ADVERTISEMENT

ಆರ್‌ಎಸ್‌ಎಸ್‌ಗೆ ಎಲ್ಲಿಂದ ಹಣ ಬರುತ್ತಿದೆ: ಪ್ರಿಯಾಂಕ್‌ ಖರ್ಗೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 14:32 IST
Last Updated 23 ಅಕ್ಟೋಬರ್ 2025, 14:32 IST
<div class="paragraphs"><p>ಪ್ರಿಯಾಂಕ್‌ ಖರ್ಗೆ</p></div>

ಪ್ರಿಯಾಂಕ್‌ ಖರ್ಗೆ

   

ಬೆಂಗಳೂರು: ‘ನೋಂದಣಿಯೇ ಆಗದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) ಹಣ ಎಲ್ಲಿಂದ ಬರುತ್ತಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಕಾರ್ಯಕ್ರಮ ಆಯೋಜಿಸಲು ಅವರಿಗೆ ಜನರು ಸ್ವಯಂಪ್ರೇರಿತರಾಗಿ ದೇಣಿಗೆ ನೀಡುತ್ತಾರೆಯೇ? ಅಥವಾ ಎಲ್ಲಿಂದ ಹಣ ಬರುತ್ತಿದೆ ಎಂಬುದನ್ನು ಹೇಳಬೇಕಲ್ಲವೇ’ ಎಂದರು.

ADVERTISEMENT

‘ಆರ್‌ಎಸ್‌ಎಸ್‌ ನೋಂದಣಿ, ಹಣಕಾಸು ವ್ಯವಹಾರ ಪ್ರಶ್ನಿಸಿದ ಕಾರಣಕ್ಕೆ ಬಿಜೆಪಿ ನಾಯಕರು ನನ್ನ ಕುಟುಂಬ ಹಾಗೂ ಸಮುದಾಯದ ಕುರಿತು ವೈಯಕ್ತಿಕವಾಗಿ ಟೀಕಿಸುವ ಮೂಲಕ ಬೌದ್ಧಿಕ ದಿವಾಳಿತನ ಪ್ರದರ್ಶಿಸಿದ್ದಾರೆ’ ಎಂದು ಟೀಕಿಸಿದರು.

‘ಆರ್‌ಎಸ್‌ಎಸ್‌ ಕುರಿತು ಪ್ರಶ್ನಿಸಿದರೆ ನನ್ನ ಆಸ್ತಿ ಕುರಿತು ಮಾತನಾಡುತ್ತಾರೆ. ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಬಿಜೆಪಿಯವರ ಕೈಯಲ್ಲೇ ಇದೆ. ತನಿಖೆ ಮಾಡಲಿ’ ಎಂದು ತಿರುಗೇಟು ನೀಡಿದರು.

‘ಆರ್‌ಎಸ್‌ಎಸ್ ಹೆಸರಿನಲ್ಲಿ ಯಾವುದಾದರೂ ಕಟ್ಟಡ ಇದ್ದರೆ ತೋರಿಸಲಿ’ ಎಂಬ ಬಿಜೆಪಿ ನಾಯಕರ ಪ್ರಶ್ನೆ ಕುರಿತಂತೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌, ‘ಆರ್‌ಎಸ್‌ಎಸ್‌ ಹೆಸರಿನಲ್ಲಿ ಯಾವುದೇ ಕಟ್ಟಡ ಇಲ್ಲ ಎಂಬುದನ್ನು ನಾನೇ ಹೇಳಿದ್ದೇನೆ’ ಎಂದರು.

ಭೀಮ್ ಆರ್ಮಿ ಸಂಘಟನೆ ಚಿತ್ತಾಪುರದಲ್ಲಿ ನ. 2 ರಂದು ರ‍್ಯಾಲಿಗೆ ಅನುಮತಿ ಕೇಳಿರುವ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್, ‘ಇದೇ 24ರಂದು ನ್ಯಾಯಾಲಯ ಏನು ತೀರ್ಪು ನೀಡಲಿದೆಯೊ ನೋಡಬೇಕು. ಯಾರೇ ಪಥ ಸಂಚಲನ ನಡೆಸಿದರೂ ಅನುಮತಿ ತೆಗೆದುಕೊಂಡು ಮಾಡಬೇಕು’ ಎಂದರು.

ಬೆಂಗಾವಲು ವಾಹನ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಜನ ನಮ್ಮೊಂದಿಗಿದ್ದಾರೆ. ಯಾವ ಬೆಂಗಾವಲು ವಾಹನವೂ ಬೇಡ. ಮೂರು ದಿನ ಬೆಂಗಾವಲು ವಾಹನವನ್ನೇ ಬಳಸಿಲ್ಲ’ ಎಂದರು.

ಆರ್‌ಎಸ್‌ಎಸ್‌ ಹೆಸರಿನಲ್ಲಿ ಹಲವರು ಬೆದರಿಕೆ ಹಾಕಿದ ಕಾರಣ, ಗುಪ್ತಚರ ವರದಿ ಆಧರಿಸಿ ಗೃಹ ಇಲಾಖೆಯು ಪ್ರಿಯಾಂಕ್‌ ಅವರಿಗೆ ಭದ್ರತೆ ಹೆಚ್ಚಿಸಿತ್ತು.