ಬೆಂಗಳೂರು: ವಸತಿ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧದ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಕೆಜಿಎಫ್ ಬಾಬು ಅವರು ಲೋಕಾಯುಕ್ತ ತನಿಖಾಧಿಕಾರಿಗಳ ಎದುರು ಬುಧವಾರ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿದರು.
ಈ ಪ್ರಕರಣದಲ್ಲಿ ಬಾಬು ಅವರಿಗೆ ಆಗಸ್ಟ್ 22ರಂದು ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು. ರೆಡ್ಡಿ ಸ್ಟ್ರಕ್ಚರ್ಸ್ ಮತ್ತು ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಿರುವ ಸಂಬಂಧ ದಾಖಲೆಗಳನ್ನು ನೀಡಿ ಎಂದು ಬಾಬು ಅವರಿಗೆ ಸೂಚಿಸಿದ್ದರು.
ಬುಧವಾರ ಮಧ್ಯಾಹ್ನ ತನಿಖಾಧಿಕಾರಿಗಳ ಎದುರು ಹಾಜರಾದ ಬಾಬು ಅವರು, ದಾಖಲೆಗಳನ್ನು ಸಲ್ಲಿಸಿದರು. ಜಮೀರ್ ಅವರಿಗೆ ಹಣ ನೀಡಿರುವುದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಒದಗಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ.
ಲೋಕಾಯುಕ್ತ ಕಚೇರಿಯಿಂದ ಹೊರಬಂದ ಬಾಬು ಅವರು, ‘2013ರಲ್ಲಿ ಮನೆ ಖರೀದಿಸುವ ಸಂದರ್ಭದಲ್ಲಿ ಸಾಲ ನೀಡುವಂತೆ ಜಮೀರ್ ಅವರು ಕೋರಿದ್ದರು. ನಾನು ₹3.50 ಕೋಟಿ ಸಾಲ ನೀಡಿದ್ದೆ. ಅದನ್ನು ಹಲವು ಬಾರಿ ವಾಪಸ್ ಕೇಳಿದ್ದೆ, ಅವರಿನ್ನೂ ನೀಡಿಲ್ಲ. ಸಾಲ ನೀಡಿದ್ದಕ್ಕೆ ಸಂಬಂಧಿಸಿದ ವಿವರಗಳನ್ನು ನಾನು ಮತ್ತು ಜಮೀರ್ ಇಬ್ಬರೂ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಉಲ್ಲೇಖಿಸಿದ್ದೇವೆ’ ಎಂದರು.
‘ಈ ಪ್ರಕರಣದ ತನಿಖೆಯನ್ನು ಮೊದಲು ಇ.ಡಿ (ಜಾರಿ ನಿರ್ದೇಶನಾಲಯ) ನಡೆಸುತ್ತಿತ್ತು. ಅವರಿಗೆ ಎಲ್ಲ ದಾಖಲೆ ನೀಡಿದ್ದೆ. ಈಗ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದೆ. ಅವರೂ ದಾಖಲೆ ಕೇಳಿದ್ದಾರೆ, ನೀಡಿದ್ದೇನೆ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಜಮೀರ್ ಮತ್ತು ನನ್ನ ಮಧ್ಯೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ. ಸಾಲದ ಹೊರತಾಗಿ ಹಣಕಾಸು ವ್ಯವಹಾರವೂ ಇಲ್ಲ. ಅವರಿಗೆ ಸಾಲ ನೀಡಿದ್ದರಿಂದ ತನಿಖೆ ಎದುರಿಸಬೇಕಾಗಿದೆ. ಇದರಲ್ಲಿ ನನಗೇನೂ ಬೇಸರವಿಲ್ಲ’ ಎಂದರು.
ನಟಿ ರಾಧಿಕಾಗೆ ನೋಟಿಸ್
ಇದೇ ಪ್ರಕರಣದ ವಿಚಾರವಾಗಿ ತನಿಖಾಧಿಕಾರಿಗಳು ನಟಿ ಮತ್ತು ನಿರ್ಮಾಪಕಿ ರಾಧಿಕಾ ಅವರಿಗೆ ನೋಟಿಸ್ ನೀಡಿದ್ದರು. ಜಮೀರ್ ಅವರಿಗೆ ₹2 ಕೋಟಿ ಸಾಲ ನೀಡಿದ್ದರ ಬಗ್ಗೆ ದಾಖಲೆಗಳನ್ನು ಒದಗಿಸಿ ಎಂದು ಸೂಚಿಸಿದ್ದರು. ಕಳೆದ ವಾರವಷ್ಟೇ ತನಿಖಾಧಿಕಾರಿಗಳ ಎದುರು ಹಾಜರಾಗಿದ್ದ ರಾಧಿಕಾ ಅವರು ದಾಖಲೆಗಳನ್ನು ಒದಗಿಸಲು ಸಮಯ ನೀಡುವಂತೆ ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.