
ಟೋಕಿಯೊ: ಜಪಾನ್ ರಾಜಧಾನಿ ಟೋಕಿಯೋದಲ್ಲಿರುವ ಕನ್ನಡಿಗರೆಲ್ಲರೂ ಒಟ್ಟಾಗಿ ಸೇರಿ ಪೊಟ್ಲಕ್ ಶೈಲಿ (ಸಾಂಪ್ರದಾಯಿಕ ಆಹಾರ)ಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.
ಜಪಾನ್ ಕನ್ನಡ ಸಂಘದ(ಜೆಕೆಎಸ್) ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಳ್ಳು–ಬೆಲ್ಲ ಹಂಚುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ.
ಜೆಕೆಎಸ್ ಸದಸ್ಯರು ತಮ್ಮ ಮನೆಗಳಲ್ಲಿ ತಯಾರಿಸಿದ ಸಾಂಪ್ರದಾಯಿಕ ತಿನಿಸುಗಳೊಂದಿಗೆ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಪಾನ್‌ನ ಟೋಕುತಾರೋ ಯನಾಯಿರು ಮಾತನಾಡಿ ‘ಈ ಕಾರ್ಯಕ್ರಮವು ಭಾರತೀಯ ಹಾಗೂ ಕರ್ನಾಟಕದ ಸಂಸ್ಕೃತಿಯನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದೇಶದಲ್ಲಿದ್ದರೂ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಜೀವಂತವಾಗಿಟ್ಟುಕೊಳ್ಳುವ ಉದ್ದೇಶದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು ಎಂದು ಆಯೋಜಕರು ಹೇಳಿದ್ದಾರೆ.
ಕನ್ನಡಿಗರ ಜೊತೆಗೆ ಅವರ ಜಪಾನೀಸ್ ಸ್ನೇಹಿತರು ಕೂಡ ಆಚರಣೆಯಲ್ಲಿ ಭಾಗಿಯಾಗಿದ್ದರು. ಪೂಜಾ ಕಾರ್ಯಕ್ರಮದ ಜೊತೆಗೆ ಮನರಂಜನಾ ಕಾರ್ಯಕ್ರಮ ಹಾಗೂ ಮಕ್ಕಳಿಗಾಗಿ ವಿವಿಧ ಆಟಗಳನ್ನು ಆಯೋಜಿಸಲಾಗಿತ್ತು.
ಸಂಕ್ರಾತಿಗಾಗಿ ಬಂತು ಮೈಸೂರು ಪಾಕ್: ಜಪಾನ್ ಕನ್ನಡ ಸಂಘದ ಕಾರ್ಯಕ್ರಮಕ್ಕಾಗಿ ‘ವರ್ಡ್ ಆಫ್ ಮೈಸೂರು ಪಾಕ್’ ಸಂಸ್ಥೆಯವರು ಮೂರು ಕೆ.ಜಿ. ಮೈಸೂರ್ ಪಾಕ್ ಅನ್ನು ಮೈಸೂರಿನಿಂದ ಪ್ರಾಯೋಜಕತ್ವವಾಗಿ ಕಳುಹಿಸಿದ್ದರು.
ಕ್ರಿಯೇಟಿವ್ ಕಿಡ್ಸ್ ವರ್ಕ್‌ಶಾಪ್ ಹಾಗೂ ಬ್ರಾಡ್ ಬ್ರೈನ್ಸ್ ಇಂಕ್(ಜಪಾನ್) ಕಾರ್ಯಕ್ರಮದ ಸಹಪ್ರಾಯೋಜಕತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಕರ್ರಿ ಎಕ್ಸ್ಪೋ ಸಂಸ್ಥಾಪಕ ಯುಕೋನ್, ಕ್ರಿಯೇಟಿವ್ ಕಿಡ್ಸ್ ವರ್ಕ್‌ಶಾಪ್ ಸಂಸ್ಥಾಪಕ ಸುಧೀಂದ್ರ ಸತ್ಯನಾರಾಯಣ ಹಾಗೂ ಜೆಕೆಎಸ್ ಸದಸ್ಯರು ಉಪಸ್ಥಿತರಿದ್ದರು. ಡಾ. ಅನುರಾಧಾ ರಾವ್ ಅವರು ನಿರೂಪಿಸಿದರು.
ವರದಿ: ಕಿರಣ್ ರುದ್ರಮುನಿಸ್ವಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.