ದಕ್ಷಿಣ ಕನ್ನಡ ಜಿಲ್ಲೆಗೆ ಮುಂಗಾರು ಪ್ರವೇಶವಾಗಿದ್ದು, ಶನಿವಾರ ಸುರಿದ ಧಾರಾಕಾರ ಮಳೆಯ ನಡುವೆ ಮಂಗಳೂರಿನ ಪಿವಿಎಸ್ ವೃತ್ತದಲ್ಲಿ ಮಹಿಳೆಯೊಬ್ಬರು ಸಾಗಿದರು.
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಧಾರಾಕಾರ ಮಳೆಯಾಗಿದೆ. ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಬೆಳ್ತಂಗಡಿ ತಾಲ್ಲೂಕಿನ ಶಿರ್ತಾಡಿಯಲ್ಲಿ ಗರಿಷ್ಠ 18 ಸೆ.ಮೀ ಮಳೆ ದಾಖಲಾಗಿದೆ.
ಜಿಲ್ಲೆಯ ಹಲವೆಡೆ ಮರಗಳು ಉರುಳಿವೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಧರ್ಮಸ್ಥಳ ಭಾಗದಲ್ಲಿ ತುಂಬಿ ಹರಿಯುತ್ತಿದೆ. ಕಿಂಡಿ ಅಣೆಕಟ್ಟೆಗಳಲ್ಲಿ ನೀರು ತುಂಬಿದ್ದು, ಹಲಗೆಗಳನ್ನು ಎತ್ತಲಾಗಿದೆ. ಮೂಲ್ಕಿ ತಾಲ್ಲೂಕಿನ ಕೆಂಪುಗುಡ್ಡೆಯಲ್ಲಿ ಕೃಷಿಭೂಮಿಗೆ ನೀರು ನುಗ್ಗಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಉತ್ತಮ ಮಳೆ ಸುರಿದಿದೆ.
ಹವಾಮಾನ ಇಲಾಖೆ, ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಮತ್ತಷ್ಟು ಚುರುಕಾಗಿದೆ. ಶನಿವಾರ ದಿನವಿಡೀ ಮಳೆ ಆಗಿದೆ. ಚಿಕ್ಕಮಗಳೂರು ನಗರ, ಮೂಡಿಗೆರೆ, ಕಳಸ, ಹೊರನಾಡು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಆಲ್ದೂರು, ಕೊಟ್ಟಿಗೆಹಾರ, ಜಾವಳಿ, ಬಣಕಲ್, ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕೆಮ್ಮಣ್ಣುಗುಂಡಿ ಕಡೆ ಬಿರುಗಾಳಿ ಸಹಿತ ಸುರಿಯಿತು.
ಹಲವೆಡೆ ಮನೆಗಳ ಮೇಲೆ ಮರ ಉರುಳಿದೆ. ಮೂಡಿಗೆರೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ರಿಪುರ ಗ್ರಾಮದ ಸುಶೀಲಾ ಅವರ ಕಾರ್ ಶೆಡ್ ಹಾಗೂ ಮನೆಯ ಮೇಲೆ ಮರಬಿದ್ದು ಕಾರು ಜಖಂಗೊಂಡಿದೆ. ಜಿಲ್ಲೆಯಾದ್ಯಂತ 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿವೆ. ಉಡುಪಿ ಜಿಲ್ಲೆಯಲ್ಲೂ ಮಳೆಯಾಗಿದೆ.
ಹುಬ್ಬಳ್ಳಿ: ತುಂತುರು ಮಳೆ
ಧಾರವಾಡ, ವಿಜಯನಗರ, ಬಳ್ಳಾರಿ, ವಿಜಯಪುರ, ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ಮಳೆಯ ರಭಸ ಕಡಿಮೆಯಾಗಿದೆ. ತುಂತುರು ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣ ಕಂಡುಬಂದಿತು. ಬಿಟ್ಟು ಬಿಟ್ಟು ಮಳೆಯಾಗಿದೆ
ಕೊಡಗು: ಮುಂದುವರಿದ ಭಾರಿ ಮಳೆ
ಕೊಡಗು ಜಿಲ್ಲೆಯ ಹಲವೆಡೆ ಶನಿವಾರ ಧಾರಾಕಾರ ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ ಕಬ್ಬಚೀರ ಉತ್ತಪ್ಪ ಅವರ ಲೈನ್‌ಮನೆಯಲ್ಲಿ ವಾಸವಿದ್ದ ಗೌರಿ (50) ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟರು.
ಭಾಗಮಂಡಲ, ತಲಕಾವೇರಿ ಕಡೆ ಮಳೆ ಹೆಚ್ಚಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿದೆ. ಭಾಗಮಂಡಲ, ನಾಪೋಕ್ಲು ಹೋಬಳಿಯಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಕಕ್ಕಬೆ, ನಾಪೋಕ್ಲು, ನೆಲಜಿ, ಕಕ್ಕಬ್ಬೆ, ಬಲ್ಲಮಾವಟಿ ಕಡೆ ಮರಗಳು ಉರುಳಿವೆ. ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ಕಡೆಯೂ ಧಾರಾಕಾರ ಮಳೆ ಆಗಿದೆ. ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.