ಬೆಂಗಳೂರು: ‘ಕೆನಡಾದಲ್ಲಿ 2017ರ ಆಗಸ್ಟ್‌ನಲ್ಲಿ ನಡೆದ ಏಳನೇ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಗೆದ್ದಿರುವ ಅಂಗವಿಕಲ ಕ್ರೀಡಾಪಟುಗಳಿಗೆ 2013ರ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಗದು ಬಹುಮಾನ ನೀಡಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೆನಡಾದಲ್ಲಿ ನಡೆದ ಏಳನೇ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬೆಂಗಳೂರಿನವರಾದ ಸಿ.ವಿ.ರಾಜಣ್ಣ ಮತ್ತು ಬೆಂಗಳೂರಿನ ಸುನೀತಾ, ಬೆಂಗಳೂರು ಗ್ರಾಮಾಂತರ ಅಜಗೊಂಡನಹಳ್ಳಿಯ ಮುನಿರಾಜು ಪ್ರಕಾಶ್, ಧಾರವಾಡದ ದೇವಪ್ಪ ಮಹದೇವಪ್ಪ ಮೋರೆ, ಬಂಗಾರಪೇಟೆಯ ಎನ್.ನಾಗೇಶ್, ಹಾಸನ ಜಿಲ್ಲೆ ಅಬ್ಬೂರು ಮಾಚಗೊಂಡನಹಳ್ಳಿಯ ಕೆ.ಆರ್.ಶಾಂತಕುಮಾರ ಹಾಗೂ ಬೆಳಗಾವಿಯ ಸಿಮ್ರಾನ್ ಗೌಂಡಲ್ಕರ್ ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದವರಿಗೆ ₹10 ಲಕ್ಷ, ಬೆಳ್ಳಿ ಪದಕ ಗೆದ್ದವರಿಗೆ ₹7 ಲಕ್ಷ ಮತ್ತು ಕಂಚಿನ ಪದಕ ಗೆದ್ದವರಿಗೆ ₹5 ಲಕ್ಷ ನೀಡುವುದಾಗಿ ಸರ್ಕಾರ ತನ್ನ ಆದೇಶದಲ್ಲಿ ಹೇಳಿತ್ತು. ಹೀಗಾಗಿ, ಅರ್ಜಿದಾರರು ನಗದು ಬಹುಮಾನಕ್ಕೆ ಅರ್ಹರಾಗಿದ್ದು, ಮುಂದಿನ ಎಂಟು ವಾರಗಳಲ್ಲಿ ನ್ಯಾಯಾಲಯದ ಈ ಆದೇಶವನ್ನು ಜಾರಿಗೊಳಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಅರ್ನವ್ ಆರ್.ಬಾಗಲವಾಡಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.