ADVERTISEMENT

ಏಷ್ಯಾಕ್ಕೆ ಭಯೋತ್ಪಾದನೆಯೇ ದೊಡ್ಡ ಬೆದರಿಕೆ: ಸಚಿವ ಎಸ್‌.ಜೈಶಂಕರ್‌ ಪ್ರತಿಪಾದನೆ

ಸಿಐಸಿಎ ಸಭೆ

ಪಿಟಿಐ
Published 15 ಜೂನ್ 2019, 19:46 IST
Last Updated 15 ಜೂನ್ 2019, 19:46 IST
ಎಸ್‌.ಜೈಶಂಕರ್
ಎಸ್‌.ಜೈಶಂಕರ್   

ದುಶಾಂಬೆ: ಭಯೋತ್ಪಾದಕತೆಯ ಭೀಕರ ಬೆದರಿಕೆಯನ್ನು ಏಷ್ಯಾದ ಜನರು ಎದುರಿಸುತ್ತಿದ್ದಾರೆ. ಆದರೆ, ಉಗ್ರರು ಮತ್ತು ಅವರ ಕ್ರೌರ್ಯಕ್ಕೆ ಒಳಗಾದವರನ್ನು ಸಮಾನ ದೃಷ್ಟಿಯಿಂದ ನೋಡಲು ಎಂದೂ ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಶನಿವಾರ ಹೇಳಿದ್ದಾರೆ.

ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆದಿರುವ ಏಷ್ಯಾದಲ್ಲಿ ವಿಶ್ವಾಸವೃದ್ಧಿ ಮತ್ತು ಸಂವಾದ ಕುರಿತ ಸಮಾವೇಶದ (ಸಿಐಸಿಎ) 5ನೇ ಸಭೆಯಲ್ಲಿ ಮಾತನಾಡಿದ ಅವರು, ಸಿಐಸಿಎ ಸದಸ್ಯ ರಾಷ್ಟ್ರಗಳು ಭಯೋತ್ಪಾದನೆಗೆ ಗುರಿಯಾಗಿವೆ ಎಂದು ಪುನರುಚ್ಚರಿಸಿದರು.

ಕಿರ್ಗಿಸ್ತಾನ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ಜೊತೆಗೆ ಕುಮ್ಮಕ್ಕು ನೀಡುತ್ತಿರುವ ದೇಶಗಳನ್ನು ಉತ್ತರದಾಯಿಯನ್ನಾಗಿ ಮಾಡಬೇಕು’ ಎಂದು ಹೇಳಿಕೆ ನೀಡಿದ ಮರುದಿನವೇ ಜೈಶಂಕರ್‌ ಅವರು ಈ ಹೇಳಿಕೆ ನೀಡಿದ್ದಾರೆ.

ADVERTISEMENT

‘ಅಫ್ಗಾನಿಸ್ತಾನದಲ್ಲಿ ಶಾಂತಿ ಮತ್ತು ಸಾಮರಸ್ಯ ಮೂಡಿಸುವ ಪ್ರಕ್ರಿಯೆಗೆ ಭಾರತದ ಬೆಂಬಲವಿದೆ. ಎಲ್ಲ ಸಮುದಾಯಗಳನ್ನೊಳಗೊಂಡು ಶಾಂತಿ ಸ್ಥಾಪನೆಗೆ ಅಲ್ಲಿನ ಚುನಾಯಿತ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಗೌರವಿಸುತ್ತೇವೆ’ ಎಂದರು.

ಇದಕ್ಕೂ ಮುನ್ನ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಜೈಶಂಕರ್‌ ಅವರನ್ನು ತಸಕಿಸ್ತಾನದ ಅಧ್ಯಕ್ಷ ಎಮೋಮಾಲಿ ರಹಮಾನ್ ಅವರು ಸ್ವಾಗತಿಸಿದರು. ಸಹಕಾರವನ್ನು ಹೆಚ್ಚಿಸಲು ಮತ್ತು ಏಷ್ಯಾದಲ್ಲಿ ಶಾಂತಿ, ಸುರಕ್ಷತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ವೇದಿಕೆ ಸಿಐಸಿಎ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.