದ್, ಬಸವ, ಅಂಬೇಡ್ಕರ್, ದಲಿತರ ವಿರುದ್ಧ 'ಹಾಸ್ಯ'ವನ್ನು ಅಪರಾಧ ಎನ್ನುವುದು ಪ್ರಜಾಪ್ರಭುತ್ವವಲ್ಲ’ ಎಂದು ನಟ ಚೇತನ್‌ ಅಹಿಂಸಾ ಅವರು ಅವರು ಪ್ರತಿಪಾದಿಸಿದ್ದಾರೆ.

ಬೆಂಗಳೂರಿನ ಜೈನ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿರುನಾಟಕದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ಅವಹೇಳನ ಮಾಡಿ, ಜಾತಿ ನಿಂದನೆ ಮಾಡಿದ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ರಾಜ್ಯದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ನಾಟಕದಲ್ಲಿ ಅಭಿನಯಿಸಿದ ಎಲ್ಲ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿರುವ ವಿಶ್ವವಿದ್ಯಾಲಯವು ತನಿಖೆಗೆ ಶಿಸ್ತು ಸಮಿತಿ ರಚಿಸಿದೆ. ಇನ್ನೊಂದೆಡೆ ವಿದ್ಯಾರ್ಥಿಗಳ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಈ ಬಗ್ಗೆ ಇಂದು (ಭಾನುವಾರ) ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಚೇತನ್‌, ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದಾರೆ.

‘ಬಲಿಷ್ಠ ಪ್ರಜಾಪ್ರಭುತ್ವಕ್ಕಾಗಿ ಯಾವುದನ್ನಾದರೂ ಮತ್ತು ಯಾರನ್ನಾದರೂ ತಮಾಷೆ ಮಾಡುವ ಹಕ್ಕು ನಮಗಿರಬೇಕು. ಮೋದಿಯನ್ನು ಹಾಸ್ಯ ಮಾಡುವ ಸ್ಟ್ಯಾಂಡ್-ಅಪ್ ಕಾಮಿಕ್‌ ಮತ್ತು ನಾಟಕಗಳನ್ನು ನಾವು ಹೇಗೆ ಸೆನ್ಸಾರ್ ಮಾಡಬಾರದೋ, ರಾಮ, ಮಹಮ್ಮದ್, ಬಸವ, ಅಂಬೇಡ್ಕರ್, ದಲಿತರ ವಿರುದ್ಧ 'ಹಾಸ್ಯ'ವನ್ನು ಅಪರಾಧ ಎಂದು ಭಾವಿಸಬಾರದು. ಅದು ಪ್ರಜಾಪ್ರಭುತ್ವವಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜತೆಗೆ, ಜೈನ್ ವಿಶ್ವವಿದ್ಯಾಲಯದ 6 ವಿದ್ಯಾರ್ಥಿಗಳ ಮೇಲೆ ಹಾಕಲಾಗಿರುವ ಎಫ್‌ಐಆರ್‌ ಮತ್ತು ಅವರಿಗೆ ವಿಧಿಸಲಾಗಿರುವ ಅಮಾನತು ಶಿಕ್ಷೆ ವಾಕ್‌ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಫೆ.6ರಂದು ವಿಶ್ವವಿದ್ಯಾಲಯದ ಸಿಎಂಎಸ್‌ (ಸೆಂಟರ್‌ ಫಾರ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌) ವಿಭಾಗವು ‘ಯುವಜನೋತ್ಸವ’ ಆಯೋಜಿಸಿತ್ತು. ಅಲ್ಲಿ ಪ್ರದರ್ಶಿಸಿದ್ದ ಕಿರುನಾಟಕದಲ್ಲಿ ಅಂಬೇಡ್ಕರ್‌ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ದಸಂಸ ಮುಖಂಡರು ರಾಜ್ಯದ ಹಲವು ಠಾಣೆಗಳಿಗೆ ದೂರು ನೀಡಿದ್ದಾರೆ. ದೂರಿನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನೀಡಿದ್ದ ದೂರಿನ ಅನ್ವಯ ವಿಶ್ವವಿದ್ಯಾಲಯದ ಪ್ರಾಂಶುಪಾಲ, ವಿಭಾಗದ ಮುಖ್ಯಸ್ಥ, ಕಾರ್ಯಕ್ರಮ ಸಂಘಟಕ, ಕಿರುನಾಟಕದ ರಚನೆಕಾರ, ಅಭಿನಯಿಸಿದ ವಿದ್ಯಾರ್ಥಿಗಳ ವಿರುದ್ಧ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಬಿಎಸ್‌‌ಪಿ ಹಾಗೂ ಸಾಮಾಜಿಕ ಹೋರಾಟಗಾರರು ಮಹಾರಾಷ್ಟ್ರದ ಕೆಲವು ಪೊಲೀಸ್‌ ಠಾಣೆಗಳಿಗೂ ದೂರು ನೀಡಿದ್ದಾರೆ.

‘ರಾಷ್ಟ್ರ ನಾಯಕರಿಗೆ ಅವಮಾನ ಎಸಗಿದ್ದು, ಉದ್ದೇಶಪೂರ್ವಕವಾಗಿ ಜಾತಿನಿಂದನೆ ಮಾಡಲಾಗಿದೆ. ಆಡಳಿತ ಮಂಡಳಿ ಹಾಗೂ ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯೇ ಕ್ರಮ ಆಗಬೇಕು’ ಎಂದು ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ಆಗ್ರಹಿಸಿದ್ದಾರೆ.

‘ನಾಟಕ ಪ್ರದರ್ಶನಕ್ಕೂ ಮುನ್ನ ವಿದ್ಯಾರ್ಥಿಗಳು ಹಲವು ದಿನ ಅಭ್ಯಾಸ ನಡೆಸಿದ್ದಾರೆ. ನಂತರವೂ ಅನುಮತಿ ನೀಡಲಾಗಿದೆ. ಇದರ ಅರ್ಥ ಏನು? ಅಂಬೇಡ್ಕರ್‌ ಅವರಿಗೆ ಅವಮಾನ ಆಗುವಂತೆ ಎಲ್ಲರೂ ನಗುತ್ತಾರೆ. ಅದು ವಿಡಿಯೊದಲ್ಲಿ ಸೆರೆಯಾಗಿದೆ. ಸರ್ಕಾರಕ್ಕೂ ಈ ರೀತಿಯ ಮನಸ್ಥಿತಿಗಳೇ ಬೇಕಾಗಿವೆ. ಸಂಘಟನೆಗಳು ದೂರು ನೀಡಿದ್ದರೂ ಎಫ್‌ಐಆರ್ ದಾಖಲಿಸದೇ ಎನ್‌ಸಿಆರ್‌ ಮಾತ್ರ ಮಾಡಲಾಗಿದೆ’ ಎಂದು ಶಂಕರ್‌ ದೂರಿದ್ದಾರೆ.

‘ಪ್ರಕರಣದಲ್ಲಿ ಎಲ್ಲ ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು’ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ವೆಂಕಟೇಶ್‌ ಆಗ್ರಹಿಸಿದ್ದಾರೆ.

ಜೈನ್‌ ವಿವಿ ಸ್ಪಷ್ಟನೆ

‘ಸಮಾಜದಲ್ಲಿರುವ ತಪ್ಪು ಕಲ್ಪನೆ ತೊಲಗಿಸಿ ಅರಿವು ಮೂಡಿಸುವ ಉದ್ದೇಶದಿಂದ ಈ ಕಿರುನಾಟಕ ಪ್ರದರ್ಶಿಸಲಾಗಿತ್ತು. ನಾಟಕದ ಕೊನೆಯಲ್ಲಿ ಎಲ್ಲರ ಜತೆಗೆ ಸಂವೇದನೆಯಿಂದ ನಡೆದುಕೊಳ್ಳಬೇಕು ಎಂಬ ಸಂದೇಶವಿದೆ. ಆದರೂ ಕುಲಸಚಿವರ ನೇತೃತ್ವದಲ್ಲಿ ತನಿಖೆಗೆ ಶಿಸ್ತು ಸಮಿತಿ ರಚಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳ ಪೋಷಕರನ್ನೂ ಶನಿವಾರ ಕರೆಸಿ ವಿಚಾರಣೆ ನಡೆಸಲಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ವಿಶ್ವವಿದ್ಯಾಲಯದ ಸಿಬ್ಬಂದಿ ತಿಳಿಸಿದ್ದಾರೆ.

14ಕ್ಕೆ ಬೆಂಗಳೂರು ವಿ.ವಿ ಬಂದ್‌

‘ಅವಹೇಳನ ಖಂಡಿಸಿ ಇದೇ 14ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಂದ್‌ಗೆ ಹಲವು ಸಂಘಟನೆಗಳು ಕರೆ ನೀಡಿವೆ. ರಾಜ್ಯದ ಇತರೆ ಜಿಲ್ಲೆಗಳಿಂದಲೂ ಪ್ರತಿಭಟನಕಾರರು ಬರಲಿದ್ದಾರೆ. ಜೈನ್‌ ವಿಶ್ವವಿದ್ಯಾಲಯದ ಎದುರೂ ಪ್ರತಿಭಟನೆ ನಡೆಸಲಾಗುವುದು’ ಎಂದು ದಲಿತ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.