ADVERTISEMENT

ವಕ್ಫ್ ಆಸ್ತಿ ವಿವಾದ: ವಿಧಾನಪರಿಷತ್‌ನಲ್ಲಿ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 23:30 IST
Last Updated 9 ಡಿಸೆಂಬರ್ 2024, 23:30 IST
<div class="paragraphs"><p>ವಕ್ಫ್ ಆಸ್ತಿ ವಿಚಾರದ ಕುರಿತು ವಿಧಾನಪರಿಷತ್‌ನಲ್ಲಿ ವಾಕ್ಸಮರ ನಡೆಯುತ್ತಿದ್ದಾಗ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕಾಂಗ್ರೆಸ್‌ನ ನಜೀರ್ ಅಹಮದ್‌ ಮತ್ತು ಬಿ.ಕೆ. ಹರಿಪ್ರಸಾದ್ ಜೊತೆ&nbsp;ಚರ್ಚೆ ನಡೆಸಿದರು </p></div>

ವಕ್ಫ್ ಆಸ್ತಿ ವಿಚಾರದ ಕುರಿತು ವಿಧಾನಪರಿಷತ್‌ನಲ್ಲಿ ವಾಕ್ಸಮರ ನಡೆಯುತ್ತಿದ್ದಾಗ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕಾಂಗ್ರೆಸ್‌ನ ನಜೀರ್ ಅಹಮದ್‌ ಮತ್ತು ಬಿ.ಕೆ. ಹರಿಪ್ರಸಾದ್ ಜೊತೆ ಚರ್ಚೆ ನಡೆಸಿದರು

   

ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್

ಸುವರ್ಣ ವಿಧಾನಸೌಧ (ಬೆಳಗಾವಿ): ವಕ್ಫ್ ಆಸ್ತಿ ವಿಚಾರ ವಿಧಾನಮಂಡಲ ಅಧಿವೇಶನದ ಮೊದಲ ದಿನವಾದ ಸೋಮವಾರ ವಿಧಾನಪರಿಷತ್‌ನಲ್ಲಿ ಆಡಳಿತರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ಸದಸ್ಯರ ನಡುವೆ ವಾದ- ಪ್ರತಿವಾದವು ಕಾವೇರಿದ ವಾಕ್ಸಮರಕ್ಕೆ ಕಾರಣವಾಯಿತು‌.

ADVERTISEMENT

ಮಾತಿನ ಜಟಾಪಟಿ ನಿಯಂತ್ರಿಸಲು ಸಭಾಪತಿ ಬಸವರಾಜ ಹೊರಟ್ಟಿ ಎದ್ದು ನಿಂತು ಎಚ್ಚರಿಕೆ ನೀಡಬೇಕಾಗಿ ಬಂತು. ಅಲ್ಲದೆ, 10 ನಿಮಿಷ ಸದನ ಮುಂದೂಡಿದರು. ಗದ್ದಲ ಮುಂದುವರಿದ ಕಾರಣ ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ನಿಯಮ 68ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ವಕ್ಫ್ ಕುರಿತು ಇರುವ 1974ರ ಗೆಜೆಟ್ ಅನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು. 2013ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಕ್ಫ್ ಮಂಡಳಿಗೆ ಪರಮಾಧಿಕಾರ ಸಿಕ್ಕಿದೆ. ಪಹಣಿಯ ಕಾಲಂ 11ರಲ್ಲಿ ವಕ್ಫ್ ಎಂದು ನಮೂದಿಸಲಾಗಿದೆ. ರೈತರಿಂದ ಜಮೀನು ಮಾಲೀಕತ್ವ ಕೈಬಿಟ್ಟು ಹೋಗುತ್ತಿದ್ದು, ರೈತರು ಆತಂಕದಲ್ಲಿದ್ದಾರೆ’ ಎಂದರು.

ಆಗ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ‘ಸದನಕ್ಕೆ ತಪ್ಪು ಮಾಹಿತಿ ನೀಡಲಾಗುತ್ತಿದೆ’ ಎಂದು ಆರೋಪಿಸಿದರು. ‘ವಕ್ಫ್ ಸಂಬಂಧಿತ ಪ್ರಕರಣಗಳು ಜಿಲ್ಲಾ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್‌ವರೆಗೂ ವಿಚಾರಣೆ ಹಂತದಲ್ಲಿವೆ’ ಎಂದು ಏರುಧ್ವನಿಯಲ್ಲಿ ಪ್ರಸ್ತಾಪಿಸಿದರು. ಸಭಾನಾಯಕ ಎನ್.ಎಸ್‌. ಬೋಸರಾಜು, ಸದಸ್ಯರಾದ ನಜೀರ್‌ ಅಹಮದ್, ಸಲೀಂ ಅಹಮದ್‌ ಮತ್ತಿತರರು ದನಿಗೂಡಿಸಿದರು.

ಮಾತು ಮುಂದುವರಿಸಿದ ನಾರಾಯಣಸ್ವಾಮಿ, ‘ರಾಜ್ಯದಲ್ಲಿ ಹಲವಡೆ ದಲಿತರ ಶವ ಸಂಸ್ಕಾರಕ್ಕೆ ಜಾಗವಿಲ್ಲ. ಏಕಾಏಕಿ ಒಂದೇ ಅಲ್ಪಸಂಖ್ಯಾತ ಸಮುದಾಯದವರ ಹೆಸರಿಗೆ ಸಾವಿರಾರು ಎಕರೆ ಜಮೀನು ಉದ್ಭವಿಸುತ್ತಿರುವುದು ಹೇಗೆ. ಅಲ್ಪಸಂಖ್ಯಾತರ ಹಕ್ಕು ಎಂದು ಮಾತನಾಡುವ ಆಡಳಿತ ಪಕ್ಷಕ್ಕೆ ಕೇವಲ ಒಂದೇ ಸಮುದಾಯದ ಕಾಣುತ್ತಿದೆ. ಅಲ್ಪಸಂಖ್ಯಾತರಲ್ಲಿ ಜೈನ್, ಕ್ರಿಶ್ಚಿಯನ್ ಸೇರಿದಂತೆ ಇತರೆ ಸಮುದಾಯಗಳೂ ಇವೆ. ಅಂತಹ ಸಮುದಾಯಗಳಿಗೂ ಜಮೀನು ಹಂಚಿಕೆ ಆಗಬೇಕಲ್ಲವೇ’ ಎಂದು ಪ್ರಶ್ನಿಸಿದರು.

ವಕ್ಫ್ ವಿಚಾರ ಚರ್ಚೆ ನಡೆಯುತ್ತಿದ್ದಾಗ ಪ್ರಿಯಾಂಕ್ ಖರ್ಗೆ ಆಗಾಗ ಮಧ್ಯಪ್ರವೇಶಿಸುವುದನ್ನು ಆಕ್ಷೇಪಿಸಿದ ಛಲವಾದಿ ನಾರಾಯಣಸ್ವಾಮಿ, ‘ಏ ಕುತ್ಕೋಳ್ರಿ ಸಾಕು’ ಎಂದು ಸಂಬೋಧಿಸಿದಾಗ ಸಿಟ್ಟಾದ ಪ್ರಿಯಾಂಕ್ ಖರ್ಗೆ, ‘ನೀವು ಕುತ್ಕೊಳ್ರಿ. ದಾಖಲೆ ಇಲ್ಲದೇ ಸುಳ್ಳು ಮಾಹಿತಿ ಸದನದಲ್ಲಿ ಪ್ರಸ್ತಾಪಿಸಬೇಡಿ' ಎಂದರು. ಈ ವೇಳೆ ಗಲಾಟೆ ಜೋರಾಯಿತು.

ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ನಿವೃತ್ತ ಅಧಿಕಾರಿಗಳು ತೆರೆಯ ಹಿಂದೆ ವಕ್ಫ್ ಆಸ್ತಿ ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿ ಪಹಣಿಯಲ್ಲಿ ವಕ್ಫ್ ಹೆಸರು ಬರುವಂತೆ ನೋಡಿಕೊಳ್ಳುತ್ತಿದ್ದಾರೆ.
–ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ
ಯಾರದ್ದೋ ಪಹಣಿಯ ಕಾಲಂ ನಂ. 11ರಲ್ಲಿ ಮತ್ಯಾರದ್ದೊ ಹೆಸರನ್ನು ಏಕಾಏಕಿ ನಮೂದಿಸಲು ಹೇಗೆ ಸಾಧ್ಯ?
–ಎನ್. ರವಿಕುಮಾರ್, ಬಿಜೆಪಿ ಸದಸ್ಯ
ಪಹಣಿ ಕಾಲಂ ನಂ. 11ರಲ್ಲಿ ವಕ್ಪ್ ಎಂದು ನಮೂದಿಸಿದ ಮಾತ್ರಕ್ಕೆ ವಕ್ಫ್ ಮಾಲೀಕತ್ವ ಸಿಗಲಿದೆ ಎಂಬುದು ಸುಳ್ಳು. ಕಾಲಂ 9ರಲ್ಲಿ ನಮೂದಾದ ಹೆಸರಿನವರು ಮಾತ್ರ ಮಾಲೀಕರಾಗುತ್ತಾರೆ.
–ಪ್ರಿಯಾಂಕ್ ಖರ್ಗೆ, ಸಚಿವ

ರಾಜೀನಾಮೆ ಸವಾಲ್‌– ಜವಾಬ್

2013ರಲ್ಲಿ ವಕ್ಫ್ ಮಂಡಳಿಗೆ ಪರಮಾಧಿಕಾರ ನೀಡಿರುವ ಕುರಿತು ತಿದ್ದುಪಡಿಯಾಗಿದ್ದರೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್‌ನ ನಜೀರ್‌ ಅಹ್ಮದ್‌ ಸವಾಲು ಹಾಕಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಸಿ.ಟಿ. ರವಿ ‘ದೇಶದಲ್ಲಿ ಇಸ್ಲಾಂ ಧರ್ಮವೇ ಹುಟ್ಟಿರದ ಕಾಲದಲ್ಲಿ 1500 ವರ್ಷಗಳ ಹಿಂದೆ ನಿರ್ಮಾಣವಾದ ಚಾಲುಕ್ಯರ ಕಾಲದ ಸೋಮೇಶ್ವರ ದೇವಾಲಯ ವಕ್ಫ್ ಆಸ್ತಿ ಹೇಗಾಗುತ್ತದೆ? ಇಂತಹ ಪರಮಾಧಿಕಾರ ಕೊಟ್ಟವರು ಯಾರು? ನಾನೂ ರಾಜೀನಾಮೆ ಸವಾಲು ಸ್ವೀಕರಿಸುತ್ತೇನೆ’ ಎಂದರು.

ಈ ವೇಳೆ ಕ್ರಿಯಾಲೋಪ ಎತ್ತಿದ ಬಿ.ಕೆ. ಹರಿಪ್ರಸಾದ್ ‘2013ರಲ್ಲಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಹರಿಯಾಣ ಪಂಜಾಬ್ ಹಿಮಾಚಲ ರಾಜ್ಯಕ್ಕೆ ಸಂಬಂಧಿಸಿದಂತೆ ದರ್ಗಾ ಸ್ಮಶಾನ ವಿಚಾರದಲ್ಲಿ ಸಣ್ಣ ತಿದ್ದುಪಡಿ ಆಗಿದೆ. ಸಿ.ಟಿ. ರವಿ ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದರು.

ಹರಿಪ್ರಸಾದ್ ಅವರ ಉತ್ತರವನ್ನೇ ಪ್ರಶ್ನಿಸಿದ ಸಿ.ಟಿ. ರವಿ ‘ಹೌದು ಸ್ವಾಮೀ ಹಾಗಿದ್ದರೆ ವಕ್ಫ್‌ಗೆ ಪರಮಾಧಿಕಾರ ನೀಡಿದ್ದು ಹೇಗೆ? ಯಾಕೆ? ಎಲ್ಲಿ? ಎಂಬುದನ್ನು ತಿಳಿಸಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.