ಬೆಂಗಳೂರು: ‘ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಗೆ ಸಂಬಂಧಿಸಿದಂತೆ ಮೇ ಅಂತ್ಯದೊಳಗೆ ಅಧಿಸೂಚನೆ ಪ್ರಕಟಿಸಲಾಗುವುದು’ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮೌಖಿಕವಾಗಿ ಮುಚ್ಚಳಿಕೆ ಕೊಟ್ಟಿದೆ.
ಈ ಕುರಿತಂತೆ ದಾಖಲಾಗಿದ್ದ ಎರಡು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಹೆಚ್ಚೆಂದರೆ ಮೇ ಅಂತ್ಯದಲ್ಲಿ ಒದಗಿಸಲಾಗುವುದು. ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಲಾಗುತ್ತದೆ. ಮೇನಲ್ಲಿ ಮೀಸಲಾತಿ ಪಟ್ಟಿ ಒದಗಿಸುತ್ತೇವೆ. ಆಯೋಗವು ಜೂನ್, ಜುಲೈ ಅಥವಾ ಆಗಸ್ಟ್‌ನಲ್ಲಿ ಚುನಾವಣೆ ನಡೆಸಬಹುದು’ ಎಂದು ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು ವಿಚಾರಣೆ ವೇಳೆ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗದ ಪರ ಪದಾಂಕಿತ ಹಿರಿಯ ವಕೀಲ ಕೆ.ಎನ್.ಫಣೀಂದ್ರ, ‘ಸರ್ಕಾರ ತನ್ನ ವಾಗ್ದಾನಕ್ಕೆ ತಕ್ಕಂತೆ ನಡೆದುಕೊಳ್ಳದೇ ಇದ್ದರೆ ನ್ಯಾಯಾಂಗ ನಿಂದನೆ ಅರ್ಜಿ ಮುಂದುವರಿಸುವ ಸ್ವಾತಂತ್ರ್ಯವನ್ನು ಆಯೋಗಕ್ಕೆ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ವಾದ-ಪ್ರತಿವಾದ ದಾಖಲಿಸಿಕೊಂಡ ನ್ಯಾಯಪೀಠ, ‘ಸರ್ಕಾರ ಈಗ ನೀಡಿರುವ ಮೌಖಿಕ ಮುಚ್ಚಳಿಕೆ ಅನುಸಾರ ನಡೆದುಕೊಳ್ಳದೇ ಹೋದರೆ, ಚುನಾವಣಾ ಆಯೋಗವು ನ್ಯಾಯಾಂಗ ನಿಂದನೆ ಅರ್ಜಿ ಮುಂದುವರಿಸುವ ಸ್ವಾತಂತ್ರ್ಯ ಹೊಂದಿರುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿಗಳನ್ನು ವಿಲೇವಾರಿ ಮಾಡಿತು.
₹5 ಲಕ್ಷ ದಂಡ: ‘ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ 12 ವಾರಗಳಲ್ಲಿ ಮೀಸಲಾತಿ ಪ್ರಕಟಿಸಲಾಗುವುದು’ ಎಂದು ಸರ್ಕಾರ 2023ರ ಡಿಸೆಂಬರ್ 19ರಂದು ಹೈಕೋರ್ಟ್‌ಗೆ ಭರವಸೆ ನೀಡಿತ್ತು. ‘ಇದನ್ನು ಪಾಲನೆ ಮಾಡಿಲ್ಲ’ ಎಂದು ರಾಜ್ಯ ಚುನಾವಣಾ ಆಯೋಗವು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ಇದಕ್ಕೂ ಮೊದಲು ಹೈಕೋರ್ಟ್, ‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದಕ್ಕೆ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಹಿಂದುಳಿದ ವರ್ಗಗಳೂ ಸೇರಿದಂತೆ ಇತರೆ ಸಮುದಾಯಗಳಿಗೆ ಕಾಲಮಿತಿಯಲ್ಲಿ ಮೀಸಲಾತಿ ನಿಗದಿಪಡಿಸಲು ವಿಫಲವಾಗಿದೆ’ ಎಂದು ರಾಜ್ಯ ಸರ್ಕಾರಕ್ಕೆ 2020ರ ಡಿಸೆಂಬರ್‌ನಲ್ಲಿ ₹5 ಲಕ್ಷ ದಂಡ ವಿಧಿಸಿತ್ತು.
2021ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಅವಧಿ ಪೂರ್ಣಗೊಂಡ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸಿದ್ದತೆ ಆರಂಭಿಸಿದ್ದ ಚುನಾವಣಾ ಆಯೋಗವು ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡನ್ನು ಪ್ರಕಟಿಸಿತ್ತು. ಆದರೆ, ಸರ್ಕಾರ ಏಕಾಏಕಿ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದಿತ್ತು. ಇದಕ್ಕಾಗಿ ಪ್ರತ್ಯೇಕ ಸೀಮಾ ನಿರ್ಣಯ ಆಯೋಗ ರಚಿಸಿ ಅದಕ್ಕೆ ಹೊಣೆ ವಹಿಸಿತ್ತು. ಆಯೋಗವು ಈ ಕ್ರಮವನ್ನು ಪ್ರಶ್ನಿಸಿತ್ತು.
ಎರಡು ಅರ್ಜಿಗಳು
‘ಸರ್ಕಾರ ನಿಗದಿತ ಅವಧಿಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ವಿಫಲವಾಗಿದೆ’ ಎಂದು ಆರೋಪಿಸಿ ರಾಜ್ಯ ಚುನಾವಣಾ ಆಯೋಗವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಅಂತೆಯೇ ‘ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲು ಏಕಸದಸ್ಯ ನ್ಯಾಯಪೀಠದ ಆದೇಶ ಪಾಲಿಸುವಲ್ಲಿಯೂ ಸರ್ಕಾರ ವಿಫಲವಾಗಿದೆ’ ಎಂದು 2023ರಲ್ಲಿ ಮತ್ತೊಂದು ಅರ್ಜಿ ಸಲ್ಲಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಗಳಿಗೆ ನಾವು ಸಿದ್ಧರಾಗಿದ್ದೇವೆ. ಹೈಕೋರ್ಟ್ ಸೂಚನೆ ಮೇರೆಗೆ ಚುನಾವಣೆ ನಡೆಸಲಾಗುವುದು-ಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.