ADVERTISEMENT

ತಂಬಾಕು ಉತ್ಪನ್ನಗಳ ಬಳಕೆ ಹೆಚ್ಚಳ

ರಾಜ್ಯ ತಂಬಾಕು ನಿಯಂತ್ರಣ ಘಟಕ ಕಳವಳ: 3 ಕೋಟಿ ಮಂದಿ ತಂಬಾಕು ಉತ್ಪನ್ನ ಸೇವನೆ

​ಪ್ರಜಾವಾಣಿ ವಾರ್ತೆ
Published 30 ಮೇ 2023, 20:59 IST
Last Updated 30 ಮೇ 2023, 20:59 IST
.
.   

ಬೆಂಗಳೂರು: ‘ತಂಬಾಕು ಉತ್ಪನ್ನಗಳ ಬಳಕೆಯು ಕ್ಯಾನ್ಸರ್ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಶೇ 22.8ರಷ್ಟು ವಯಸ್ಕರು ತಂಬಾಕು ಉತ್ಪನ್ನ ಬಳಸುತ್ತಿದ್ದಾರೆ’ ಎಂದು ಆರೋಗ್ಯ ಇಲಾಖೆಯ ರಾಜ್ಯ ತಂಬಾಕು ನಿಯಂತ್ರಣ ಘಟಕ ಕಳವಳ ವ್ಯಕ್ತಪಡಿಸಿದೆ. 

ವಿಶ್ವ ತಂಬಾಕುರಹಿತ ದಿನದ ಪ್ರಯುಕ್ತ ಆರೋಗ್ಯ ಇಲಾಖೆ‌ ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಬುಧವಾರ ಹಮ್ಮಿಕೊಂಡಿದೆ. ‘ನಮಗೆ ಆಹಾರ ಬೇಕು, ತಂಬಾಕು ಅಲ್ಲ’ ಈ ವರ್ಷದ ಘೋಷವಾಕ್ಯ.

‘ವಿಶ್ವ ಆರೋಗ್ಯ ಸಂಸ್ಥೆಯ ‘ಗ್ಲೋಬ‌ಲ್ ಅಡಲ್ಟ್ ಟೊಬ್ಯಾಕೊ’ ಸಮೀಕ್ಷೆ 2016–17ರ ಪ್ರಕಾರ ರಾಜ್ಯದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಸುಮಾರು 3 ಕೋಟಿ ಜನರು ಒಂದಲ್ಲ ಒಂದು ರೀತಿಯ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಈ ಉತ್ಪನ್ನಗಳನ್ನು ಬಳಸುತ್ತಿರುವ ಶೇ 22.8ರಷ್ಟು ವಯಸ್ಕರಲ್ಲಿ ಶೇ 8.8ರಷ್ಟು ಮಂದಿ ಧೂಮಪಾನಿಗಳಾಗಿದ್ದಾರೆ. ಶೇ 16.3ರಷ್ಟು ಮಂದಿ ಧೂಮರಹಿತ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ’ ಎಂದು ಘಟಕ ಹೇಳಿದೆ.

ADVERTISEMENT

1.50 ಲಕ್ಷ ಪ್ರಕರಣ: ‘ರಾಜ್ಯದಲ್ಲಿ 30ಕ್ಕೂ ಹೆಚ್ಚು ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳು ಎಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಕೋಟ್ಪಾ ಸ್ಕ್ವಾಡ್‌ಗಳ ಮೂಲಕ ಪ್ರತಿ ವರ್ಷ ಸರಾಸರಿ 1.50 ಲಕ್ಷ ಕೋಟ್ಪಾ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ತಂಬಾಕು ಉತ್ಪನ್ನಗಳ ಬಳಕೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಬೇಕಾದರೆ ತಂಬಾಕು ಉತ್ಪನ್ನಗಳ ತೆರಿಗೆಯನ್ನು ಹೆಚ್ಚಿಸಬೇಕು. ತಂಬಾಕು ಉತ್ಪನ್ನಗಳ ಜಾಹೀರಾತುಗಳಿಗೆ ನಿಷೇಧ ಹೇರಬೇಕು’ ಎಂದು ತಿಳಿಸಿದೆ.

‘ದೇಶದಲ್ಲಿ ತಂಬಾಕು ಬೆಳೆಯುವ ಎರಡನೆ ಅತೀ ದೊಡ್ಡ ರಾಜ್ಯ ಕರ್ನಾಟಕ. ತೋಟಗಾರಿಕೆ ಇಲಾಖೆಯ ಪ್ರಕಾರ ರಾಜ್ಯವು 51,175 ತಂಬಾಕು ಬೆಳೆಗಾರರನ್ನು ಹೊಂದಿದೆ. ಬೆಳಗಾವಿ, ಮೈಸೂರು, ಹಾಸನ, ಚಾಮರಾಜನಗರ ಮತ್ತು ದಾವಣಗೆರೆಯಲ್ಲಿ ತಂಬಾಕು  ಬೆಳೆಯಲಾಗುತ್ತಿದೆ’ ಎಂದು ಹೇಳಿದೆ.

ಬಾಲಕರ ರಕ್ಷಣೆಗೆ ಹೊಸ ನೀತಿ
‘ಬಾಲಕರನ್ನು ತಂಬಾಕು ಹಾವಳಿಯಿಂದ ರಕ್ಷಿಸಲು ‘ತಂಬಾಕು ಮುಕ್ತ ಜನಾಂಗ-2030’ ಎಂಬ ಹೊಸ ನೀತಿಯನ್ನು ಪರಿಚಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೋಟ್ಪಾ ಕಾಯ್ದೆ 2003ಕ್ಕೆ ತಿದ್ದುಪಡಿ ತರುವ ಪ್ರಸ್ತಾವ ಸರ್ಕಾರದ ಹಂತದಲ್ಲಿದೆ. ನಗರಾಭಿವೃದ್ಧಿ ಇಲಾಖೆ 2022ರಲ್ಲಿ ಹೊರಡಿಸಿರುವ ಅಧಿಸೂಚನೆ ಪ್ರಕಾರ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಕಡ್ಡಾಯ‌. ತಂಬಾಕು ಉತ್ಪನ್ನಗಳ  ಕಾನೂನುಬಾಹಿರ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಪ್ರತ್ಯೇಕ ಮೊಬೈಲ್ ಆ್ಯಪ್ ಪರಿಚಯಿಸಿದೆ’ ಎಂದು ರಾಜ್ಯ ತಂಬಾಕು ನಿಯಂತ್ರಣ ಘಟಕ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.