
ನವದೆಹಲಿ: ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕೇಂದ್ರ ಅರಣ್ಯ ಸಚಿವಾಲಯದ ಅನುಮೋದನೆ ಪಡೆಯದೆಯೇ ಪರಿಹಾರಾತ್ಮಕ ಅರಣ್ಯೀಕರಣದ (34 ಎಕರೆ) ಜಾಗವನ್ನು ಬದಲಿಸಿದ್ದಕ್ಕೆ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್‌ಇಸಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರ ಸಲ್ಲಿಸಿರುವ ಹೊಸ ಪ್ರಸ್ತಾವ ಅಸ್ಪಷ್ಟವಾಗಿದ್ದು, ಹೊಸ ಪ್ರಸ್ತಾವ ಸಲ್ಲಿಸುವಂತೆ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ಎಸ್.ಸೆಂಥಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ನವೆಂಬರ್ 7ರಂದು ನಡೆದ ಸಭೆಯು ನಿರ್ದೇಶನ ನೀಡಿದೆ.
ಈ ಯೋಜನೆಗೆ ನಿಯಮಬಾಹಿರವಾಗಿ ಹೆಚ್ಚುವರಿ ಅರಣ್ಯ ಬಳಸಲಾಗಿದೆ. ಎಷ್ಟು ಅರಣ್ಯ ಬಳಸಲಾಗಿದೆ ಎಂಬ ವಿವರ ಸಹಿತ ರಾಜ್ಯ ಸರ್ಕಾರವು ಅರಣ್ಯ ಸಚಿವಾಲಯಕ್ಕೆ ಹೊಸ ಪ್ರಸ್ತಾವ ಸಲ್ಲಿಸಬೇಕು. ಈ ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ಹೆಸರು ಹಾಗೂ ಅವರ ವಿರುದ್ಧ ಕೈಗೊಂಡ ಕ್ರಮದ ವರದಿಯನ್ನು ಸಲ್ಲಿಸಬಕು ಎಂದು ತಾಕೀತು ಮಾಡಿದೆ.
ಆಕ್ಷೇಪವೇಕೆ?:
‘ಅರಣ್ಯ ಬಳಕೆಗೆ ಎರಡನೇ ಹಂತದ ಅನುಮೋದನೆ ನೀಡುವ ಸಂದರ್ಭದಲ್ಲಿ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯದೆಯೇ ಪರಿಹಾರಾತ್ಮಕ ಅರಣ್ಯೀಕರಣದ ಸ್ಥಳ ಬದಲಿಸಲಾಗಿದೆ. ಜತೆಗೆ, ಹೆಚ್ಚುವರಿ ಅರಣ್ಯ ಬಳಸಲಾಗಿದೆ’ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಣಿತಾ ಪೌಲ್ ಅವರು ಉನ್ನತಾಧಿಕಾರ ಸಮಿತಿಯ ಸಭೆಯ ಗಮನಕ್ಕೆ ತಂದರು.
ಕಾಡು ಬೆಳೆಸಲು ಈಗ ಗುರುತಿಸಿರುವ ಜಾಗವು 2017ರಲ್ಲೇ ಅರಣ್ಯ ಇಲಾಖೆಯ ಹೆಸರಿನಲ್ಲಿ ಖಾತೆ ಆಗಿದೆ. ಈ ಜಾಗವನ್ನು 2022ರಲ್ಲಿ ಡೀಮ್ಡ್ (ಪರಿಭಾವಿತ) ಅರಣ್ಯವೆಂದು ಗುರುತಿಸಲಾಗಿದೆ. ಇದರೊಂದಿಗೆ, ರಾಜ್ಯ ಅರಣ್ಯ ಇಲಾಖೆ ಒದಗಿಸಿರುವ ದಾಖಲೆಗಳಲ್ಲಿ ವ್ಯತ್ಯಾಸ ಇದೆ. ಯೋಜನೆಗೆ 34 ಎಕರೆ ಅರಣ್ಯ ಬಳಸಿದ್ದರೆ, ಪರಿಹಾರಾತ್ಮಕ ಅರಣ್ಯೀಕರಣಕ್ಕೆ 85 ಎಕರೆ ಅರಣ್ಯ ಗುರುತಿಸಲಾಗಿದೆ. ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಉನ್ನತಾಧಿಕಾರ ಸಮಿತಿ ಅಭಿಪ್ರಾಯಪಟ್ಟಿದೆ.
ಏನಿದು ವಿವಾದ?
ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸಲು ಗುರುತ್ವಾಕರ್ಷಣೆ ಕಾಲುವೆ ನಿರ್ಮಾಣಕ್ಕೆ ಸಕಲೇಶಪುರ ತಾಲ್ಲೂಕಿನಲ್ಲಿ 34 ಎಕರೆ ಅರಣ್ಯವನ್ನು ವಿಶ್ವೇಶ್ವರಯ್ಯ ಜಲನಿಗಮ 2016ರಲ್ಲಿ ಬಳಸಿಕೊಂಡಿತ್ತು. ಪರ್ಯಾಯವಾಗಿ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಚಳ್ಳಕೆರೆ ತಾಲ್ಲೂಕಿನ ವರವು ಕಾವಲ್‌ನ 34 ಎಕರೆ ಜಾಗ ಗುರುತಿಸಿತ್ತು. ಆ ಬಳಿಕ, ಅರಸೀಕೆರೆ ತಾಲ್ಲೂಕಿನ ಬಾಗೇಶಪುರದಲ್ಲಿ ಪರಿಹಾರಾತ್ಮಕ ಅರಣ್ಯೀಕರಣ ನಡೆಸುವುದಾಗಿ ತಿಳಿಸಿತ್ತು. ಇನ್ನೊಂದೆಡೆ, ಯೋಜನೆಗೆ ಹೆಚ್ಚುವರಿಯಾಗಿ 273 ಎಕರೆ ಅರಣ್ಯ ಬಳಕೆಗೆ ಈ ವರ್ಷದ ಆರಂಭದಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವವನ್ನು ಅರಣ್ಯ ಸಲಹಾ ಸಮಿತಿಯ ಆರನೇ ಸಮಿತಿ ಸಭೆಯಲ್ಲಿ ಪರಾಮರ್ಶೆ ನಡೆಸಲಾಗಿತ್ತು. ‘34 ಎಕರೆ ಅರಣ್ಯ ಬಳಸಿದ್ದಕ್ಕೆ ಪರ್ಯಾಯವಾಗಿ ಪರಿಹಾರಾತ್ಮಕ ಅರಣ್ಯೀಕರಣ ನಡೆಸುವಂತೆ ಷರತ್ತು ವಿಧಿಸಲಾಗಿತ್ತು. ಈ ಷರತ್ತುಗಳನ್ನು ನಿಗಮ ಉಲ್ಲಂಘಿಸಿದೆ. ಹೀಗಾಗಿ, ಹೆಚ್ಚುವರಿ ಅರಣ್ಯ ಬಳಕೆಗೆ ಸದ್ಯ ಅನುಮೋದನೆ ನೀಡುವುದಿಲ್ಲ’ ಎಂದು ಅರಣ್ಯ ಸಲಹಾ ಸಮಿತಿ
ಸ್ಪಷ್ಟಪಡಿಸಿತ್ತು. ಈ ಷರತ್ತುಗಳನ್ನು ಪಾಲನೆ ಮಾಡುವಂತೆ ನಿಗಮಕ್ಕೆ ನಿರ್ದೇಶನ
ನೀಡಿತ್ತು.
ಬಾಗೇಶಪುರ ಗ್ರಾಮದಲ್ಲಿ ಈಗಾಗಲೇ ಪರಿಹಾರಾತ್ಮಕ ಅರಣ್ಯೀಕರಣ ನಡೆಸಲಾಗಿದ್ದು, ಇದಕ್ಕೆ ಘಟನೋತ್ತರ ಅನುಮೋದನೆ ನೀಡಬೇಕು ಎಂದು ರಾಜ್ಯ ಅರಣ್ಯ ಇಲಾಖೆ ಈ ವರ್ಷದ ಆಗಸ್ಟ್‌ನಲ್ಲಿ ಅರಣ್ಯ ಸಚಿವಾಲಯಕ್ಕೆ ಕೋರಿತ್ತು. ಈ ಪ್ರದೇಶದಲ್ಲಿ 2019–20ನೇ ಸಾಲಿನಲ್ಲೇ ಕಾಡು ಬೆಳೆಸಲಾಗಿದೆ ಎಂದು ಸ್ಪಷ್ಟಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.