ADVERTISEMENT

ಧರ್ಮಸ್ಥಳ ಪ್ರಕರಣ | ಮನೆ–ಮನೆ ಪೋಸ್ಟರ್ ಅಭಿಯಾನ: ವಿಮೆನ್ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 22:46 IST
Last Updated 19 ಜುಲೈ 2025, 22:46 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಮಂಗಳೂರು: ‘ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಕೊಲೆ ಕೃತ್ಯದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಆಸಕ್ತಿ ತೋರದಿರುವುದನ್ನು ಗಮನಿಸಿದರೆ, ಇದರ ಹಿಂದೆ ದೊಡ್ಡ ವ್ಯವಸ್ಥೆಯೇ ಶಾಮೀಲಾಗಿರುವ ಅನುಮಾನ ಮೂಡುತ್ತಿದೆ’ ಎಂದು ವಿಮೆನ್ ಇಂಡಿಯಾ ಮೂವ್‌ಮೆಂಟ್‌ನ ರಾಜ್ಯ ಘಟಕದ ಅಧ್ಯಕ್ಷೆ ಫಾತಿಮಾ ನಸೀಮಾ ಹೇಳಿದರು.

ADVERTISEMENT

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೊಲೀಸ್ ಇಲಾಖೆಯು ತನಿಖೆಗೆ ವಿಳಂಬ ಮಾಡುವುನ್ನು ನೋಡಿದರೆ, ಸಾಕ್ಷಿ ನಾಶಕ್ಕೆ ಈ ರೀತಿ ಮಾಡುತ್ತಿರುವ ಬಗ್ಗೆ ಸಂಶಯ ಮೂಡಿದೆ. ಹೆಣ್ಣು ಮಕ್ಕಳ ರಕ್ಷಣೆಗೆ ತಾವಿರುವುದಾಗಿ ಹೇಳಿಕೊಳ್ಳುವ ಹಿಂದೂ ನಾಯಕರು ಈಗ ಎಲ್ಲಿದ್ದಾರೆ? ಲವ್ ಜಿಹಾದ್ ಹೆಸರಿನಲ್ಲಿ ಇಲ್ಲದ ಹೆಣ್ಣು ಮಕ್ಕಳನ್ನು ಹುಡುಕುವ ಹಿಂದೂ ನಾಯಕರಿಗೆ, ಹೂತಿಟ್ಟ ಹೆಣಗಳಲ್ಲಿ ಅವರು ಹುಡುಕುವ ಹುಡುಗಿಯರನ್ನು ಹುಡುಕಲಿ’ ಎಂದರು.

‘ಇಷ್ಟು ಗಂಭೀರ ಪ್ರಕರಣದ ವಿರುದ್ಧ ಪ್ರತಿಭಟಿಸಲು ಪೊಲೀಸ್ ಇಲಾಖೆ ಅವಕಾಶ ನೀಡುತ್ತಿಲ್ಲ. ಹೀಗಾಗಿ, ಸಂಘಟನೆಯು ಮನೆ–ಮನೆ ತಲುಪುವ ಪೋಸ್ಟರ್ ಅಭಿಯಾನ ನಡೆಸಲಿದೆ. ಈ ಘಟನೆ ಸಂಬಂಧ ನ್ಯಾಯಾಧೀಶರ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ, ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ, ರಾಜ್ಯ ಸಮಿತಿ ಸದಸ್ಯೆ ಜಬೀನ್ ಮೈಸೂರು, ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯೆ ಆಯಿಷಾ ಬೆಂಗಳೂರು, ಶಮೀಮಾ ತುಂಬೆ, ಝಾಹಿದಾ ಪುತ್ತೂರು ಉಪಸ್ಥಿತರಿದ್ದರು.

ಎಸ್‌ಐಟಿ ತನಿಖೆಗೆ ಆಗ್ರಹ:

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಪ್ರಕರಣದ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು.  ನೊಂದವರಿಗೆ ನ್ಯಾಯ ಒದಗಿಸಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿ ಪ್ರಕಟಣೆಯಲ್ಲಿ ಒತ್ತಾಯಿಸಿದೆ.

ರಾಜ್ಯಸಭಾ ಸ್ಥಾನಕ್ಕೆ ಹೆಗ್ಗಡೆ ರಾಜೀನಾಮೆ ನೀಡಲಿ–ರವಿಕೃಷ್ಣ ರೆಡ್ಡಿ

ಬಳ್ಳಾರಿ: ‘ಸೌಜನ್ಯ ಅತ್ಯಾಚಾರ ಪ್ರಕರಣ ಮತ್ತು ಇತ್ತೀಚೆಗೆ ಕೇಳಿ ಬಂದಿರುವ ಸರಣಿ ಕೊಲೆಗಳ ಆರೋಪಗಳಿಂದಾಗಿ ಧರ್ಮಸ್ಥಳದ ಪಾವಿತ್ರ್ಯ ಹಾಳಾಗಿದೆ. ಇದರ ನೈತಿಕ ಹೊಣೆ ಹೊತ್ತು ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕು‘ ಎಂದು ಕೆಆರ್‌ಎಸ್‌ ಪಕ್ಷದ ಸಂಸ್ಥಾಪಕ ರವಿಕೃಷ್ಣ ರೆಡ್ಡಿ ಆಗ್ರಹಿಸಿದ್ದಾರೆ. 

ಬಳ್ಳಾರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಧರ್ಮಸ್ಥಳದ ವ್ಯಕ್ತಿಯೊಬ್ಬರು ಹಲವು ಅನಾಥ ಶವಗಳ ಅಂತ್ಯಸಂಸ್ಕಾರ ನಡೆಸಿರುವುದಾಗಿ ಹೇಳಿದ್ದಾರೆ. ಅನಾಥ ಹೆಣಗಳನ್ನು ಹೇಗೆಂದರೆ ಹಾಗೆ ಅಂತ್ಯಸಂಸ್ಕಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಿದ್ದರೂ, ಅಂತ್ಯಸಂಸ್ಕಾರ ನಡೆದಿದ್ದು ಯಾಕೆ. ಈ ವಿಷಯ ಬಹಿರಂಗಪಡಿಸಿದ ವ್ಯಕ್ತಿಗೆ ಭದ್ರತೆ ಒದಗಿಸಬೇಕು, ಅವನ ಹೇಳಿಕೆ ಬಗ್ಗೆ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.