
ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 1,800 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳು ನಡೆದಿವೆ. ಆದರೆ, ಸರ್ಕಾರ ಮಾತ್ರ ಮಹಿಳೆಯ ರಕ್ಷಣೆಯ ಬಗ್ಗೆ ಮೌನವಹಿಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ‘ಕಿಲ್ಲರ್ ಕಾಂಗ್ರೆಸ್ ಸರ್ಕಾರ’ ಎಂಬ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಮುಖ್ಯಮಂತ್ರಿಯವರ ತವರು ಮೈಸೂರಿನಲ್ಲಿ ದಸರಾ ವೇಳೆ ಬಲೂನ್ ಮಾರುವ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿರುವ ಹೇಯ ಘಟನೆ ನಡೆದಿದೆ. ಸರ್ಕಾರಕ್ಕೆ ಸಂವೇದನೆಯೇ ಇಲ್ಲ ಎಂದು ದೂರಿದರು.
ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ, ಬೆಳಗಾವಿ ಅಧಿವೇಶನದ ಸಂದರ್ಭ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ, ಮೂಡುಬಿದಿರೆಯ ಉಪನ್ಯಾಸಕ ವಿದ್ಯಾರ್ಥಿಯನ್ನು ಬೆಂಗಳೂರಿಗೆ ಕರೆತಂದು ಅತ್ಯಾಚಾರ ಎಸಗಿದ ಘಟನೆಗಳು ನಾಡನ್ನು ತಲ್ಲಣಗೊಳಿಸಿವೆ. ರಾಜ್ಯದಲ್ಲಿ ಜನರ ಪಾಲಿಗೆ ಸರ್ಕಾರ ಸತ್ತಿರುವುದರಿಂದ ಅಪರಾಧಿಗಳಿಗೆ ಧೈರ್ಯ ಬಂದಿದೆ. ಸರ್ಕಾರದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು, ಯಾರು ಉಪಮುಖ್ಯಮಂತ್ರಿ ಮತ್ತು ಸಚಿವಗಿರಿ ಉಳಿಸಿಕೊಳ್ಳಬೇಕು ಎಂಬ ಗುದ್ದಾಟದಲ್ಲಿ ತೊಡಗಿದ್ದಾರೆ ಎಂದು ಶೋಭಾ ಆರೋಪಿಸಿದರು.
‘ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 20ಕ್ಕೂ ಹೆಚ್ಚು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 15 ಕ್ಕೂ ಹೆಚ್ಚು ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ಯಾರಂಟಿಯೇ ನಿಮ್ಮ ಸಾಧನೆ ಎಂದು ಮಾತನಾಡುತ್ತಿದ್ದೀರಿ, ಸಾರ್ವಜನಿಕರ ಪ್ರಾಣಗಳಿಗೆ ಯಾರು ಗ್ಯಾರಂಟಿ? ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಹಿಡಿತವಿಲ್ಲದ ದುರ್ಬಲ ಗೃಹ ಸಚಿವರನ್ನು ಇಟ್ಟು ರಾಜ್ಯ ನಡೆಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
‘ಬೆಂಗಳೂರಿನಲ್ಲಿ ಸ್ಕೂಟರ್‌ನಲ್ಲಿ ಹೊರಟವರು ಮನೆಗೆ ವಾಪಸ್ ಬರುತ್ತಾರೆ ಎಂಬ ಗ್ಯಾರಂಟಿ ಇಲ್ಲ. ರಸ್ತೆ ಗುಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ. ಅತಿ ಹೆಚ್ಚು ಮಾದಕ ಪದಾರ್ಥಗಳನ್ನು ಬಳಸುವ ರಾಜಧಾನಿಯಾಗಿ ಬೆಂಗಳೂರು ಬದಲಾಗಿದೆ. ಯಾರನ್ನೋ ಧರ್ಮದ ಆಧಾರದಲ್ಲಿ, ಇನ್ನು ಯಾರನ್ನೊ ಜಾತಿ ಆಧಾರದಲ್ಲಿ ರಕ್ಷಿಸುವ ಮೂಲಕ ಪೊಲೀಸ್ ಇಲಾಖೆ ಹೆಸರನ್ನು ಕೆಡಿಸಿದ್ದೀರಿ’ ಎಂದು ಅವರು ಕಿಡಿಕಾರಿದರು.
ವಿಧಾನಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಹೇಮಲತಾ ನಾಯಕ್ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
‘ಮುಖ್ಯಮಂತ್ರಿಯವರ ಮನೆಯಿಂದಲೇ ಅವರ ಮೂಗಿನ ನೇರಕ್ಕೆ ಭ್ರಷ್ಟಾಚಾರ ನಡೆಯುತ್ತಿದೆ. ಮುಖ್ಯಮಂತ್ರಿ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಯತೀಂದ್ರ ಅವರು ಲಂಚ ತೆಗೆದುಕೊಂಡೇ ಕೆಲಸ ಮಾಡಿಕೊಡುತ್ತಿದ್ದಾರೆ’ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
‘ವ್ಯಕ್ತಿಯೊಬ್ಬರು ತಮ್ಮ ಮೃತ ಮಗಳ ಶವಪರೀಕ್ಷೆಗೂ ಲಂಚಕೊಡಬೇಕಾಯಿತು. ಪೊಲೀಸಿನವರೂ ಲಂಚ ಪಡೆದ ಘಟನೆಯಿಂದ ರಾಷ್ಟ್ರಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗಿದೆ’ ಎಂದು ಹೇಳಿದರು. ‘ಹಣವಿಲ್ಲದೆ ಮುಖ್ಯಮಂತ್ರಿ ಮನೆಗೆ ಹೋದರೆ ಯಾವುದೇ ಕೆಲಸ ನಡೆಯುವುದಿಲ್ಲ. ಅವರ ಮಗ ಲಂಚ ತೆಗೆದುಕೊಂಡು ಯಾವ ಕೆಲಸವನ್ನಾದರೂ ಮಾಡಿಕೊಡುತ್ತಾರೆ. ಇದು ಲಂಚಾವತಾರದ ಸರ್ಕಾರ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.