ADVERTISEMENT

ಕಾಡುಪ್ರಾಣಿ ದಾಳಿ: ಬೆಳೆ ನಾಶದ ಪರಿಹಾರ ಹೆಚ್ಚಳ

ಹೊಸದಾಗಿ 7 ಬೆಳೆ ಸೇರ್ಪಡೆ; ಪರಿಹಾರ ನಿಗದಿ

ಬಿ.ಜೆ.ಧನ್ಯಪ್ರಸಾದ್
Published 28 ಜನವರಿ 2023, 19:11 IST
Last Updated 28 ಜನವರಿ 2023, 19:11 IST
   

ಚಿಕ್ಕಮಗಳೂರು: ವನ್ಯಜೀವಿಗಳಿಂದ ಉಂಟಾಗುವ ಬೆಳೆ ನಾಶ ಪ್ರಕರಣಗಳಿಗೆ ನೀಡುವ ಪರಿಹಾರವನ್ನು ಈಗಿರುವ ಮೊತ್ತದ ದುಪ್ಪಟ್ಟಿಗೆ ಹೆಚ್ಚಿಸಲಾಗಿದೆ.

ಅರಣ್ಯ ಮತ್ತು ಪರಿಸರ ಇಲಾಖೆ ಇದೇ 18ರಂದು ಆದೇಶ ಹೊರಡಿಸಿದೆ. ಬೆಳೆ ಪಟ್ಟಿಗೆ ಹೊಸದಾಗಿ ಮಾವು, ಸಪೋಟ, ಸೀಬೆ, ಹಲಸು, ದಾಳಿಂಬೆ, ಸೀತಾಫಲ, ಹಿಪ್ಪುನೆರಳೆಯನ್ನು ಸೇರಿಸಲಾಗಿದೆ.

ಪಟ್ಟಿಯಲ್ಲಿ ಭತ್ತ, ಜೋಳ, ವಿವಿಧ ತರಕಾರಿ, ಕಾಫಿ, ಕಿತ್ತಳೆ, ತೆಂಗು, ಅಡಿಕೆ, ಬಾಳೆ, ಸೇವಂತಿ ಸಹಿತ ಒಟ್ಟು 64 ಬೆಳೆಗಳು ಇವೆ. ಭತ್ತದ ಪರಿಹಾರ ಮೊತ್ತ ಕ್ವಿಂಟಲ್‌ ₹ 1,320 ಇದ್ದದ್ದು ₹ 2,640ಕ್ಕೆ ಹೆಚ್ಚಳವಾಗಿದೆ.

ADVERTISEMENT

ಮಾವು 5 ವರ್ಷಕ್ಕಿಂತ ಕಡಿಮೆಯ ಗಿಡಕ್ಕೆ ₹ 750, 6ರಿಂದ 10 ವರ್ಷವರೆಗಿನ ಗಿಡಕ್ಕೆ ₹ 1,200 ಹಾಗೂ 10 ವರ್ಷ ದಾಟಿದ ಮರಕ್ಕೆ ₹ 1,800, ಸಪೋಟ 5 ವರ್ಷಕ್ಕಿಂತ ಕಡಿಮೆಯ ಗಿಡಕ್ಕೆ ₹ 500 ಹಾಗೂ 5 ವರ್ಷ ದಾಟಿದ ಮರಕ್ಕೆ ₹ 800, ಸೀಬೆ 5 ವರ್ಷಕ್ಕಿಂತ ಕಡಿಮೆಯ ಗಿಡಕ್ಕೆ ₹ 350 ಮತ್ತು 5 ವರ್ಷ ದಾಟಿದ ಮರಕ್ಕೆ ₹ 600, ಹಲಸು– 5 ವರ್ಷಕ್ಕಿಂತ ಕಡಿಮೆಯ ಗಿಡಕ್ಕೆ ₹ 350 ಹಾಗೂ 5 ವರ್ಷ ದಾಟಿದ ಮರಕ್ಕೆ ₹ 800 ನಿಗದಿಪಡಿಸಲಾಗಿದೆ. ದಾಳಿಂಬೆ ಗಿಡಕ್ಕೆ ₹ 300, ಸೀತಾಫಲ ₹ 250 ಹಾಗೂ ಹಿಪ್ಪುನೇರಳೆ ಗುಂಟೆಗೆ ₹ 100 ನಿಗದಿಪಡಿಸಲಾಗಿದೆ.

ಕಾಫಿ: ಅರೇಬಿಕಾ ಗಿಡಕ್ಕೆ (1ರಿಂದ 4 ವರ್ಷ) ₹ 600 ಹಾಗೂ ನಾಲ್ಕು ವರ್ಷ ದಾಟಿದ ಗಿಡಕ್ಕೆ ₹ 1,200 ಹಾಗೂ ರೊಬೊಸ್ಟಾ ಗಿಡಕ್ಕೆ ₹1,500 (1ರಿಂದ 6 ವರ್ಷ) ಹಾಗೂ 6 ವರ್ಷ ದಾಟಿದ ಗಿಡಕ್ಕೆ ₹ 3 ಸಾವಿರಕ್ಕೆ ಪರಿಷ್ಕರಿಸಲಾಗಿದೆ.

ಒತ್ತುವರಿ ಮಾಡಿದ ಅರಣ್ಯ ಪ್ರದೇಶದಲ್ಲಿ ಬೆಳೆದ ಪೈರಿನ ಹಾನಿಗೆ ಪರಿಹಾರ ಲಭಿಸಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

***

ಕಾಡು ಪ್ರಾಣಿಗಳಿಂದ ಬೆಳೆ ಹಾನಿಗೆ ನೀಡುವ ಪರಿಹಾರ ಮೊತ್ತವನ್ನು ಸರ್ಕಾರ ಹೆಚ್ಚಿಸಿ ರೈತರಿಗೆ ಅನುಕೂಲ ಕಲ್ಪಿಸಿದೆ

– ಎನ್‌.ಇ.ಕ್ರಾಂತಿ, ಡಿಎಫ್‌ಒ ಚಿಕ್ಕಮಗಳೂರು

***

ಬೆಳೆ ಹಾನಿ ಪರಿಹಾರ ದುಪ್ಪಟ್ಟು ಮಾಡಿದೆ. ವೈಜ್ಞಾನಿಕವಾಗಿ ಪರಿಹಾರ ಧನವನ್ನು ನಿಗದಿಪಡಿಸಿಲ್ಲ. ಇನ್ನೂ ಹೆಚ್ಚಳ ಮಾಡಬೇಕಿತ್ತು.

– ಎಚ್‌.ಟಿ.ಮೋಹನಕುಮಾರ್‌, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.