ADVERTISEMENT

2ಎ ಪಟ್ಟಿಗೆ ಹೊಸ ಸೇರ್ಪಡೆಗೆ ನೇಕಾರರ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 16:52 IST
Last Updated 16 ಫೆಬ್ರುವರಿ 2021, 16:52 IST

ಬೆಂಗಳೂರು: ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಪಟ್ಟಿಗೆ ಹೊಸದಾಗಿ ಯಾವುದೇ ಜಾತಿಗಳನ್ನು ಸೇರ್ಪಡೆ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಸಂಘ ಮಂಗಳವಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದೆ.

‘ಪ್ರವರ್ಗ 2ಎ ಪಟ್ಟಿಯಲ್ಲಿ 102 ಜಾತಿಗಳಿವೆ. 2002ರಲ್ಲಿ ಆಯೋಗವು ಮಾಡಿರುವ ವರ್ಗೀಕರಣದಂತೆ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಜಾತಿಯಲ್ಲಿ ಕೆಲವು ಪ್ರಬಲ ಜಾತಿಗಳೂ ಇದ್ದು, ಸಂಖ್ಯಾಬಾಹುಳ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ಸಣ್ಣ ಸಮುದಾಯಗಳೂ ಇವೆ. 2ಎ ಪ್ರವರ್ಗಕ್ಕೆ ಲಭ್ಯವಿರುವ ಶೇ 15ರಷ್ಟು ಮೀಸಲಾತಿಯಲ್ಲಿ 102 ಜಾತಿಗಳಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ’ ಎಂದು ನೇಕಾರರ ಸಂಘದ ಅಧ್ಯಕ್ಷ ಎಣ್ಣೆಗೆರೆ ಆರ್‌. ವೆಂಕಟರಾಮಯ್ಯ ಮನವಿಯಲ್ಲಿ ತಿಳಿಸಿದ್ದಾರೆ.

ಈಗ ಪ್ರವರ್ಗ ‘3ಎ’ ಮತ್ತು ‘3ಬಿ’ ಪಟ್ಟಿಯಲ್ಲಿರುವ ಕೆಲವು ಜಾತಿಗಳನ್ನು ಪ್ರವರ್ಗ ‘2ಎ’ ಪಟ್ಟಿಗೆ ಸೇರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಬಲಿಷ್ಠ ಸಮುದಾಯವೊಂದನ್ನು ‘2ಎ’ ಪಟ್ಟಿಗೆ ಸೇರಿಸುವ ಸಂಬಂಧ ರಾಜ್ಯ ಸರ್ಕಾರವು ಆಯೋಗದ ವರದಿಯನ್ನು ಕೇಳಿದೆ. ಪ್ರಬಲ ಸಮುದಾಯಗಳನ್ನು 2ಎ ಪಟ್ಟಿಗೆ ಸೇರಿಸಿದರೆ ಆ ವರ್ಗದ ಜನರಿಗೆ ಮಾತ್ರ ಲಾಭವಾಗುತ್ತದೆ. ಮೀಸಲಾತಿಯ ಮಾನದಂಡಗಳಲ್ಲಿ ಅಸಮತೋಲನ ಸೃಷ್ಟಿಯಾಗುತ್ತದೆ. ಆದ್ದರಿಂದ 2ಎ ಪಟ್ಟಿಯಲ್ಲಿ ಯಾವುದೇ ಜಾತಿಯನ್ನೂ ಸೇರಿಸಬಾರದು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.