ADVERTISEMENT

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್; ಶಾಸಕ ಯತ್ನಾಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 10:31 IST
Last Updated 24 ಆಗಸ್ಟ್ 2025, 10:31 IST
   

ವಿಜಯಪುರ: ‘ಬಾನು ಮುಷ್ತಾಕ್ ಅವರನ್ನು ಲೇಖಕಿ ಹಾಗೂ ಹೋರಾಟಗಾರ್ತಿಯಾಗಿ ನಾನು ವೈಯಕ್ತಿಕವಾಗಿ ಗೌರವಿಸುತ್ತೇನೆ. ಆದರೆ, ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗುವುದರ ಮೂಲಕ ದಸರಾವನ್ನು ಉದ್ಘಾಟಿಸುವುದು, ಅವರ ಸ್ವಂತ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಏಕ್ಸ್‌’ನಲ್ಲಿ ಭಾನುವಾರ ಪೋಸ್ಟ್‌ ಮಾಡಿರುವ ಅವರು, ‘ಇಸ್ಲಾಂ ಮೂರ್ತಿ ಪೂಜೆಯನ್ನು ಧಿಕ್ಕರಿಸಿ ಒಂದು ದೇವರು ಹಾಗೂ ಒಂದು ಗ್ರಂಥವನ್ನೇ ಒಪ್ಪಿಕೊಳ್ಳುತ್ತದೆ ಎಂಬ ನಂಬಿಕೆಯಲ್ಲಿ ಅವರು ಇನ್ನೂ ಇದ್ದಾರೆಯೇ ಅಥವಾ ಎಲ್ಲಾ ಮಾರ್ಗಗಳೂ ಅಂತಿಮವಾಗಿ ಒಂದೇ ಮೋಕ್ಷಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಅವರು ನಂಬುತ್ತಾರೆಯೇ ಎಂಬುದರ ಬಗ್ಗೆ ಬಾನು ಮುಷ್ತಾಕ್ ಅವರು ಸ್ಪಷ್ಟನೆ ನೀಡುವುದು ಅಗತ್ಯ’ ಎಂದಿದ್ದಾರೆ.

‘ಈ ಸ್ಪಷ್ಟತೆ ಇಲ್ಲದೆ, ದಸರಾ ಉದ್ಘಾಟಿಸುವುದು ಸರಿಯಲ್ಲ. ಆದರೆ, ದಸರಾ ಉತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಅಥವಾ ಕವಿಗೋಷ್ಠಿಯಂತಹ ಸಾಹಿತ್ಯ ಕಾರ್ಯಕ್ರಮಗಳನ್ನು ಉದ್ಘಾಟಿಸುವ ಅತಿಥಿಯಾಗಿ ಅವರು ಭಾಗವಹಿಸುವುದು ತಕ್ಕದ್ದಾಗಿದೆ’ ಎಂದು ಸಲಹೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.