ಇಸ್ರೇಲ್ ಜನರನ್ನು ಸೆಳೆದ ಕರ್ನಾಟಕ ತಂಡದ ಯಕ್ಷಗಾನ ಪ್ರದರ್ಶನ
ಚಿತ್ರಕೃಪೆ: @indemtel
ಆಶ್ಕೆಲೋನ್: ಇಸ್ರೇಲ್‌ನ ಪೆಟಾ ಟಿಕ್ವಾ ನಗರದಲ್ಲಿ ನ.2 ರಂದು ನಡೆದ ಹ್ಯಾಡೋಫೆನ್ ಫ್ರಿಂಜ್ ಥಿಯೇಟರ್ ಫೆಸ್ಟಿವಲ್‌ನ ಉದ್ಘಾಟನೆಯಲ್ಲಿ ಕರ್ನಾಟಕದ ತಂಡವೊಂದು ಯಕ್ಷಗಾನ ಪ್ರದರ್ಶನ ನೀಡಿ ಜನರ ಮನಗೆದ್ದಿದೆ.
‘ಯಕ್ಷದೇಗುಲ’ ತಂಡವು ರಾಮಾಯಣ, ಮಹಾಭಾರತದ ಕಥೆಗಳನ್ನು ಪ್ರಸ್ತುತಪಡಿಸಿ ಜನರನ್ನು ರಂಜಿಸಿದೆ.
ಈ ಕುರಿತು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಯಕ್ಷಗಾನ ಪ್ರದರ್ಶನದ ವಿಡಿಯೊ, ಫೋಟೊಗಳನ್ನು ಹಂಚಿಕೊಂಡಿದೆ.
‘ಇಸ್ರೇಲ್‌ನಲ್ಲಿ ಇದೇ ಮೊದಲ ಬಾರಿ ಯಕ್ಷಗಾನ ಕಲೆಯೊಂದು ಪ್ರದರ್ಶನಗೊಂಡಿದ್ದು, ಜನರನ್ನು ಸೆಳೆದಿದೆ. ಅಲ್ಲದೆ ಯಕ್ಷಗಾನ ತಂಡ ಭಾರತದ ಕರ್ನಾಟಕದಿಂದ ಇಲ್ಲಿಗೆ ಬಂದು ಕಲಾ ಪ್ರದರ್ಶನ ನೀಡಿದೆ. ಇದು ಭಾರತ ಮತ್ತು ಇಸ್ರೇಲ್ ನಡುವಿನ ಆಳವಾದ ಸಂಬಂಧವನ್ನು ಸೂಚಿಸುತ್ತದೆ’ ಎಂದು ಮೇಯರ್ ರಾಮಿ ಗ್ರೀನ್‌ಬರ್ಗ್ ಶ್ಲಾಘಿಸಿದ್ದಾರೆ.
‘ವಿಶೇಷ ವೇಷಭೂಷಣ ಧರಿಸಿದ ಪಾತ್ರಧಾರಿಗಳು, ಸಂಗೀತಗಾರರ ವೃತ್ತಿಪರತೆ ಆಕರ್ಷಣೀಯವಾಗಿತ್ತು. ಲಯ, ಸಂಗೀತ, ಕುಣಿತ ಮಾಂತ್ರಿಕ ವಾತಾವರಣವನ್ನೇ ಸೃಷ್ಟಿಸಿತ್ತು’ ಎಂದು ಯಕ್ಷಗಾನ ವೀಕ್ಷಣೆಗೆ ಬಂದಿದ್ದ ಓರ್ನಾ ರೂಬೆನ್ ಎನ್ನುವವರು ಪಿಟಿಐಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.