ADVERTISEMENT

ರಾಜ್ಯದಲ್ಲಿ ಮಳೆ ಮುಂದುವರಿಕೆ: ಮೂರು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಣೆ

​ಪ್ರಜಾವಾಣಿ ವಾರ್ತೆ
Published 10 ಮೇ 2023, 19:36 IST
Last Updated 10 ಮೇ 2023, 19:36 IST
ಕೊಪ್ಪಳ ತಾಲ್ಲೂಕಿನ ಇಂದಿರಾ ನಗರ ತಾಂಡದಲ್ಲಿ ಬುಧವಾರ ಮಳೆಯಿಂದ ಹಾರಿಹೋದ ತಗಡಿನ ಶೀಟ್‌ಗಳು
ಕೊಪ್ಪಳ ತಾಲ್ಲೂಕಿನ ಇಂದಿರಾ ನಗರ ತಾಂಡದಲ್ಲಿ ಬುಧವಾರ ಮಳೆಯಿಂದ ಹಾರಿಹೋದ ತಗಡಿನ ಶೀಟ್‌ಗಳು   –ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಜ್ಯದಾದ್ಯಂತ ಗುರುವಾರವೂ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಮೂರು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ. 

ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. 

ದಕ್ಷಿಣ ಒಳನಾಡಿನ ಒಂದೆರಡು ಕಡೆ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 30–40 ಕಿ.ಮೀ. ಇರುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಸಾಧಾರಣ ಮಳೆಯಾಗಲಿದೆ. ಶುಕ್ರವಾರದಿಂದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ. 

ADVERTISEMENT

ಬುಧವಾರ ಬೆಳಿಗ್ಗೆ 8.30ಕ್ಕೆ ಅನ್ವಯಿಸಿದಂತೆ ಹಿಂದಿನ 24 ಗಂಟೆಯ ಅವಧಿಯಲ್ಲಿ ಹಾವೇರಿಯ ರಾಣೆಬೆನ್ನೂರಿನಲ್ಲಿ (5 ಸೆಂ.ಮೀ.) ಗರಿಷ್ಠ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಕಲಬುರಗಿ ಜಿಲ್ಲೆಯ ಆಳಂದ, ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು, ಶಿವನಿ, ನರಸಿಂಹರಾಜಪುರ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಶಿವಮೊಗ್ಗ ಜಿಲ್ಲೆಯ ಹುಂಚದಕಟ್ಟೆ, ಮೈಸೂರಿನ ಜಿಲ್ಲೆಯ ಟಿ. ನರಸೀಪುರ ಹಾಗೂ ತುಮಕೂರು ಜಿಲ್ಲೆಯ ಕೊನೇಹಳ್ಳಿಯಲ್ಲಿ 4 ಸೆಂ.ಮೀ. ಮಳೆಯಾಗಿದೆ. ಉಳಿದೆಡೆ ಈ ಪ್ರಮಾಣ 4 ಸೆಂ.ಮೀ.ಗಿಂತ ಕಡಿಮೆ ವರದಿಯಾಗಿದೆ.

ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ (37.3 ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ ಎಂದು ಇಲಾಖೆ ತಿಳಿಸಿದೆ. 

ಮಳೆಗೆ ಹಾರಿದ ಶೀಟು: ಸಿಡಿಲಿಗೆ ಒಬ್ಬ ಸಾವು

ಕೊಪ್ಪಳ: ನಗರ ಸೇರಿ ಜಿಲ್ಲೆಯ ಹಲವು ಕಡೆ ಬುಧವಾರ ಬೀಸಿದ ಬಿರುಗಾಳಿ ಹಾಗೂ ಜೋರು ಮಳೆಗೆ ಕೊಪ್ಪಳ ತಾಲ್ಲೂಕಿನ ಇಂದಿರಾ ನಗರ ತಾಂಡಾದಲ್ಲಿ ಮನೆಯ ಚಾವಣಿ ಹಾರಿಹೋಗಿದೆ. ಕೊಪ್ಪಳ, ಕುಕನೂರು, ಅಳವಂಡಿಯಲ್ಲಿ ಮಳೆಯಾಗಿದೆ.

ಜಬ್ಬಲಗುಡ್ಡ ಬಳಿ ಕುರಿ ಮೇಯಿಸುತ್ತಿದ್ದ ಗಂಗಾವತಿ ತಾಲ್ಲೂಕಿನ ಮುಕ್ಕುಂಪಿ ಗ್ರಾಮದ ಯಮನೂರಪ್ಪ ಕುದರಿಮೋತಿ (25) ಎಂಬುವವರು ಸಿಡಿಲು ಬಡಿದು ಮೃತಪಟ್ಟರೆ, ಅಂಬರೀಶ್‌ ಬಂಕಾಪುರ ಎಂಬುವರು ಗಾಯಗೊಂಡಿದ್ದಾರೆ.

ಬಿರುಗಾಳಿ ಬೀಸಿದಾಗ ತಾಂಡಾದ ಮನೆಯಲ್ಲಿ ನಾಲ್ವರು ಇದ್ದರು. ಮನೆಯ ಯಜಮಾನ ನಾಗರಾಜಪ್ಪ, ಹಾರಿ ಹೋಗುತ್ತಿದ್ದ ಚಾವಣಿಯ ತಗಡಿನ ಶೀಟ್‌ಗಳನ್ನು ಹಿಡಿಯಲು ಮುಂದಾದಾಗ ಕಾಲಿಗೆ ಗಾಯಗಳಾದವು. ಉಳಿದ ಮೂವರು ಹಾರಿ ಹೋಗಿದ್ದ ತಗಡುಗಳನ್ನು ಹಿಡಿದು ವಾಪಸ್‌ ತರಲು ಹರಸಾಹಸ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.