ADVERTISEMENT

ಎಚ್.ಡಿ. ಕುಮಾರಸ್ವಾಮಿಯದ್ದು ಸೂಟ್‌ಕೇಸ್ ರಾಜಕಾರಣ: ಜಮೀರ್ ಅಹ್ಮದ್ ಆರೋಪ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 7:25 IST
Last Updated 26 ಅಕ್ಟೋಬರ್ 2021, 7:25 IST
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್   

ಹುಬ್ಬಳ್ಳಿ: ‘ಬಿಜೆಪಿಗೆ ಅನುಕೂಲವಾಗಲೆಂದೇ ಉಪಚುನಾವಣೆ ನಡೆಯಲಿರುವ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಕ್ಕೆ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಸೂಟ್‌ಕೇಸ್ ರಾಜಕಾರಣ ಮಾಡುತ್ತಿದೆ’ ಎಂದು‌ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಚ್.ಡಿ.ಕುಮಾರಸ್ವಾಮಿ ಎರಡೂ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿ, ಆರ್‌ಎಸ್‌ಎಸ್‌ಗೆ ಬಯ್ಯುವ ಕೆಲಸ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ಗೆ ಬಯ್ದರೆ ಅಲ್ಪಸಂಖ್ಯಾತರ ಮತಗಳೆಲ್ಲ ಜೆಡಿಎಸ್‌ಗೆ ಬಂದು, ಬಿಜೆಪಿ ಗೆಲುವಿಗೆ ಅನುಕೂಲವಾಗುತ್ತದೆ ಎನ್ನುವುದು ಅವರ ಲೆಕ್ಕಾಚಾರ. ಸೂಟ್‌ಕೇಸ್ ಪಡೆದರೆ ಸಾಲದು, ಆರ್‌ಎಸ್‌ಎಸ್‌ಗೆ ಬಯ್ಯವ ಕೆಲಸವೂ ಆಗಬೇಕು ಎಂದು ಬಿಜೆಪಿಯೇ ಹೇಳಿರಬಹುದು’ ಎಂದರು.

‘ಪ್ರತಿ ಚುನಾವಣೆ ಸಂದರ್ಭದಲ್ಲೂ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಇಂಥದ್ದೇ ರಾಜಕೀಯ ಮಾಡುತ್ತ, ಮುಸ್ಲಿಂ ಅಭ್ಯರ್ಥಿಯನ್ನು ಬಲಿಕೊಡುತ್ತಿದೆ. ಹಾನಗಲ್‌ನಲ್ಲಿ ಅಭ್ಯರ್ಥಿ ಪರ ಕುಮಾರಸ್ವಾಮಿ ಒಂದು ದಿನ ಪ್ರಚಾರ ನಡೆಸಿ, ಮೈಸೂರಿಗೆ ಹೋದರು. ಪಕ್ಷದ ಅಭ್ಯರ್ಥಿಯ ಗೆಲುವು ಮುಖ್ಯವಾಗಿದ್ದರೆ ಅಲ್ಲೇ ಇದ್ದು ಅ.‌ 27ರವರೆಗೆ ಪ್ರಚಾರ ನಡೆಸುತ್ತಿದ್ದರು. ಇದರಿಂದಲೇ ಅರಿವಾಗುತ್ತದೆ ಅವರ ರಾಜಕೀಯದ ಹಿನ್ನೆಲೆ ಏನೆಂಬುದು’ ಎಂದು ಟೀಕಿಸಿದರು.

‘ದೇವೇಗೌಡರ ಹಾಗೂ ಕುಮಾರಸ್ವಾಮಿ ಅವರ ರಾಜಕೀಯವೇ ಬೇರೆ ಬೇರೆ. ದೇವೇಗೌಡರು ಪಕ್ಕಾ ಜಾತ್ಯತೀತವಾದಿ. ಅವರಲ್ಲಿರುವ ಶೇ 1ರಷ್ಟು ಜಾತ್ಯತೀತ ಮನಸ್ಥಿತಿ ಕುಮಾರಸ್ವಾಮಿ ಅವರಲ್ಲಿ ಇಲ್ಲ. ಮುಸ್ಲಿಮರನ್ನಷ್ಟೇ ಅಲ್ಲ, ಒಕ್ಕಲಿಗರನ್ನು ಸಹ ಅವರು ರಾಜಕೀಯವಾಗಿ ಬಲಿಕೊಡುತ್ತಾ ಬಂದಿದ್ದಾರೆ. ಈವರೆಗೆ ಅವರು ಒಬ್ಬರನ್ನಾದರೂ ರಾಜಕೀಯವಾಗಿ ಬೆಳೆಸಿದ್ದಾರಾ’ ಎಂದು ಜಮೀರ್ ಪ್ರಶ್ನಿಸಿದರು.

‘ದೇವೇಗೌಡರು ನನ್ನ ರಾಜಕೀಯ ಗುರು. ನಾನು ಈ ಸ್ಥಾನದಲ್ಲಿ ಇರಲು ಅವರೇ ಕಾರಣ’ ಎಂದೂ ಅವರು ಹೇಳಿದರು.

ಬಿಜೆಪಿಯಿಂದ ಹಾನಗಲ್ ಕ್ಷೇತ್ರಕ್ಕೆ ಉದಾಸಿ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ಸಿಗಬಹುದು ಎಂದುಕೊಂಡಿದ್ದೆವು. ಅವರ ಕುಟುಂಬದವರಿಗೆ ಟಿಕೆಟ್ ನೀಡದಿರುವುದೇ ಬಿಜೆಪಿ ಸೋಲಿಗೆ ಕಾರಣವಾಗಲಿದೆ ಎಂದು ಜಮೀರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.