
ಮೈಸೂರು: ‘ವಿಧಾನಮಂಡಲ ಅಧಿವೇಶನದಲ್ಲಿ ನಡೆದ ಬೆಳವಣಿಗೆಯನ್ನು, ರಾಜ್ಯಪಾಲರಿಗೆ ಅವಮಾನ ಮಾಡಿರುವುದನ್ನು ರಾಜ್ಯದ ಜನರು ಗಮನಿಸಿದ್ದಾರೆ. ಕಾಂಗ್ರೆಸ್ ಶಾಸಕರು ಗೂಂಡಾಗಳಂತೆ ವರ್ತಿಸಿರುವುದು ಖಂಡನೀಯ’ ಎಂದು ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದರು.
ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಜವಾಬ್ದಾರಿ ನಿಭಾಯಿಸಿ ಹೋಗಿದ್ದಾರೆ. ಆದರೆ, ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದನ್ನ ಖಂಡಿಸುತ್ತೇವೆ’ ಎಂದರು.
‘ಚಾಮುಂಡಿ ಬೆಟ್ಟದಲ್ಲಿ ‘ಪ್ರಸಾದ್’ ಯೋಜನೆ ಕಾಮಗಾರಿ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಅಲ್ಲಿನ ಗ್ರಾಮಸ್ಥರು ಕೂಡ ಕಾಮಗಾರಿಯನ್ನು ವಿರೋಧಿಸಿದ್ದಾರೆ. ದೇವಸ್ಥಾನದ ಪಕ್ಕದಲ್ಲೇ ಕೆಲಸ ನಡೆಯುತ್ತಿದ್ದು, ಇದರಿಂದ ಗೋಪುರಕ್ಕೆ ತೊಂದರೆ ಆಗಬಹುದು. ಯಾವ ರೀತಿ ಕಾಮಗಾರಿ ಕೈಗೊಳ್ಳಲಾಗಿದೆ ಎಂಬುದನ್ನು ಮೊದಲು ತಿಳಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು’ ಎಂದು ಹೇಳಿದರು.
‘ಚಾಮುಂಡಿಬೆಟ್ಟದ ಅಭಿವೃದ್ಧಿ ಕೂಡ ಆಗಬೇಕಿದೆ. ನನ್ನ ಅನುಮತಿಗಿಂತ ಕಾಮಗಾರಿಗೆ ವಿರೋಧ ಮಾಡಿರುವವರ ಅನುಮತಿ ತುಂಬಾ ಮುಖ್ಯ. ಅಧಿಕಾರಿಗಳು ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿರುವುದು ಏಕೆಂದು ಗೊತ್ತಿಲ್ಲ. ಜನರ ಅಭಿಪ್ರಾಯವನ್ನು ಪಡೆದು ಕಾಮಗಾರಿ ಮುಂದುವರೆಸಲಿ’ ಎಂದರು.
‘ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಸ್ತಬ್ಧಚಿತ್ರ ಭಾಗವಹಿಸುತ್ತಿಲ್ಲ. ಈ ಬಗ್ಗೆ ಸರಿಯಾಗಿ ಪತ್ರ ವ್ಯವಹಾರ ನಡೆದಿಲ್ಲ. ಆದ್ದರಿಂದ ಸಾಕಷ್ಟು ಗೊಂದಲ ಉಂಟಾಗಿದೆ’ ಎಂದು ದೂರಿದರು.
ಮೈಸೂರು–ಕುಶಾಲನಗರ ರೈಲು ಮಾರ್ಗ ನಿರ್ಮಾಣ ಯೋಜನೆಯನ್ನು ರೈಲ್ವೆ ಇಲಾಖೆಯು ರದ್ದುಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ್, ‘ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ಹಸ್ತಾಂತರಿಸಿಲ್ಲ. ಈ ಬಗ್ಗೆ ಪುನರ್ ಪರಿಶೀಲಿಸುವಂತೆ ರೈಲ್ವೆ ಇಲಾಖೆ ಗಮನಕ್ಕೆ ತಂದಿದ್ದೇನೆ. ಆ ಭಾಗಕ್ಕೆ ರೈಲು ಅಗತ್ಯವಿದೆ. ಮೈಸೂರು–ಕೊಡಗು ಜನರ ಹಿತದೃಷ್ಟಿಯಿಂದ ಈ ಯೋಜನೆ ಅನುಷ್ಠಾನಗೊಳ್ಳಬೇಕು. ಮತ್ತೊಮ್ಮೆ ಕೇಂದ್ರದ ಗಮನ ಸೆಳೆಯುತ್ತೇನೆ. ರಾಜ್ಯ ಸರ್ಕಾರವೂ ಸಹಕಾರ ನೀಡಲಿ’ ಎಂದರು.
‘ರಾಜ್ಯದಲ್ಲಿ ಕಾನೂನು– ಸುವ್ಯವಸ್ಧೆ ಹದಗೆಟ್ಟಿದೆ. ಈ ಬಗ್ಗೆ ಹೋರಾಟವನ್ನೂ ನಡೆಸಿದ್ದೇವೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.