ADVERTISEMENT

ಸ್ತನ ಕ್ಯಾನ್ಸರ್ ಪತ್ತೆಗೆ ಸಂಚಾರಿ ಪ್ರಯೋಗಾಲಯ: ಆರೋಗ್ಯ ಇಲಾಖೆ ಯೋಜನೆ

ವರುಣ ಹೆಗಡೆ
Published 10 ಏಪ್ರಿಲ್ 2021, 22:24 IST
Last Updated 10 ಏಪ್ರಿಲ್ 2021, 22:24 IST
ಡಾ.ಸಿ.ರಾಮಚಂದ್ರ
ಡಾ.ಸಿ.ರಾಮಚಂದ್ರ   

ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ ಹೊಸದಾಗಿ ಕ್ಯಾನ್ಸರ್ ಪೀಡಿತರಾಗುತ್ತಿರುವವರ ಪೈಕಿ ಶೇ 28 ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಗುರಿಯಾಗುತ್ತಿದ್ದಾರೆ. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿ, ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ತೋರುವ ಆಶಯದಡಿ ಸಂಚಾರಿ ಪ್ರಯೋಗಾಲಯ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ.

ಸದ್ಯ 70 ಸಾವಿರಕ್ಕೂ ಅಧಿಕ ಮಂದಿ ಕ್ಯಾನ್ಸರ್‌ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿನ ಸಾಂಕ್ರಾಮಿಕವಲ್ಲದ ರೋಗಗಳ ಕ್ಲಿನಿಕ್‌ಗಳಲ್ಲಿ (ಎನ್‌ಸಿಡಿ) ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳ ಬಗ್ಗೆ ತಪಾಸಣೆ ನಡೆಸಿ, ಕಾಯಿಲೆ ಪತ್ತೆ ಮಾಡಲಾಗುತ್ತಿದೆ.ಸದ್ಯ ರಾಜ್ಯದಲ್ಲಿ 30 ಜಿಲ್ಲಾ ಮಟ್ಟದ ಹಾಗೂ 243 ತಾಲ್ಲೂಕು ಮಟ್ಟದ ಎನ್‌ಸಿಡಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷ ಲಾಕ್‌ಡೌನ್ ಮತ್ತು ಕೋವಿಡ್ ಕಾಯಿಲೆಯ ನಡುವೆಯೂ 13.32 ಲಕ್ಷಕ್ಕೂ ಅಧಿಕ ಮಂದಿ ಈ ಕ್ಲಿನಿಕ್‌ಗಳಿಗೆ ತೆರಳಿ, ತಪಾಸಣೆ ಮಾಡಿಸಿಕೊಂಡಿದ್ದರು. ಅವರಲ್ಲಿ 1,052 ಮಂದಿಯಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಪುರುಷರಲ್ಲಿ ಹೆಚ್ಚಾಗಿ ಪ್ರಾಸ್ಟೇಟ್ ಕ್ಯಾನ್ಸರ್‌, ಬಾಯಿ ಕ್ಯಾನ್ಸರ್, ಜಠರ ಮತ್ತು ಅನ್ನನಾಳದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಮಹಿಳೆಯಲ್ಲಿ ಹೆಚ್ಚಿನವರು ಸ್ತನ ಕ್ಯಾನ್ಸರ್ ಎದುರಿಸುತ್ತಿದ್ದಾರೆ. ಅದೇ ರೀತಿ, ಗರ್ಭಕಂಠ ಮತ್ತು ಗರ್ಭಕೋಶದ ಕ್ಯಾನ್ಸರ್ ಸಹ ಇರುವುದು ದೃಢಪಡುತ್ತಿದೆ. ಆದರೆ, ಕ್ಯಾನ್ಸರ್ ತಪಾಸಣೆ ಸಂಬಂಧ ಕ್ಲಿನಿಕ್‌ಗಳು ಹಾಗೂ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಿಲ್ಲ. ಹೀಗಾಗಿ, ಆರೋಗ್ಯ ಇಲಾಖೆಯು ಸಂಚಾರಿ ಪ್ರಯೋಗಾಲಯದ ಮೂಲಕ ಮಹಿಳೆಯರು ಇರುವಲ್ಲಿಯೇ ತಪಾಸಣೆಗೆ ಒಳಪಡಿಸಲು ಮುಂದಾಗಿದೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸಹಯೋಗದಲ್ಲಿ ಈ ತಪಾಸಣೆ ನಡೆಯಲಿದೆ.

ADVERTISEMENT

‘ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್ ಪೀಡಿತರಾಗುತ್ತಿದ್ದಾರೆ. ಅವರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳದ ಕಾರಣ ಕೆಲವರಿಗೆ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಾಗಾಗಿ, ಸಂಚಾರಿ ಪ್ರಯೋಗಾಲಯದ ಮೂಲಕ ತಪಾಸಣೆಗೆ ಯೋಜನೆ ರೂಪಿಸಲಾಗಿದೆ’ ಎಂದು ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪನಿರ್ದೇಶಕ ಡಾ. ರಂಗಸ್ವಾಮಿ ತಿಳಿಸಿದರು.

ಸಮಸ್ಯೆ ಕಾಣಿಸಿಕೊಂಡಲ್ಲಿ ಹೆಚ್ಚಿನ ಚಿಕಿತ್ಸೆ
‘ಈ ಯೋಜನೆಗೆ ₹ 11 ಕೋಟಿ ವೆಚ್ಚವಾಗಲಿದೆ. ವ್ಯಾನ್‌ಗಳನ್ನು ಖರೀದಿಸಿ, ಪ್ರಾಯೋಗಿಕವಾಗಿ ಕೆಲ ಜಿಲ್ಲೆಗಳಲ್ಲಿ ಕಾರ್ಯಾರಂಭ ಮಾಡಲಾಗುತ್ತದೆ. ಕಿದ್ವಾಯಿ ಸಂಸ್ಥೆಯ ವ್ಯಾನ್‌ಗಳನ್ನೂ ಬಳಸಿಕೊಳ್ಳಲಾಗುತ್ತದೆ. ವ್ಯಾನ್‌ನಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಇರುತ್ತಾರೆ. ಆರೋಗ್ಯ ಕಾರ್ಯಕರ್ತರು ತಪಾಸಣೆ ನಡೆಸಿದ ಬಳಿಕ ಸಮಸ್ಯೆ ಕಾಣಿಸಿಕೊಂಡಲ್ಲಿ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕ್ಯಾನ್ಸರ್ ಯಾವ ಹಂತದಲ್ಲಿದೆ ಎಂಬುದರ ಆಧಾರದ ಮೇಲೆ ಯಾವ ಆಸ್ಪತ್ರೆಗೆ ಕಳುಹಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ’ ಎಂದು ಡಾ. ರಂಗಸ್ವಾಮಿ ವಿವರಿಸಿದರು.

*
ಹೆಚ್ಚಿನವರು ರೋಗ ಉಲ್ಬಣಗೊಂಡ ಬಳಿಕ ಚಿಕಿತ್ಸೆಗೆ ಬರುತ್ತಾರೆ. ಪ್ರಾರಂಭಿಕ ಹಂತದಲ್ಲೇ ಕ್ಯಾನ್ಸರ್ ಇರುವುದನ್ನು ಪತ್ತೆ ಮಾಡಿ, ಚಿಕಿತ್ಸೆ ಒದಗಿಸಿದಲ್ಲಿ ಕಾಯಿಲೆ ಗುಣಪಡಿಸಲು ಸಾಧ್ಯ
-ಡಾ.ಸಿ. ರಾಮಚಂದ್ರ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.