ADVERTISEMENT

ಯೇಸು ಪ್ರತಿಮೆ ವಿವಾದ: ಡಿಕೆಶಿಗೆ ಸಾಹಿತಿಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 20:00 IST
Last Updated 28 ಡಿಸೆಂಬರ್ 2019, 20:00 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ಕನಕಪುರ ಕ್ಷೇತ್ರದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಅವರು ಎಲ್ಲಾ ಜಾತಿ, ಧರ್ಮದವರ ಹಿತೈಷಿಯಾಗಿ ವರ್ತಿಸುತ್ತಿರುವುದು ಕೆಲವರ ಟೀಕೆಗೆ ಕಾರಣವಾಗಿದ್ದು, ಖಂಡನೆ ವ್ಯಕ್ತಪಡಿಸಿರುವುದಕ್ಕೆ ಸಾಹಿತಿ, ಬರಹಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್, ಪಾರ್ವತೀಶ ಬಿಳಿದಾಳೆ, ಬೆಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಬಿ.ಶಿವಣ್ಣ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಯೇಸು ಪ್ರತಿಮೆ ನಿರ್ಮಾಣಕ್ಕೆ ಭೂಮಿ ನೀಡಿರುವುದು ಅವರ ಸ್ವಂತ ನಿರ್ಧಾರ ಎಂದಿದ್ದಾರೆ.

‘ನಾವು ಶಿವಕುಮಾರ್ ಬೆಂಬಲಿಗರಲ್ಲ. ಆದರೆ ಜಾತ್ಯತೀತವಾಗಿ, ಸರ್ವಧರ್ಮ ಸಮಭಾವದಿಂದ ನಡೆದುಕೊಳ್ಳುತ್ತಿರುವ ನಿಲುವಿನ ಬೆಂಬಲಿಗರಾಗಿದ್ದೇವೆ. ಟೀಕೆ ಮಾಡುತ್ತಿರುವವರು ಸಂಕುಚಿತ ಮನೋಭಾವ ಪ್ರತಿಪಾದಿಸುತ್ತಿದ್ದಾರೆ. ತನ್ನ ಮತ ಬ್ಯಾಂಕ್ ನೋಡಿಕೊಂಡು ಅವರನ್ನು ಓಲೈಸುವುದು ಮಾತ್ರಮಾಡುವಂತೆ ಒಬ್ಬ ಪ್ರಜಾತಂತ್ರದ ಪ್ರತಿನಿಧಿಯನ್ನು ಒತ್ತಾಯಿಸುತ್ತಿರುವುದು ಸ್ವಾರ್ಥಪರ ಧೋರಣೆ’ ಎಂದಿದ್ದಾರೆ.

ಇದನ್ನೂ ಓದಿ...ಅಲ್ಪರಿಂದ ಪಾಠ ಹೇಳಿಸಿಕೊಳ್ಳುವ ಜರೂರತ್ತು ನನಗಿಲ್ಲ: ಡಿ.ಕೆ.ಶಿವಕುಮಾರ್

ADVERTISEMENT

ಕೃಷ್ಣನಿಗೆ ವಿರೋಧಿಸಿದ್ದ ಡಿಕೆಶಿ: ಈ ಹಿಂದೆ ಇಸ್ಕಾನ್ ಸಂಸ್ಥೆಯವರು ‘ಕೃಷ್ಣ ಲೀಲಾ ಥೀಮ್ ಪಾರ್ಕ್ ಯೋಜನೆ’ ರೂಪಿಸಿದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಡಿ.ಕೆ.ಶಿವಕುಮಾರ್ ಅವರು ಈಗ ಕಪಾಲಿ ಬೆಟ್ಟದಲ್ಲಿ ಯೇಸು ಕ್ರಿಸ್ತನ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವುದರ ಹಿಂದಿನ ಮರ್ಮ ಏನು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

‘ಯೇಸು ಬೆಟ್ಟವಾಗಲು ಬಿಡಲ್ಲ’
ಬೆಂಗಳೂರು: ಕನಕಪುರ ತಾಲ್ಲೂಕಿನ ಕಪಾಲಿ ಬೆಟ್ಟವನ್ನು ಯೇಸು ಬೆಟ್ಟವಾಗಿ ಪರಿವರ್ತಿಸಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಶನಿವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಕಪಾಲಿ ಬೆಟ್ಟದಲ್ಲಿ ಸಾಧು– ಸಂತರು ಧ್ಯಾನ, ಪ್ರಾರ್ಥನೆ ಮಾಡಿದ್ದಾರೆ. ಅಲ್ಲಿ ಬೇರೆ ಧರ್ಮದ ವ್ಯಕ್ತಿಯನ್ನು ಪ್ರತಿಷ್ಠಾಪಿಸುವುದು ಸರಿಯಲ್ಲ. ಅಲ್ಲಿ ಏನಾಗಿದೆ ಎಂಬ ಬಗ್ಗೆ ವರದಿಯನ್ನು ತರಿಸಿಕೊಂಡು, ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಯೇಸು ಪ್ರತಿಮೆ ಸ್ಥಾಪನೆಗೆ ನೀಡಿರುವ ಭೂಮಿ ವಾಪಸ್ ಪಡೆಯುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ‘ಬಿಜೆಪಿ ಮುಕ್ತ ಭಾರತ ಮಾಡಲಾಗುವುದು’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರು ಈಗಾಗಲೇ ಕಾಂಗ್ರೆಸ್‌ನಲ್ಲಿ ಮುಕ್ತಾಯವಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ಏಸು ಪ್ರತಿಮೆ ನಿರ್ಮಾಣಕ್ಕೆ ಭೂದಾನ: ಡಿಕೆಶಿ ಕಾಲೆಳೆದ ನೆಟ್ಟಿಗರು

ಅಧಿಕಾರಕ್ಕಾಗಿ ಓಲೈಕೆ: ಟೀಕೆ
ರಾಮನಗರ ಜಿಲ್ಲೆ ಕನಕಪುರ ಕ್ಷೇತ್ರದಲ್ಲಿ ಯೇಸು ಪ್ರತಿಮೆ ನಿರ್ಮಿಸಲು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಮುಂದಾಗಿರುವುದಕ್ಕೆ ಬಿಜೆಪಿ ಮುಖಂಡರು ವಾಗ್ದಾಳಿ ಮುಂದುವರಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟ್ವೀಟ್ ಮೂಲಕ ಕುಟುಕಿದ್ದಾರೆ. ‘ಕೆಪಿಸಿಸಿ ಅಧ್ಯಕ್ಷ ಪಟ್ಟದಲ್ಲಿ ಕುಳಿತುಕೊಳ್ಳಲು ಈ ಪರಿಯಾಗಿ ನಿಮ್ಮ ಹೈಕಮಾಂಡ್ ಓಲೈಸಬೇಕೆ?’ ಎಂದಿದ್ದಾರೆ.

‘ನಾಡಪ್ರಭು ಕೆಂಪೇಗೌಡ ನೆಲದ ಹೆಗ್ಗಳಿಕೆಯ ಇತಿಹಾಸದ ಮೇಲೆ ಅಟ್ಟಹಾಸ ಮೆರೆದು ಕನ್ನಡನಾಡಿನ ವೈಭವದ ಸಂಸ್ಕೃತಿಗೆ ಧಕ್ಕೆತರುವ ಐತಿಹಾಸಿಕ ಪ್ರಮಾದ ಮಾಡುತ್ತಿದ್ದೀರಿ. ಇದಕ್ಕೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬೆನ್ನು ತಟ್ಟಬಹುದು. ಜನತೆ ಕ್ಷಮಿಸುವರೆ’ ಎಂದು ಪ್ರಶ್ನಿಸಿದ್ದಾರೆ.

‘ಬಿಜೆಪಿಯವರ ಮನಸ್ಸಿನಲ್ಲಿ ವಿಷ’
ಮೈಸೂರು: ‘ಕ್ರೈಸ್ತರ ಭಾವನೆಗಳಿಗೆ ಬೆಲೆ ಕೊಡದ ಬಿಜೆಪಿಯವರ ಹೇಳಿಕೆಗಳು ಅಕ್ಷಮ್ಯ ಅಪರಾಧ. ಅವರ ಮನಸ್ಸಿನಲ್ಲಿ ವಿಷ ತುಂಬಿದೆ’ ಎಂದು ಕಾಂಗ್ರೆಸ್‌ ಮುಖಂಡ ಆರ್.ಧ್ರುವನಾರಾಯಣ ಶನಿವಾರ ಇಲ್ಲಿ ವಾಗ್ದಾಳಿ ನಡೆಸಿದರು.

‘ಬಿಜೆಪಿ‌ ನಾಯಕರಿಗೆ ಮಾನವೀಯತೆ ಇಲ್ಲ. ಸ್ಥಳೀಯ ಜನರ ಮನವಿಗೆ ಸ್ಪಂದಿಸುವುದು ಶಾಸಕರ ಕರ್ತವ್ಯ. ಅದರಂತೆ ಡಿ.ಕೆ.ಶಿವಕುಮಾರ್‌ ಅವರು ಯೇಸು ಪ್ರತಿಮೆ ನಿರ್ಮಾಣಕ್ಕೆ ಕ್ರೈಸ್ತರಿಗೆ ಸರ್ಕಾರದಿಂದ ಜಾಗ ಕೊಡಿಸಿದ್ದಾರೆ. ಇದನ್ನು ಬಿಜೆಪಿ ನಾಯಕರು ಟೀಕಿಸುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.