ADVERTISEMENT

ಸ್ವಾಮೀಜಿಯಾಗಲು ಮಠ ಸೇರಿ ವಂಚಿಸಿದ್ದ ‘ಯುವರಾಜ್‌ ಸ್ವಾಮಿ’

ದಂತ ವೈದ್ಯಕೀಯ ಕಾಲೇಜು ಸೀಟಿಗೆ ಹಣ ವಸೂಲಿ ಮಾಡಿರುವ ಆರೋಪಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 19:38 IST
Last Updated 17 ಡಿಸೆಂಬರ್ 2020, 19:38 IST
ಆರೋಪಿ ಯುವರಾಜ್
ಆರೋಪಿ ಯುವರಾಜ್   

ಚಿತ್ರದುರ್ಗ: ಸ್ವಾಮೀಜಿ ದೀಕ್ಷೆ ಪಡೆಯಲು ಇಲ್ಲಿನ ಪ್ರಭಾವಿ ಮಠ ಸೇರಿದ್ದ ಯುವರಾಜ್‌ ಸ್ವಾಮಿ, ಸಂತನಾಗುವ ಬದಲು ವಂಚಕನಾಗಿ ಮಠದಿಂದ ಕಾಲ್ಕಿತ್ತ ಸಂಗತಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಗಣ್ಯರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿ ಬೆಂಗಳೂರಿನ ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಯುವರಾಜ್‌ ಸ್ವಾಮಿ ಮೂಲತಃ ಚಿತ್ರದುರ್ಗ ತಾಲ್ಲೂಕಿನ ದೇವಪುರದಹಟ್ಟಿ ನಿವಾಸಿ. ಸೇವಾಲಾಲ್‌ ಗುರುಪೀಠಕ್ಕೆ ಸ್ವಾಮೀಜಿ ದೀಕ್ಷೆ ನೀಡುವ ಪ್ರಕ್ರಿಯೆ ಎರಡೂವರೆ ದಶಕಗಳ ಹಿಂದೆ ನಡೆದಿತ್ತು.

ಯುವರಾಜ್‌ ಸ್ವಾಮಿಯ ಮೂಲ ಹೆಸರು ರಮೇಶ್‌. ಬಿಎಸ್ಸಿ ಪದವೀಧರನಾಗಿರುವ ಈತ, ಚಿತ್ರದುರ್ಗದ ಪ್ರಭಾವಿ ಮಠ ಸೇರಿದ್ದ. ಬಸವತತ್ವ ಅಧ್ಯಯನಕ್ಕೆ ಮಠದಲ್ಲಿದ್ದ ನೂರಾರು ವಟುಗಳಲ್ಲಿ ರಮೇಶ್‌ ವಿದ್ಯಾವಂತನಾಗಿದ್ದ. ಅನ್ಯಜಾತಿಯವರಲ್ಲಿ ದೀಕ್ಷೆ ಪಡೆದ ಎರಡನೇ ವ್ಯಕ್ತಿ ಈತನಾಗಿದ್ದ. ಅಂದಿನಿಂದ ಸಂಗನ ಬಸವ ಸ್ವಾಮೀಜಿ ಎಂದು ಕರೆಯಲಾಗುತ್ತಿತ್ತು.

1997–98ರ ಸಮಯದಲ್ಲಿ ಸೇವಾಲಾಲ್‌ ಗುರುಪೀಠಕ್ಕೆ ದೀಕ್ಷೆ ನೀಡಲು ಸಮುದಾಯವೂ ಒಪ್ಪಿಗೆ ಸೂಚಿಸಿತ್ತು. ಮಠದ ಆಪ್ತ ವಲಯ
ದಲ್ಲಿ ಗುರುತಿಸಿಕೊಂಡಿದ್ದ ಈತ ಬೆಂಗಳೂರಿನೊಂದಿಗೆ ಸಂಪರ್ಕ ಬೆಸೆದುಕೊಂಡಿದ್ದ. ದಂತ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಸೀಟು ಕೊಡಿಸುವುದಾಗಿ ನಂಬಿಸಿ ಹಲವರಿಂದ ಹಣ ವಸೂಲಿ ಮಾಡಿದ ಆರೋಪಕ್ಕೆ ಗುರಿಯಾಗಿದ್ದ. ಆಂತರಿಕ ವಿಚಾರಣೆಯಲ್ಲಿ ಸತ್ಯ ಬೆಳಕಿಗೆ ಬಂದಾಗ ಖಾವಿ ಬಟ್ಟೆ ಕಳಚಿಟ್ಟು ಮಠದಿಂದ ಹೊರನಡೆದಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.