ADVERTISEMENT

ಮಹಿಳೆಯರಿಗಾಗಿ ‘ಆ್ಯಪ್‌’: ಮಹಿಳಾ ಆಯೋಗ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಇಂಗಿತ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 19:59 IST
Last Updated 27 ಏಪ್ರಿಲ್ 2020, 19:59 IST
ಪ್ರಮೀಳಾ ನಾಯ್ಡು
ಪ್ರಮೀಳಾ ನಾಯ್ಡು   

ಬೆಂಗಳೂರು: ನೊಂದ ಮಹಿಳೆಯರ ದೂರು– ದುಮ್ಮಾನ ಆಲಿಸಿ, ತ್ವರಿತವಾಗಿಸಾಂತ್ವನ– ಪರಿಹಾರ ಒದಗಿಸುವ ಉದ್ದೇಶದಿಂದ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲು ರಾಜ್ಯ ಮಹಿಳಾ ಆಯೋಗ ನಿರ್ಧರಿಸಿದೆ.

‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಈ ವಿಷಯ ತಿಳಿಸಿದರು.

‘ಸದ್ಯ ಲಿಖಿತವಾಗಿ ಮತ್ತು ಇ–ಮೇಲ್‌ ಮೂಲಕ ದೂರುಗಳನ್ನು ಸ್ವೀಕರಿಸಲಾಗುತ್ತಿದೆ. ಇನ್ನು ಮುಂದೆ ಈ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲು ಮತ್ತು ವಾಟ್ಸ್‌ಆ್ಯಪ್‌ ಮೂಲಕ ದೂರು ಸಲ್ಲಿಸುವ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ’ ಎಂದರು.

ADVERTISEMENT

‘ನೆರವು ಬಯಸಿ ಆಯೋಗ ಕದ ತಟ್ಟುವ ಅಸಹಾಯಕ, ಸಂತ್ರಸ್ತ ಮಹಿಳೆಯರಿಗೆ ಅತಿ ಶೀಘ್ರ ಉಚಿತ ಕಾನೂನು ಅರಿವು –ನೆರವು ನೀಡಬೇಕಿದೆ. ಕೌಟುಂಬಿಕ ಸಮಸ್ಯೆಗಳಿಗೆ ಅತ್ಯಂತ ವೈಜ್ಞಾನಿಕ ನೆಲೆಗಟ್ಟಿನ ಆಪ್ತ ಸಮಾಲೋಚನೆ ಮೂಲಕ ಪರಿಹಾರ ನೀಡಬೇಕಿದೆ. ಈ ನಿಟ್ಟಿನಲ್ಲೂ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆಗೂ ಚರ್ಚಿಸಿದ್ದೇನೆ’ ಎಂದರು.

‘ಆಯೋಗದ ಕಾರ್ಯಚಟುವಟಿಕೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೂ ಒಯ್ಯಬೇಕಿದೆ. ರಾಯಚೂರು, ಬಾಗಲಕೋಟೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಈಗಾಗಲೇ ಈ ಕೆಲಸಕ್ಕೆ ಕೈ ಹಾಕಿದ್ದೇವೆ. ಈ ಉದ್ದೇಶಕ್ಕೆ ಸರ್ಕಾರೇತರ ಸಂಸ್ಥೆಗಳ (ಎನ್‌ಜಿಓ) ನೆರವು ಪಡೆಯಲಾಗುತ್ತಿದೆ’ ಎಂದೂ ನಾಯ್ಡು ವಿವರಿಸಿದರು.

‘ಪ್ರತಿಯೊಬ್ಬ ಮಹಿಳೆ ಸ್ವ ಸುರಕ್ಷತೆಯ ವಿಧಾನಗಳನ್ನು ರೂಪಿಸಿ, ಅಳವಡಿಸಿಕೊಳ್ಳಲು ಒತ್ತು ನೀಡಲಾಗುತ್ತಿದೆ. ಶಾಲಾ– ಕಾಲೇಜುಮಟ್ಟದಲ್ಲೇ ಕರಾಟೆ ಸೇರಿದಂತೆ ಇತರ ವಿಷಯಗಳ ಕುರಿತು ತರಬೇತಿ ನೀಡಬೇಕಿದೆ. ಈ ಬಗ್ಗೆ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡುತ್ತೇನೆ’ ಎಂದರು. ‘ನಿರಾಶೆ– ಹತಾಶೆಯಿಂದ ಆತ್ಮಹತ್ಯೆಯಂಥ ನಿರ್ಧಾರಕ್ಕೆ ಬರುವುದು ಹೇಡಿತನ. ಅಂಥವರ ರಕ್ಷಣೆಗೆ ಆಯೋಗ ಇದೆ ಎನ್ನುವ ಸಂದೇಶವನ್ನು ಪ್ರಚುರಪಡಿಸುತ್ತಿದ್ದೇವೆ’ ಎಂದರು.

ಲಕ್ಷ್ಮೇಶ್ವರದ ಮಾನಸಿಕ ಅಸ್ವಸ್ಥರೊಬ್ಬರಿಗೆ ಧಾರವಾಡದಿಂದ ಔಷಧ ತರಿಸುವ ವ್ಯವಸ್ಥೆ ಮಾಡಿದ ಅಧ್ಯಕ್ಷರು, ಪಡಿತರ ಸಿಗದೆ ಕಂಗಾಲಾಗಿದ್ದ ಬೆಂಗಳೂರಿನ ವೃದ್ಧೆಯೊಬ್ಬರಿಗೆ ಪಾಲಿಕೆ ಸದಸ್ಯರಿಗೆ ಕರೆ ಮಾಡಿ ಪಡಿತರದ ವ್ಯವಸ್ಥೆ ಮಾಡಿದರು. ಕೌಟುಂಬಿಕ ದೌರ್ಜನ್ಯ, ಆಸ್ತಿ ನೀಡದೆ ವಂಚನೆಯಂತಹ ಹಲವು ಸಮಸ್ಯೆಗಳನ್ನು ಹೇಳಿಕೊಂಡಾಗ ತಮ್ಮ ಮೊಬೈಲ್‌ ನಂಬರ್‌ ಅನ್ನೇ ಕೊಟ್ಟು, ಸಮಸ್ಯೆಗಳಿಗೆ ಖುದ್ದು ಪರಿಹಾರ ಸೂಚಿಸುವ ಇಂಗಿತ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.