ADVERTISEMENT

ಮಹಿಳಾ ಮೀಸಲಾತಿ ಮಸೂದೆ: ದೇವೇಗೌಡರ ಕನಸು ನನಸಾಗುತ್ತಿದೆ ಎಂದ ಎಚ್‌ಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2023, 7:35 IST
Last Updated 19 ಸೆಪ್ಟೆಂಬರ್ 2023, 7:35 IST
<div class="paragraphs"><p>ಎಚ್‌.ಡಿ ಕುಮಾರಸ್ವಾಮಿ</p></div>

ಎಚ್‌.ಡಿ ಕುಮಾರಸ್ವಾಮಿ

   

ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಲೋಕಸಭೆಯಲ್ಲಿ ಮಂಡನೆ ಆಗುತ್ತಿದೆ. 27 ವರ್ಷಗಳ ನಂತರ ಎಚ್‌.ಡಿ ದೇವೇಗೌಡರ ಕನಸಿಗೆ ಮರುಜೀವ ಬಂದಿರುವುದು ಸಂತಸ ತಂದಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಎಚ್‌.ಡಿ ಕುಮಾರಸ್ವಾಮಿ, ಮಹಿಳಾ ಮೀಸಲಾತಿ ಮಸೂದೆಯನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ. ಎಚ್‌. ಡಿ ದೇವೇಗೌಡ ಅವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿಯೇ 1996 ಸೆಪ್ಟೆಂಬರ್ 12ರಂದು ರಾಜ್ಯಸಭೆಯಲ್ಲಿ ಈ ಐತಿಹಾಸಿಕ ಮಸೂದೆ ( ಮಹಿಳಾ ಮೀಸಲಾತಿ) ಅನ್ನು ಮಂಡಿಸಲಾಗಿತ್ತು. ಆದರೆ, ಅವರ ಸಂಯುಕ್ತರಂಗ ಸರಕಾರದ ಮೈತ್ರಿಕೂಟದ ಕೆಲ ಮಿತ್ರಪಕ್ಷಗಳೇ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಆ ಮಸೂದೆ ಅಂಗೀಕಾರ ಆಗಲಿಲ್ಲ. ಇವತ್ತು ಕಾಂಗ್ರೆಸ್ಸಿನ I.N.D.I.A. ಮೈತ್ರಿಕೂಟವನ್ನು ಸೇರಿಕೊಂಡಿರುವ ನಾಯಕರೇ ಅಂದು ಈ ಮಸೂದೆಗೆ ತಡೆ ಒಡ್ಡಿದ್ದರು ಎಂದು ಹೇಳಿದ್ದಾರೆ.

ADVERTISEMENT

27 ವರ್ಷಗಳ ನಂತರ ಎಚ್‌.ಡಿ ದೇವೇಗೌಡರ ಕನಸಿಗೆ ಮರುಜೀವ ಬಂದಿರುವುದು ಸಂತೋಷವಾಯಿತು. 1995ರಲ್ಲಿ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ನೀಡಿ, ಅಧಿಕಾರ ನಡೆಸುವ ಹಕ್ಕು ಕಲ್ಪಿಸಿ ಮಹಿಳಾ ಸಬಲೀಕರಣದ ಸುವರ್ಣ ಅಧ್ಯಾಯಕ್ಕೆ ನಾಂದಿ ಹಾಡಿದ್ದರು. ಅಂದು ರಾಜ್ಯದಲ್ಲಿ ಘಟಿಸಿದ ಈ ಕ್ರಾಂತಿಕಾರಿ ವಿದ್ಯಮಾನವನ್ನು ಇಡೀ ದೇಶವೇ ಬೆರಗು ಕಂಗಳಿಂದ ನೋಡಿತ್ತು. ಇಂದು ಮಹಿಳಾ ಮೀಸಲು ಮಸೂದೆ ಲೋಕಸಭೆಯಲ್ಲಿ ಅಂಗೀಕಾರ ಆಗುವುದು ಖಚಿತವಾಗಿದ್ದು, ಈ ಮೂಲಕ ಮಾಜಿ ಪ್ರಧಾನಿಗಳ (ದೇವೇಗೌಡ) ಕನಸು ನನಸಾಗುತ್ತಿದೆ. ಮಹಿಳೆಯರಿಗೆ ಸಮಾನ ಹಕ್ಕು, ಅವಕಾಶಗಳನ್ನು ಕಲ್ಪಿಸುವುದು ಇಂದಿನ ತುರ್ತು. ಪ್ರಧಾನಿ ಮೋದಿ ಸಂಪುಟ ಕೈಗೊಂಡ ನಿರ್ಧಾರ ಶ್ಲಾಘನೀಯ. ಈ ಮಸೂದೆಯನ್ನು ಎಲ್ಲಾ ಪಕ್ಷಗಳು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.