ಬೆಳಗಾವಿ ತಾಲ್ಲೂಕಿನ ಕೊಂಡಸಕೊಪ್ಪ ಗುಡ್ಡದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರನ್ನು ಉದ್ದೇಶಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿದರು.
ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನದ ಏಳನೇ ದಿನವಾದ ಬುಧವಾರ ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಸರಣಿ ಪ್ರತಿಭಟನೆ ನಡೆದವು. ರಾಜ್ಯದ ನಾನಾ ಜಿಲ್ಲೆಗಳಿಂದ ಬಂದಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು ತಮ್ಮ ಹಕ್ಕೊತ್ತಾಯ ಮಂಡಿಸಿದರು.
ಪ್ರತ್ಯೇಕ ವಕ್ಫ್ ಮಂಡಳಿ ರಚಿಸಿ
ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕವಾಗಿ ವಕ್ಫ್ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿ, ಉತ್ತರ ಕರ್ನಾಟಕ ಅಂಜುಮನ್-ಎ-ಇಸ್ಲಾಂ ಸಂಘಟನೆ ಪದಾಧಿಕಾರಿಗಳು ಪ್ರತಿಭಟಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣ ಬಳಿ ಇರುವ ಸರ್ಕಾರದ ಭೂಮಿಯಲ್ಲಿ ಹಜ್ ಭವನ ನಿರ್ಮಿಸಬೇಕು. ಉತ್ತರ ಕರ್ನಾಟಕದಲ್ಲಿ, ಅದರಲ್ಲೂ ಹಾವೇರಿ, ಕೊಪ್ಪಳ ಅಥವಾ ಬೀದರ್‌ನಲ್ಲಿ ಉರ್ದು ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಅಧ್ಯಕ್ಷ ಎಚ್.ಎಂ.ಕೊಪ್ಪದ, ಕಾರ್ಯದರ್ಶಿ ಜೆ.ಎಸ್.ಹಡಗಲಿ, ಎ.ಬಿ.ಅತ್ತಾರ, ಜುನೈದ್ ನಾಲಬಂದ ನೇತೃತ್ವ ವಹಿಸಿದ್ದರು.
ಕನಿಷ್ಠ ವೇತನ ಜಾರಿಗೊಳಿಸಿ
‘ನಮಗೆ ಕನಿಷ್ಠ ವೇತನ(ಮಾಸಿಕ ₹31 ಸಾವಿರ) ನೀಡಬೇಕು’ ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದವರು ಪ್ರತಿಭಟನೆ ಮಾಡಿದರು.
‘ಇಲಾಖೆಗಳಿಂದ ನೇರವಾಗಿ ನಮಗೇ ವೇತನ ಪಾವತಿಸಬೇಕು. ನಿವೃತ್ತಿ ಹಂತದವರೆಗೂ ಸೇವಾಭದ್ರತೆ ಒದಗಿಸಬೇಕು. ಕಾರ್ಮಿಕ ಕಾನೂನು ಪ್ರಕಾರ, ವಾರದ ರಜೆ ಕೊಡಬೇಕು. ಕೆಲಸದ ಸಮಯ ನಿಗದಿಪಡಿಸಬೇಕು. ಬೀದರ್ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಬೇಕು. ನಿವೃತ್ತಿ ನಂತರ ಜೀವನ ನಿರ್ವಹಣೆಗೆ ₹10 ಲಕ್ಷ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಭೀಮಶೆಟ್ಟಿ ಯಂಪಳ್ಳಿ, ಕೆ.ಹನುಮೇಗೌಡ, ಎಂ.ಜಂಬಯ್ಯ ನಾಯಕ, ಕೆ.ಮುನಿಯಪ್ಪ, ಪ್ರದೀಪ ದಳವಾಯಿ, ಶಾಂತಕ್ಕ ಗಡ್ಡಿಯವರ, ಗ್ಯಾನೇಶ ಕಡಗದ, ನಂಜುಂಡಸ್ವಾಮಿ, ಇಸಾಮೋದ್ದೀನ್ ಇದ್ದರು.
ಮೆರಿಟ್ ಪದ್ಧತಿ ಕೈಬಿಡಿ
2025-26ನೇ ಸಾಲಿನಲ್ಲಿ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಮೆರಿಟ್ ಪದ್ಧತಿ ಕೈಬಿಟ್ಟು, ಸೇವಾ ಹಿರಿತನ ಆಧರಿಸಿ ಈಗಾಗಲೇ ಸೇವೆಯಲ್ಲಿ ಇರುವವರಿಗೆ ಆದ್ಯತೆ ನೀಡುವ ಕುರಿತು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದವರು ಧರಣಿ ನಡೆಸಿದರು.
ಮಾಸಿಕ ₹30 ಸಾವಿರ ಗೌರವಧನ ನೀಡಬೇಕು. ವರ್ಷಕ್ಕೆ 12 ತುರ್ತು ಸಾಂದರ್ಭಿಕ ರಜೆ ಕೊಡಬೇಕು. ಅತಿಥಿ ಶಿಕ್ಷಕ ಎಂಬ ಪದನಾಮ ತೆಗೆದುಹಾಕಿ, ಅರೆಕಾಲಿಕ, ಹಂಗಾಮಿ ಅಥವಾ ಹೊರಗುತ್ತಿಗೆ ಶಿಕ್ಷಕನೆಂದು ನೇಮಕ ಮಾಡಿಕೊಳ್ಳಬೇಕು. ಕರ್ತವ್ಯದ ಅವಧಿಯಲ್ಲಿ ಅತಿಥಿ ಶಿಕ್ಷಕಿಯರಿಗೆ ಗೌರವಧನ ಸಹಿತವಾಗಿ ಹೆರಿಗೆ ರಜೆ ಕೊಡಬೇಕು. ಎಲ್ಲರಿಗೂ ಆರೋಗ್ಯ ವಿಮೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಚಿತ್ರಲೇಖ, ಪ್ರದೀಪ ಮಾಳಿ, ವೆಂಕಟೇಶ ಎಚ್.ಎಂ., ನವೀನ ಬಿ.ಕೆ. ಇದ್ದರು.
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದವರು ಬುಧವಾರ ಪ್ರತಿಭಟನೆ ನಡೆಸಿದರು
ಬಾಕಿ ಬಿಲ್ ಪಾವತಿಸಿ
ಬೆಳಗಾವಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಡಿ ಕೈಗೊಂಡಿರುವ ಕಾಮಗಾರಿಗಳ ಬಾಕಿ ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾರ್ಯನಿರತ ಗುತ್ತಿಗೆದಾರರ ಸಂಘದವರು ಅರೆಬೆತ್ತಲೆಯಾಗಿ ಪ್ರತಿಭಟಿಸಿದರು. ‘ನಮಗೆ ತಕ್ಷಣವೇ ಬಿಲ್ ಕೊಡಿ. ಇಲ್ಲದಿದ್ದರೆ ಆತ್ಮಹತ್ಯೆಗೆ ಬಿಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಡಿ ಕಾಮಗಾರಿ ಕೈಗೊಂಡಿದ್ದೇವೆ. ಆದರೆ, ಹಲವು ವರ್ಷಗಳಿಂದ ಬಿಲ್ ಬಾಕಿ ಉಳಿಸಿಕೊಂಡಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬಾಕಿ ಬಿಲ್ ಪಾವತಿಗಾಗಿ ಸರ್ಕಾರ ಶೀಘ್ರವೇ ಅನುದಾನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಅನಗತ್ಯ ಅರ್ಹತಾ ಮಾನದಂಡ, ನಿಯಮ ಹೇರಿ ಸ್ಥಳೀಯ ಗುತ್ತಿಗೆದಾರರನ್ನು ಅನರ್ಹಗೊಳಿಸಿ, ಬೇರೆ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹಲವು ಕಾಮಗಾರಿ ಒಗ್ಗೂಡಿಸಿ ಪ್ಯಾಕೇಜ್ ಪದ್ಧತಿಯಡಿ ಟೆಂಡರ್ ಕರೆಯಲಾಗುತ್ತಿದೆ. ಇದರಿಂದ ಮಧ್ಯಮ ವರ್ಗದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಪ್ಯಾಕೇಜ್ ಟೆಂಡರ್ ಪದ್ಧತಿ ಕೈಬಿಡಬೇಕು ಎಂದು ಆಗ್ರಹಿಸಿದರು. ಅಧ್ಯಕ್ಷ ಆರ್.ಡಿ.ಪದ್ಮಣ್ಣವರ, ಉಪಾಧ್ಯಕ್ಷ ಎಸ್.ಆರ್.ಘೂಳಪ್ಪನವರ, ಸಿ.ಎಂ.ಜೋನಿ, ಎಸ್.ಸಿ.ಗುಡಸ್ ಇತರರಿದ್ದರು.
***
ಕನಿಷ್ಠ ಸಂಬಳವನ್ನು ಜಾರಿಗೊಳಿಸಿ
ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ(ಮಾಸಿಕ ₹26 ಸಾವಿರ) ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು(ಸಿಐಟಿಯು) ಕೊಂಡಸಕೊಪ್ಪ ಗುಡ್ಡದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ‘ಸಿ’ ಮತ್ತು ‘ಡಿ’ ದರ್ಜೆ ನೌಕರರಾಗಿ ಪರಿಗಣಿಸಿ, ಸೇವೆ ಕಾಯಂಗೊಳಿಸಬೇಕು. ಎಲ್ಲ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಬೇಕು. ಅಂಗನವಾಡಿ ಕೇಂದ್ರದ ಚಟುವಟಿಕೆಗಳ ದಾಖಲೆಗಳನ್ನು ಮೊಬೈಲ್‌ನಲ್ಲೇ ನಿರ್ವಹಿಸಿದರೆ, ದಾಖಲೆಗಳಲ್ಲಿ ಬರೆಯುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಗೈಬು ಜೈನೇಖಾನ್, ದೊಡ್ಡವ್ವ ಪೂಜಾರ, ಗೋಧಾವರಿ, ಶಾರದಾ ರೋಣದ ಇತರರಿದ್ದರು.
ಕೇಂದ್ರದ ಗಮನಕ್ಕೆ ತಂದಿದ್ದೇವೆ: ಹೆಬ್ಬಾಳಕರ
‘ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಅವರನ್ನು ಭೇಟಿಯಾಗಿ, ನಿಮ್ಮ ಗೌರವಧನ ಹೆಚ್ಚಿಸುವ ಸಂಬಂಧ ಮನವಿ ಸಲ್ಲಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆ ಆಲಿಸಿದ ನಂತರ ಮಾತನಾಡಿದ ಅವರು, ‘ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮೆ ಯೋಜನೆ ಜಾರಿ, ವೇತನ ಪರಿಷ್ಕರಣೆ, ಮೊಟ್ಟೆ ದರ ಪರಿಷ್ಕರಣೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ನಿಮ್ಮ ವೇತನ ಹೆಚ್ಚಿಸುವ ಸಂಬಂಧ ಮುಖ್ಯಮಂತ್ರಿಗಳ ಜತೆ ಮಾತನಾಡುವೆ’ ಎಂದು ಭರವಸೆ ಕೊಟ್ಟರು.
***
ಶೇ.3ರಷ್ಟು ಮೀಸಲಾತಿ ನಿಗದಿಪಡಿಸಿ
‘ಶೋಷಿತ ಸಮುದಾಯಗಳ ಸರ್ವಾಂಗೀಣ ಪ್ರಗತಿಗಾಗಿ ಸಂವಿಧಾನ ಕಲ್ಪಿಸಿದ ಒಳಮೀಸಲಾತಿಯಲ್ಲಿ ಶೇ.3ರಷ್ಟನ್ನು ಅಲೆಮಾರಿ ಸಮುದಾಯಗಳಿಗೆ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿ, ಪರಿಶಿಷ್ಟ ಜಾತಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿಯವರು ಕೊಂಡಸಕೊಪ್ಪ ಗುಡ್ಡದಲ್ಲಿ ಪ್ರತಿಭಟಿಸಿದರು.
‘ಕಳೆದ 75 ವರ್ಷಗಳಿಂದ ಅಲೆಮಾರಿ ಸಮುದಾಯಗಳಿಗೆ ಸಂವಿಧಾನಬದ್ಧವಾಗಿ ಮೀಸಲಾತಿ ಸಿಕ್ಕಿಲ್ಲ. ಸಾರ್ವಜನಿಕ ವಲಯದಲ್ಲಿ ಅವಕಾಶ ಸಿಗದ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ದೊರಕಿಸಬೇಕು’ ಎಂದು ಆಗ್ರಹಿಸಿದರು. ಮುಖಂಡರಾದ ವೀರೇಶ ಕೆ., ಚಾವಡೆ ಲೋಕೇಶ, ಲೋಹಿತಾಶಾ, ಹನುಮಂತಪ್ಪ ಒಂಟೆದ್ದ ಇತರರಿದ್ದರು.
ಹೋರಾಟಕ್ಕೆ ಬೆಂಬಲ ಸೂಚಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎನ್.ರವಿಕುಮಾರ, ‘ನಿಮ್ಮ ಹೋರಾಟ ನ್ಯಾಯಯುತವಾಗಿದೆ. ನಿಮ್ಮ ಪರವಾಗಿ ಸದನದಲ್ಲಿ ಧ್ವನಿ ಎತ್ತುತ್ತೇವೆ’ ಎಂದು ಭರವಸೆ ಕೊಟ್ಟರು.
ಶೇ.4ರಷ್ಟು ಮೀಸಲಾತಿ ಜಾರಿಗೊಳಿಸಿ
ರಾಜ್ಯದಲ್ಲಿ ಮುಸ್ಲಿಮರಿಗೆ ಪ್ರವರ್ಗ ‘2ಬಿ’ ಅಡಿ ಶೇ.4ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಅಂಜುಮನ್–ಎ–ಇಸ್ಲಾಂ ಮತ್ತು ವಿವಿಧ ಅಲ್ಪಸಂಖ್ಯಾತರ ಸಂಘಟನೆಯವರು ಪ್ರತಿಭಟನೆ ಮಾಡಿದರು.
ನೇತೃತ್ವ ವಹಿಸಿದ್ದ ಇಸ್ಲಾಂ ಧರ್ಮಗುರು ಮುಫ್ತಿ ಮಂಜೂರ್ ಅಹ್ಮದ್ ರಿಝ್ವಿ, ‘ಕರ್ನಾಟಕದಲ್ಲಿ ಮುಸ್ಲಿಮರಿಗೆ ಈ ಹಿಂದೆ ‘2ಬಿ’ ಅಡಿ ಶೇ.4 ಮೀಸಲಾತಿ ಕೊಡಲಾಗುತ್ತಿತ್ತು. ಹಿಂದಿನ ಬಿಜೆಪಿ ಸರ್ಕಾರ ಅದನ್ನು ಕಸಿದುಕೊಂಡಿತ್ತು. ಕಸಿದುಕೊಂಡ ಮೀಸಲಾತಿ ಮರಳಿಸಿ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಒತ್ತಾಯಿಸಿದರು.
₹200 ಕೋಟಿ ಅನುದಾನ ಮೀಸಲಿಡಿ
ಹಿಂದಿನ ಬಿಜೆಪಿ ಸರ್ಕಾರ ರಚಿಸಿದ್ದ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಕ್ರಿಯಾಶೀಲಗೊಳಿಸಿ, ಅದರ ಚಟುವಟಿಕೆಗಳನ್ನು ಆರಂಭಿಸಬೇಕು. ಅಧಿಕೃತ ಕಚೇರಿ ತೆರೆಯಬೇಕು. ಜತೆಗೆ, ಮುಂದಿನ ಬಜೆಟ್‌ನಲ್ಲಿ ₹200 ಕೋಟಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿ, ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದವರು ಪ್ರತಿಭಟನೆ ಮಾಡಿದರು. ಕೋಲ್ಹಾರದ ಕಲ್ಲಿನಾಥ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮುಖಂಡರಾದ ಆನಂದ ಕೆ.ಮಂಡ್ಯ, ನಂದು ಹಡಗಿ ಇತರರಿದ್ದರು.
***
ಪಾರಂಪರಿಕ ವೈದ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿ
ಪಾರಂಪರಿಕ ವೈದ್ಯ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಮತ್ತು ಸಂಘಗಳ ಒಕ್ಕೂಟದವರು ಪ್ರತಿಭಟಿಸಿದರು.
ತಲೆಮಾರುಗಳಿಂದ ಮಾಡುತ್ತ ಬಂದಿರುವ ಪಾರಂಪರಿಕ ವೈದ್ಯ ವೃತ್ತಿಗೆ ಮಾನ್ಯತೆ ಒದಗಿಸಬೇಕು. ಹಿರಿಯ ಪಾರಂಪರಿಕ ವೈದ್ಯರನ್ನು ಗುರುತಿಸಿ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಪುರಸ್ಕಾರ ನೀಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಲೋಕೇಶ ಟೀಕಲ್, ಆನಂದ ಹೇರೂರು ಇತರರಿದ್ದರು.
ಸುವರ್ಣ ವಿಧಾನಸೌಧ ಬಳಿಯ ವೇದಿಕೆಯಲ್ಲಿ ಪಾರಂಪರಿಕ ವೈದ್ಯರು ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.