ADVERTISEMENT

ಬದುಕಿದ್ದರೆ ನನ್ನ ಮಗಳು, ಸತ್ತರೆ ದೇಶದ ಮಗಳು...

ಮಹದೇವ್ ಹೆಗ್ಗವಾಡಿಪುರ
Published 7 ಮಾರ್ಚ್ 2019, 19:29 IST
Last Updated 7 ಮಾರ್ಚ್ 2019, 19:29 IST
ಮಗಳು ಅಭಿಲಾಷ ಅವರೊಂದಿಗೆ ನಾಗರಾಜಮ್ಮ
ಮಗಳು ಅಭಿಲಾಷ ಅವರೊಂದಿಗೆ ನಾಗರಾಜಮ್ಮ   

ಚಾಮರಾಜನಗರ: ‘ನೀನು ಬದುಕಿದ್ದರೆ ನನ್ನ ಮಗಳು. ಸತ್ತರೆ ದೇಶದ ಮಗಳು, ಹೋಗಿ ಬಾ...’ ಎಂದು ಸೇನೆಗೆ ಆಯ್ಕೆಯಾಗಿರುವ ಮಗಳನ್ನು ಆಶೀರ್ವದಿಸಿ ಕಳುಹಿಸಿಕೊಟ್ಟಿದ್ದೇನೆ ಎಂದರು ನಾಗರಾಜಮ್ಮ.

ಸಂತೇಮರಹಳ್ಳಿ ಹೋಬಳಿ ಹೆಗ್ಗವಾಡಿ ಗ್ರಾಮದ ನಾಗರಾಜಮ್ಮ ಅವರ ಮಗಳು ಅಭಿಲಾಷ, 2008ರಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಗೆ (ಸಿಆರ್‌ಪಿಎಫ್‌) ಆಯ್ಕೆಯಾಗಿದ್ದರು. ಸೇನೆಗೆ ಆಯ್ಕೆಯಾಗಿರುವ ಜಿಲ್ಲೆಯ ಮೊದಲ ಹೆಣ್ಣು ಮಗಳು ಎಂಬ ಹೆಗ್ಗಳಿಕೆಯೂ ಅವರದ್ದು.

‘ಬಾಲ್ಯದಿಂದಲೇ ಚಟುವಟಿಕೆಯಿಂದಿದ್ದ ಅಭಿಲಾಷ ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿದ್ದಳು. ಸೇನೆಗೆ ಆಯ್ಕೆಯಾಗಲು ಬೇಕಾದ ಎಲ್ಲ ಅರ್ಹತೆ ಆಕೆಗಿತ್ತು. ಅವಳ ಧೈರ್ಯಮತ್ತು ಸಾಹಸ ಸೇನೆಗೆ ಕಳುಹಿಸಲು ನನ್ನನ್ನು ಪ್ರೇರೇಪಿಸಿತು. ದೇಶ ಕಾಯುವಂತಹ ಮಗಳನ್ನು ಹಡೆದ ನನಗೆ ಇದಕ್ಕಿಂತ ಬೇರೆ ಸಂತೋಷ ಯಾವುದೂ ಇಲ್ಲ’ .

ADVERTISEMENT

‘ಮಗಳನ್ನು ‌ಸೇನೆಗೆ ಕಳುಹಿಸಬೇಡ; ಸಾವು ಖಚಿತ ಎಂದು ಅಕ್ಕಪಕ್ಕದ ಮನೆಯವರು, ಗ್ರಾಮದ ಕೆಲವರು ಹೇಳಿದ್ದರು. ಆದರೆ, ದೇಶಸೇವೆ ಮಾಡುವಂತಹ ಪುಣ್ಯದ ಕೆಲಸ ಯಾವುದೂ ಇಲ್ಲ ಎಂದು ಧೈರ್ಯದಿಂದ ಒಪ್ಪಿಗೆ ನೀಡಿದ್ದೆ. ಆಯ್ಕೆಯಾದ ನಂತರ ಒಂದು ವರ್ಷ ಅವಳ ಸಂಪರ್ಕವೇ ಇರಲಿಲ್ಲ. ಆಕೆಗೆ ಏನಾಯಿತೋ ಎಂಬ ಚಿಂತೆ ಕಾಡುತ್ತಿತ್ತು. ಒಂದು ದಿನ ಅನಾಮಧೇಯ ಕರೆ ಬಂದು, ‘ಅಮ್ಮಾ... ನಾನು ಅಭಿಲಾಷ. ಈಗಷ್ಟೇ ತರಬೇತಿ ಮುಗಿಯಿತು ಗುಜರಾತಿನಲ್ಲಿ ಇದ್ದೇನೆ’ ಎಂದಾಗ ನಿಟ್ಟುಸಿರು ಬಿಟ್ಟೆ’ ಎಂದು ಸ್ಮರಿಸುತ್ತಾರೆ ನಾಗರಾಜಮ್ಮ. ಅಭಿಲಾಷ ಅವರು 10 ವರ್ಷಗಳ ಅವಧಿಯಲ್ಲಿ ಮಣಿಪುರ, ಗುಜರಾತ್‌ ಮತ್ತು ದೆಹಲಿಯಲ್ಲಿ ಸೇವೆ ಸಲ್ಲಿಸಿ ಈಗ ತೆಲಂಗಾಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.