ADVERTISEMENT

ಯಾರು ರವಿ ಪೂಜಾರಿ? ಮಲ್ಪೆಯಿಂದ ಮುಂಬೈಗೆ ಹೋದ ಡಾನ್‌, ಸೆನೆಗಲ್‌ನಲ್ಲಿ ಸಮಾಜ ಸೇವಕ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 6:36 IST
Last Updated 25 ಫೆಬ್ರುವರಿ 2020, 6:36 IST
ರವಿ ಪೂಜಾರಿ
ರವಿ ಪೂಜಾರಿ   

ಗ್ಯಾಂಗಸ್ಟರ್‌ ರವಿ ಪೂಜಾರಿಯನ್ನು (51) ಪಶ್ಚಿಮ ಆಫ್ರಿಕಾ ರಾಷ್ಟ್ರದ ಸೆನೆಗಲ್‌ನಿಂದ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.

ಭಾರತದಿಂದ ಪರಾರಿಯಾಗಿ ಸೆನೆಗಲ್‌ನಲ್ಲಿ ನೆಲೆಸಿದ್ದ ರವಿ ಪೂಜಾರಿ ಅಲ್ಲಿ ರೂಪಾಂತರಗೊಂಡಿದ್ದ. ಹೆಸರು ಬದಲಿಸಿಕೊಂಡು ಸಮಾಜ ಸುಧಾರಕನಾಗಿ ಬದುಕುತ್ತಿದ್ದ. ಆಂಟನಿ ಫರ್ನಾಂಡಿಸ್‌ ಎಂಬ ಹೆಸರಿನಲ್ಲಿ ರೆಸ್ಟೊರೆಂಟ್‌ಗಳನ್ನು ನಡೆಸುತ್ತಾ, ಸಮಾಜ ಸೇವೆಯಲ್ಲೂ ತೊಡಗಿದ್ದ. ಸದ್ಯ ಪೂಜಾರಿ ಕರ್ನಾಟಕದಲ್ಲಿ ಕಂಬಿ ಎಣಿಸುತ್ತಿದ್ದಾನೆ.

‘ಪಶ್ಚಿಮ ಆಫ್ರಿಕಾ ರಾಷ್ಟ್ರಗಳಲ್ಲಿ ‘ನಮಸ್ತೆ ಇಂಡಿಯಾ’ ಹೆಸರಿನಲ್ಲಿ 9ಕ್ಕೂ ಹೆಚ್ಚು ರಸ್ಟೊರೆಂಟ್‌ಗಳನ್ನು ರವಿ ಪೂಜಾರಿ ನಡೆಸುತ್ತಿದ್ದ. ಸೆನೆಗಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಪೂಜಾರಿ ಅಲ್ಲಿನ ಕುಗ್ರಾಮಗಳಿಗೆ ಉಚಿತವಾಗಿ ನೀರು ಒದಗಿಸುತ್ತಿದ್ದ. ನವರಾತ್ರಿಯಂದು ಬಡವರಿಗೆ ಬಟ್ಟೆ ವಿತರಣೆ ಮಾಡಿ ಸಮಾಜ ಸುಧಾರಕನಾಗಿ ಗುರುತಿಸಿಕೊಂಡಿದ್ದ.’ ಎಂದು ಕರ್ನಾಟಕದ ಎಡಿಜಿಪಿ ಅಮರ್‌ ಕುಮಾರ್‌ ಪಾಂಡೆ ತಿಳಿಸಿದ್ದಾರೆ.

ADVERTISEMENT

ಕೊಲೆ, ಸುಲಿಗೆ ಸೇರಿದಂತೆ ಭಾರತದಲ್ಲಿ 200 ಪ್ರಕರಣಗಳಲ್ಲಿ ಬೇಕಾಗಿದ್ದ ರವಿ ಪೂಜಾರಿ ಸೆನೆಗಲ್‌ನಲ್ಲಿ ತನ್ನ ಸಮಾಜ ಕಾರ್ಯಗಳಿಂದಾಗಿ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಯೂ ಆಗಿದ್ದ. ಸೆನೆಗಲ್‌ನಲ್ಲಿ ಜೀವನ ಆರಂಭಿಸುವುದಕ್ಕೂ ಮೊದಲು ಪಶ್ಚಿಮ ಆಫ್ರಿಕಾದ ಬುರ್ಕಿನ ಫಾಸೋ ರಾಷ್ಟ್ರದಲ್ಲಿ ಪೂಜಾರಿ 12 ವರ್ಷ ಜೀವನ ಸಾಗಿಸಿದ್ದ.

ಸೆನೆಗಲ್‌ ಮತ್ತು ಬುರ್ಕಿನಾ ಫಾಸೋದಲ್ಲಿ ಇದ್ದಾಗ್ಯೂ ಪೂಜಾರಿ ಭಾರತದಲ್ಲಿ ಹಲವು ಅಪರಾಧ ಕೃತ್ಯಗಳಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ತನ್ನ ತಂಡದ ಮೂಲಕ ಅಪರಾಧ ಕೃತ್ಯಗಳನ್ನು ಮಾಡಿಸುತ್ತಿದ್ದ.

ಹೀಗಿರುವಾಗಲೇ ಕಳೆದ ವರ್ಷದ ಜ. 21ರಂದು ಸೆನೆಗಲ್‌ನ ಕ್ಷೌರದಂಗಡಿಯಲ್ಲಿ ಕೂದಲಿಗೆ ಬಣ್ಣ ಹಾಕಿಸಿಕೊಳ್ಳುತ್ತಿದ್ದಾಗ ಸ್ಥಳೀಯ ಪೊಲೀಸರು ಪೂಜಾರಿಯನ್ನು ಬಂಧಿಸಿದ್ದರು. ಈ ಕುರಿತು ಭಾರತಕ್ಕೆ ಮಾಹಿತಿ ನೀಡಲಾಗಿತ್ತು. ಆತನ ಗಡಿಪಾರಿಗೆ ಸಂಬಂಧಿಸಿದಂತೆ ಸೂಕ್ತ ದಾಖಲನೆಗಳನ್ನು ಪೂರೈಸುವಂತೆ ಸೆನೆಗೆಲ್‌ ಭಾರತಕ್ಕೆ ತಿಳಿಸಿತ್ತು.

ಈ ಕೋರಿಕೆ ಮೇರೆಗೆ ಭಾರತ ಪೂಜಾರಿ ಬೆರಳಚ್ಚು ಪ್ರತಿಯನ್ನು ಸೆನೆಗಲ್‌ಗೆ ರವಾನಿಸಲಾಗಿತ್ತು. ಅದರ ಆಧಾರದಲ್ಲಿ ರವಿ ಪೂಜಾರಿಯ ಗುರುತು ಪತ್ತೆ ಮಾಡಲಾಗಿದೆ.

‘1994ರಲ್ಲಿ ರವಿ ಪೂಜಾರಿ ಮುಂಬೈನಲ್ಲಿ ನಡೆದಿದ್ದಕೊಲೆ ಪ್ರಕರಣವೊಂದರಲ್ಲಿ ಬಂಧನಕ್ಕೀಡಾಗಿದ್ದ. ಆಗ ಆತನ ಭಾವಚಿತ್ರ ಮತ್ತು ಬೆರಳಚ್ಚು ಪ್ರತಿಯನ್ನು ಪೊಲೀಸರು ಪಡೆದುಕೊಂಡಿದ್ದರು. ನಂತರ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದ. ಅಲ್ಪ ಅವಧಿಯಲ್ಲೇ ಪಾತಕ ಲೋಕದಲ್ಲಿ ಹೆಸರು ಮಾಡಿದ್ದ. ಭಾರತದಲ್ಲಿ ಅಭದ್ರತೆ ಶುರುವಾಗುತ್ತಲೇ ನೇಪಾಳಕ್ಕೆ ತೆರಳಿದ್ದ ಆತ ನಂತರ ಬ್ಯಾಂಕಾಕ್‌ ಮತ್ತು ಉಗಾಂಡದಲ್ಲೂ ನೆಲೆ ಕಂಡುಕೊಳ್ಳಲು ಯತ್ನಿಸಿದ್ದ. ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊದಲ್ಲಿ 12 ವರ್ಷ ಜೀವನ ಸಾಗಿಸಿದ್ದ’ ಎಂದು ಪಾಂಡೆ ತಿಳಿಸಿದ್ದಾರೆ.

ಬೆರಳಚ್ಚಿನ ಮೂಲಕ ಆತನ ಗುರುತು ಪತ್ತೆಯಾದ ನಂತರ, ಆತನ ಗಡಿಪಾರಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಮಾರ್ಚ್‌ನಲ್ಲಿ ಸೆನೆಗಲ್‌ಗೆ ರವಾನಿಸಲಾಗಿತ್ತು. 2000ರಲ್ಲಿ ಜಾರಿಗೆ ಬಂದ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಸಂಘಟಿತ ಅಪರಾಧ ಕಾನೂನಿನ ಅಡಿಯಲ್ಲಿ ಭಾರತ ಪೂಜಾರಿಯ ಗಡಿಪಾರಿಗೆ ಮನವಿ ಮಾಡಿತ್ತು. ಅದರಂತೆ ಸೆನೆಗಲ್‌ನಿಂದ ಪೂಜಾರಿಯನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದ್ದು, ಕರ್ನಾಟಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರವಿ ಪೂಜಾರಿ ಗಡಿಪಾರು ಪ್ರಕ್ರಿಯೆ ಆರಂಭವಾಗಿದ್ದ 2019ರ ಮೇ 15ರಂದು. ಆದರೆ, ಸೆನೆಗಲ್‌ನಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಬಾಕಿ ಇದ್ದ ಪ್ರಕರಣಗಳು ಇತ್ಯರ್ಥವಾಗುವುದು ಮತ್ತು ಕಾನೂನು ಪ್ರ‌ಕ್ರಿಯೆಗಳು ಪೂರ್ಣಗೊಳ್ಳುವುದು ವಿಳಂಬವಾದ ಹಿನ್ನೆಲೆಯಲ್ಲಿ ಆತನ ಗಡಿಪಾರೂ ವಿಳಂಬವಾಗಿದೆ.

ಮಲ್ಪೆ TO ಮುಂಬೈ

ಮೂಲತಃರವಿ ಪೂಜಾರಿ ಉಡುಪಿ ಜಿಲ್ಲೆಯ ಮಲ್ಪೆಯವ. ಚಿಕ್ಕಂದಿನಲ್ಲೇ ಶಾಲೆ ತೊರೆದು ಮುಂಬೈ ಸೇರಿದ್ದ. ಅಂಧೇರಿಯಲ್ಲಿ ಟೀ ಮಾರಾಟ ಮಾರಿ ಜೀವನ ಸಾಗಿಸುತ್ತಿದ್ದ.ಪಾತಕ ಜಗತ್ತಿಗೆ ಕಾಲಿಟ್ಟ ನಂತರ ದೊಂಬಿವಾಲಿಯಲ್ಲಿ ಜೀವನ ಸಾಗಿಸುತ್ತಿದ್ದ.

1980ರಲ್ಲಿ ಬಾಳಾ ಜಾಲ್ಟೆ ಎಂಬುವವನ ಕೊಲೆ ಪ್ರಕರಣದ ಮೂಲಕ ಅಪರಾಧ ಲೋಕದಲ್ಲಿ ಮುನ್ನೆಲೆಗೆ ಬಂದ ರವಿ ಪೂಜಾರಿ ಆ ಹೊತ್ತಿಗೆ ಮುಂಬೈನ ಡಾನ್‌ ಎನಿಸಿದ್ದ ಚೋಟಾ ರಾಜನ್‌ ತೆಕ್ಕೆ ಸೇರಿದ್ದ.

ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊದಲ್ಲಿ ಪೂಜಾರಿ ಹೊಂದಿದ್ದ ಪಾಸ್‌ಪೋರ್ಟ್‌

ಹಿಂದೂ ಡಾನ್‌ ಎಂದು ಗುರುತಿಸಿಕೊಂಡಿದ್ದ ಚೋಟಾ ರಾಜನ್‌ ಮಾದರಿಯಲ್ಲೇ ತಾನೂ ಕೂಡ ಆಗಬೇಕೆಂಬುದು ಪೂಜಾರಿ ಮಹದಾಸೆಯಾಗಿತ್ತು. ರಾಜನ್‌ ರೀತಿಯಲ್ಲೇ ಪೂಜಾರಿ ಕೂಡ ದಾವೂದ್‌ ಇಬ್ರಾಹಿಂ ಜೊತೆಗೆ ಕೆಲಸ ಮಾಡುತ್ತಿದ್ದ. ಆದರೆ, 1993ರಲ್ಲಿ ನಡೆದ ಮುಂಬೈ ಬಾಂಬ್‌ ದಾಳಿ ಘಟನೆ ನಂತರ ದಾವೂದ್‌ ಮತ್ತು ಚೋಟಾ ರಾಜನ್‌ ನಡುವೆ ಕೋಮು ದ್ವೇಷ ತಲೆದೋರಿತ್ತು. ಹೀಗಾಗಿಯೇ ಇಬ್ಬರೂ ಪ್ರತ್ಯೇಕಗೊಂಡಿದ್ದರು. ಆಗ ಪೂಜಾರಿ ಚೋಟಾ ರಾಜನ್‌ ಬಣದಲ್ಲೇ ಉಳಿದ ಎನ್ನಲಾಗಿದೆ.

ಆದರೆ, 2000ರಲ್ಲಿ ದಾವೂದ್‌ ಬಣ ಬ್ಯಾಂಕಾಕ್‌ನಲ್ಲಿ ಚೋಟಾ ರಾಜನ್‌ ಮೇಲೆ ದಾಳಿ ನಡೆಸಿದ ನಂತರ ಪೂಜಾರಿ ರಾಜನ್‌ ಮತ್ತು ದಾವೂದ್‌ ಇಬ್ಬರಿಂದಲೂ ದೂರಾಗಿ ತನ್ನದೇ ಪ್ರತ್ಯೇಕ ಬಣ ಕಟ್ಟಿದ್ದ. ಅದು ಮುಖ್ಯವಾಗಿ ಮುಂಬೈ, ಬೆಂಗಳೂರು ಮತ್ತು ಮಂಗಳೂರುಗಳಲ್ಲಿ ಸಕ್ರಿಯವಾಗಿದೆ ಎನ್ನಲಾಗಿದೆ.

ಪೂಜಾರಿ ಮೇಲಿರುವ ಕೇಸುಗಳು

ಹಲವು ಕೊಲೆ ಪ್ರಕಣಗಳಲ್ಲಿ ಆರೋಪಿಯಾಗಿರುವ ಮುಂಬೈನ ಹಳೆ ರೌಡಿ ಪೂಜಾರಿ ಇತ್ತೀಚೆಗೆ ರಾಜಕಾರಣಿಗಳು, ಸೆಲೆಬ್ರೆಟಿಗಳನ್ನು ಬೆದರಿಸಲು ಆರಂಭಿಸಿದ್ದ. ಹಲವು ರಾಜಕಾರಣಿಗಳು, ಉದ್ಯಮಿಗಳು ಈತನ ವಿರುದ್ಧ ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ. ಹೋರಾಟಗಾರರಾದ ಶೆಹ್ಲಾ ರಶೀದ್‌, ಉಮರ್‌ ಖಲೀದ್‌, ಜಿಜ್ಞೇಶ್‌ ಮೇವಾನಿಯನ್ನೂ ಈತ ಬೆದರಿಸಿದ್ದಾನೆ. ಕರ್ನಾಟಕದ ಮಾಜಿ ಸಚಿವ ತನ್ವೀರ್‌ ಸೇಟ್‌ಗೆ ಕೊಲೆ ಬೆದರಿಕೆಯೊಡ್ಡಿದ್ದ ಪೂಜಾರಿ 10 ಕೋಟಿಗೆ ಬೇಡಿಕೆ ಇಟ್ಟಿದ್ದ. ಅಲ್ಲದೆ, ಡಿ.ಕೆ ಶಿವಕುಮಾರ್‌ ಸೋದರ, ಸಂಸದ ಡಿ.ಕೆ. ಸುರೇಶ್‌ ಅವರಿಗೆ ಕರೆ ಮಾಡಿದ್ದ ಈತ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ.

ಕರ್ನಾಟಕವೊಂದರಲ್ಲೇ ಈತನ ವಿರುದ್ದ 97 ಸುಲಿಗೆ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಬೆಂಗಳೂರಿನ 39 ಪ್ರಕರಣಗಳೂ ಇವೆ. ಮಂಗಳೂರಿನಲ್ಲಿ 36 ಪ್ರಕರಣಗಳು ದಾಖಲಾಗಿವೆ. ಮಂಗಳೂರಿನ ಎರಡು ಪ್ರಕರಣಗಳಲ್ಲಿ ಈತನಿಗೆ ಜೀವಾವಾಧಿ ಮತ್ತು 7 ವರ್ಷ ಸಜೆ ಶಿಕ್ಷೆಯಾಗಿದೆ. ಇದಲ್ಲದೇ ಮಹಾರಾಷ್ಟ್ರ, ಕೇರಳ, ಗುಜರಾತ್‌ನಲ್ಲೂ ಈತನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ.

ಇತ್ತೀಚಿನ ಐದು ವರ್ಷಗಳಲ್ಲಿ ಈತ ಬಾಲಿವುಡ್‌ ತಾರೆಗಳ ಮೇಲು ಕಣ್ಣು ಹಾಕಿದ್ದ. ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌ ಮತ್ತು ಅಕ್ಷಯ್‌ ಕುಮಾರ್‌ಗೂ ಈತ ಬೆದರಿಕೆ ಹಾಕಿದ್ದಾನೆ.

ಗಾಯಕನಿಗೆ ಕರೆ ಮಾಡಿ ಧ್ವನಿ ಚೆನ್ನಾಗಿದೆ ಎಂದಿದ್ದ

2015ರಲ್ಲಿ ಗಾಯಕ ಅರ್ಜಿತ್‌ ಸಿಂಗ್‌ಗೆ ಕರೆ ಮಾಡಿದ್ದ ರವಿ ಪೂಜಾರಿ ‘ನಿಮ್ಮ ಧ್ವನಿ ಚೆನ್ನಾಗಿದೆ’ ಎಂದು ಹೇಳಿದ್ದ. ಈ ಕುರಿತು ಅರ್ಜಿತ್‌ ಸಿಂಗ್‌ ಅವರೇ ಹೇಳಿಕೆ ನೀಡಿದ್ದರು. ಅಲ್ಲದೆ, ‘ಸಮಾರಂಭದಲ್ಲಿ ಹಾಡುವುದಾದರೆ ನಾನೊಂದು ಕಾರ್ಯಕ್ರಮ ಆಯೋಜಿಸುತ್ತೇನೆ. ಅದರಲ್ಲಿ ಹಾಡಬಹುದೇ? ’ ಎಂದು ಕೇಳಿದ್ದ ಎಂದೂ ಅರ್ಜಿತ್‌ ಸಿಂಗ್‌ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.