ADVERTISEMENT

ತಂದೆ ಮೃತರಾದ ದಿನವೇ ಮಂತ್ರಿಯಾಗಿ ಪ್ರಮಾಣ ವಚನ: ಡಿಕೆಶಿಗೆ ಬಿಜೆಪಿ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2021, 14:31 IST
Last Updated 26 ಜುಲೈ 2021, 14:31 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ತಂದೆ ಮೃತರಾದ ದಿನವೇ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಇತಿಹಾಸ ನಿಮ್ಮದು ಎಂದು ಟ್ವೀಟ್‌ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿ ತಿರುಗೇಟು ನೀಡಿದೆ.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜೀನಾಮೆ ನೀಡುವ ವಿಷಯ ಪ್ರಸ್ತಾಪಿಸುವಾಗ ಕಣ್ಣೀರು ಹಾಕಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ ಕಣ್ಣೀರಲ್ಲ. ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯ ಕಣ್ಣೀರು. ಇದರ ಹಿಂದಿನ ನೋವೇನು? ಆ ನೋವು ಕೊಟ್ಟವರು ಯಾರು? ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು’ ಎಂದು ಡಿಕೆಶಿ ಹೇಳಿಕೆ ನೀಡಿದ್ದರು.

ಶಿವಕುಮಾರ್‌ ಹೇಳಿಕೆಗೆ ಸರಣಿ ಟ್ವೀಟ್‌ ಮೂಲಕ ತಿರುಗೇಟು ನೀಡಿರುವ ಬಿಜೆಪಿ, 'ಮಾನ್ಯ ಡಿಕೆಶಿ ಅವರೇ, ತಂದೆ ಇಹಲೋಕ ತ್ಯಜಿಸಿದ ದಿನವೇ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ದಾಹ ತೋರ್ಪಡಿಸಿದ ಇತಿಹಾಸ ನಿಮ್ಮದು. ಹಿರಿಯ ನಾಯಕರ ಕಣ್ಣೀರು ಹಾಕಿಸುವುದು ಕಾಂಗ್ರೆಸ್ ಪಕ್ಷದ ಹುಟ್ಟು ಗುಣ. ಆನಂದ ಭಾಷ್ಪಕ್ಕೂ, ಕಣ್ಣೀರಿಗೂ ವ್ಯತ್ಯಾಸವಿದೆ. ಇದರಲ್ಲಿ ಬಹಿರಂಗಗೊಳಿಸುವ ಗುಟ್ಟೇನು ಇಲ್ಲ' ಎಂದು ಹೇಳಿದೆ.

ADVERTISEMENT

'ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ ಅಂತಿಮಗೊಳಿಸಲು ಅಸಮರ್ಥರಾದ ಮಹಾನಾಯಕ ಹಾಗೂ ಮೀರ್‌ಸಾದಿಕ್‌ ಬಿಜೆಪಿ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಈಗ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್‌ ನಾಯಕರು ಬಿಎಸ್‌ವೈ ಅವರ ಬಗ್ಗೆ ಹಿಂದೆ ಹೇಳಿರುವ ಮಾತುಗಳನ್ನು ನೆನಪಿಸಬೇಕೇ?' ಎಂದು ಪ್ರಶ್ನಿಸುವ ಮೂಲಕ ಡಿಕೆಶಿ ಮತ್ತು ಸಿದ್ದರಾಮಯ್ಯನವರನ್ನು ಗುರಿಯಾಗಿಸಿ ಬಿಜೆಪಿ ವಾಗ್ದಾಳಿ ನಡೆಸಿದೆ.

'ರಾಜಕೀಯ ಲಾಭಕ್ಕಾಗಿ ‌ಬಿಜೆಪಿಯ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರೇ, ಮೊದಲು ನಿಮ್ಮ ಮನೆಯ ಸಮಸ್ಯೆ ಬಗೆಹರಿಸಿಕೊಳ್ಳಿ. ಡಿಕೆಶಿಯನ್ನು ಪದಚ್ಯುತಿಗೊಳಿಸುವುದಕ್ಕೆ ನಡೆಸುತ್ತಿರುವ ಪ್ರಯತ್ನದ ಬಗ್ಗೆ ಮೊದಲು ಮಾತನಾಡಿ. ರಾಹುಲ್‌ ಗಾಂಧಿ ಜೊತೆ ಮೀರ್‌ಸಾದಿಕ್ ನಡೆಸಿದ ರಹಸ್ಯ ಮಾತುಕತೆಯ ಅಜೆಂಡಾವೇನು?' ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.