ADVERTISEMENT

ವನ್ಯಜೀವಿಯಿಂದ ಜಾನುವಾರು ಮೃತಪಟ್ಟರೆ ಪರಿಹಾರ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 16:19 IST
Last Updated 6 ಅಕ್ಟೋಬರ್ 2025, 16:19 IST
   

ಬೆಂಗಳೂರು: ರಾಜ್ಯದ ಕೆಲವು ಅರಣ್ಯದೊಳಗೆ ಹಾಡಿಗಳಿದ್ದು, ಇಲ್ಲಿ ವಾಸಿಸುತ್ತಿರುವ ಅರಣ್ಯವಾಸಿಗಳು ಸಾಕಿರುವ ಜಾನುವಾರುಗಳು ವನ್ಯಜೀವಿಗಳಿಂದ ಮೃತಪಟ್ಟರೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಕಳೆದ ಜೂನ್‌ನಲ್ಲಿ ಪ್ರತೀಕಾರಕ್ಕಾಗಿ ದನದ ಮೃತದೇಹಕ್ಕೆ ಹಾಕಿದ್ದ ವಿಷದಿಂದ 5 ಹುಲಿಗಳು ಮೃತಪಟ್ಟಿದ್ದವು’ ಎಂದರು.

ಈ ತಿಂಗಳ ಆರಂಭದಲ್ಲೇ ಮತ್ತೊಂದು ಹುಲಿ ವಿಷಪ್ರಾಶನದಿಂದ ಮೃತಪಟ್ಟಿದೆ. ಹಾಡಿಯ ಜನರು ಹತಾಶರಾಗಿ, ಪ್ರತೀಕಾರಕ್ಕಾಗಿ ವಿಷ ಹಾಕುವುದನ್ನು ತಡೆಯಲು ಈ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ADVERTISEMENT

ಹುಲಿಗಳ ಸಾವಿನ ಬಗ್ಗೆ ಮುಖ್ಯಮಂತ್ರಿಯವರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಅರಣ್ಯದೊಳಗಿನ ಹಾಡಿಯಲ್ಲಿರುವ ಜಾನುವಾರುಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪ್ರವಾಹದಲ್ಲಿ ಸಾವಿಗೀಡಾಗುವ ಜಾನುವಾರುಗಳಿಗೆ ನೀಡುವ ಪರಿಹಾರದ ಮೊತ್ತವನ್ನೇ ಈ ಜಾನುವಾರುಗಳಿಗೂ ನೀಡಲು ನಿರ್ಧರಿಸಲಾಗಿದೆ. ವನ್ಯಜೀವಿ ಸಪ್ತಾಹದ ಸಮಾರೋಪದಲ್ಲಿ ಮುಖ್ಯಮಂತ್ರಿಯವರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದರು.

ತಾವು ಸಾಕಿದ ಜಾನುವಾರುಗಳು ಮೃತಪಟ್ಟಾಗ ಸಹಜವಾಗಿಯೇ ಆಕ್ರೋಶಕ್ಕೆ ಒಳಗಾಗುತ್ತಾರೆ. ಆದರೆ, ವನ್ಯಜೀವಿ ಹತ್ಯೆ ಅಪರಾಧವಾಗಿದ್ದು, ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುತ್ತದೆ. ಇದೇ ತಿಂಗಳ 1ರಂದು ನಡೆದ ಹುಲಿ ಹತ್ಯೆಯ 4 ಶಂಕಿತರನ್ನು 48 ಗಂಟೆಯೊಳಗೆ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಈ ಕುಕೃತ್ಯ ಯಾರೇ ಎಸಗಿದ್ದರೂ ಅವರಿಗೆ ಕಾನೂನು ರೀತ್ಯ ತಕ್ಕ ಶಿಕ್ಷೆ ಆಗುತ್ತದೆ. ತ್ವರಿತವಾಗಿ ಶಿಕ್ಷೆ ಆದರೆ ಅದು ಸ್ಪಷ್ಟ ಸಂದೇಶ ರವಾನಿಸುತ್ತದೆ. ಹೀಗಾಗಿ ತ್ವರಿತವಾಗಿ ದೋಷಾರೋಪ ಪಟ್ಟಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಖಂಡ್ರೆ ಹೇಳಿದರು.

ಕಾಡಿನಂಚಿನ ಮತ್ತು ಕಾಡೊಳಗಿನ ಹಾಡಿಯಲ್ಲಿರುವ ಜನರ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಮತ್ತು ವನ್ಯಜೀವಿಗಳೊಂದಿಗೆ ಅವರು ಸಹಬಾಳ್ವೆ ನಡೆಸಲು ಉತ್ತೇಜಿಸುವಂತೆ ಜನ ಸಂಪರ್ಕ ಸಭೆ ನಡೆಸಲೂ ಸೂಚನೆ ನೀಡಲಾಗಿದೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.