ADVERTISEMENT

ಮಹಿಳಾ ದಿನಾಚರಣೆ ದಿನವೇ ಮಹಿಳೆಗೆ ಅಗೌರವ: ರೇವಣ್ಣ ವಿರುದ್ಧ ಸಂಸದೆ ಶೋಭಾ ವಾಗ್ದಾಳಿ

ಸಚಿವ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 12:40 IST
Last Updated 8 ಮಾರ್ಚ್ 2019, 12:40 IST
ಶೋಭಾ ಕರಂದ್ಲಾಜೆ, ಸಂಸದೆ
ಶೋಭಾ ಕರಂದ್ಲಾಜೆ, ಸಂಸದೆ   

ಉಡುಪಿ: ಮಹಿಳಾ ದಿನಾಚರಣೆ ದಿನವೇ ಸುಮಲತಾ ಅವರ ವಿರುದ್ಧ ಸಚಿವ ಎಚ್‌.ಡಿ.ರೇವಣ್ಣ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಗಂಡ ಸತ್ತ ಬಳಿಕ ಹೆಣ್ಣುಮಕ್ಕಳು ರಾಜಕೀಯಕ್ಕೆ ಬರಬಾರದು ಎಂಬ ಕಾನೂನಿಲ್ಲ. ಗಂಡ ಸತ್ತು ನಿರ್ಧಿಷ್ಟ ಸಮಯ ಆಗುವವರೆಗೂ ರಾಜಕೀಯಕ್ಕೆ ಬರಬಾರದು ಎಂಬ ನಿಯಮವೂ ಇಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ರೇವಣ್ಣ ಮಹಿಳೆಯ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿರುವುದು ಸರಿಯಲ್ಲ. ತಕ್ಷಣ ಸುಮಲತಾ ಅವರ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.

ಸುಮಲತಾ ಪತಿಯನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ರಾಜಕೀಯಕ್ಕೆ ಬರುವ ಮೂಲಕ ಸಮಾಜಸೇವೆ ಮಾಡಿ ದುಃಖವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಮಹಿಳೆಯ ವಿರುದ್ಧ ಕ್ಷುಲ್ಲಕವಾಗಿ ಮಾತನಾಡಿದ್ದು ರೇವಣ್ಣ ಅವರ ಘನತೆಗೆ ತಕ್ಕುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

‘ಪತಿ ಅಂಬರೀಶ್‌ ಸುಧೀರ್ಘ ಕಾಲ ರಾಜಕೀಯದಲ್ಲಿದ್ದವರು. ಕಾವೇರಿ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಮನೆಯಲ್ಲಿದ್ದ ರಾಜಕೀಯ ವಾತಾವರಣದಿಂದ ಪ್ರೇರೇಪಿತರಾಗಿ ಸುಮಲತಾ ರಾಜಕೀಯಕ್ಕೆ ಬರುವ ಮನಸ್ಸು ಮಾಡಿದ್ದಾರೆ. ಇಂತಹ ಹೊತ್ತಿನಲ್ಲಿ ಅವರ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ’ ಎಂದರು.

ಸುಮಲತಾ ಪಕ್ಷೇತರವಾಗಿ ನಿಂತರೆ ಬಿಜೆಪಿ ಬೆಂಬಲ ನೀಡುವ ಕುರಿತು ಚರ್ಚೆ ಮಾಡಲಿದೆ. ಬೇರೆ ಪಕ್ಷದಿಂದ ನಿಂತರೆ ಬೆಂಬಲ ನೀಡುವುದಿಲ್ಲ. ಬಿಜೆಪಿಗೆ ಬಂದರೆ ಸ್ವಾಗತ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.