ಲಾಸ್ ಏಂಜಲಿಸ್ (ಪಿಟಿಐ): ಅಮೆರಿಕದ ಕಪ್ಪುವರ್ಣೀಯರ ಗುಲಾಮಗಿರಿ, ಯಾತನಾಮಯ ಹೋರಾಟದ ಕರಾಳ ಮುಖಗಳನ್ನು ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಬಿಡಿಸಿಟ್ಟ ಸ್ಟೀವ್ ಮ್ಯಾಕ್ ಕ್ವೀನ್ಸ್ ನಿರ್ದೇಶನದ ‘12 ಇಯರ್‍ಸ್ ಎ ಸ್ಲೇವ್’ ಚಿತ್ರ ಪ್ರಸಕ್ತ ವರ್ಷದ ಅತ್ಯುತ್ತಮ ಇಂಗ್ಲಿಷ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಬಾಚಿಕೊಂಡಿದೆ.
ಕಪ್ಪುವರ್ಣೀಯ ನಿರ್ದೇಶಕರೊಬ್ಬರು ನಿರ್ದೇಶಿಸಿದ ಚಿತ್ರವೊಂದು ಇದೇ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಹಾಲಿವುಡ್ ಚಿತ್ರರಂಗ ಶತಮಾನಗಳಿಂದ ಕಡೆಗಣಿಸುತ್ತಲೇ ಬಂದ ಅಮೆರಿಕದ ಕಪ್ಪುವರ್ಣೀಯರ ಗುಲಾಮಗಿರಿಯಂತಹ ಗಂಭೀರ ಮತ್ತು ನಿರ್ಲಕ್ಷಿತ ವಿಷಯವನ್ನು ಆಯ್ಕೆ ಮಾಡಿಕೊಂಡ ಸ್ಟೀವ್ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಲಾಸ್ ಏಂಜಲೀಸ್ನಲ್ಲಿ ನಡೆದ ೮೬ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ 44 ವರ್ಷದ ಸ್ಟೀವ್, ಅಮೆರಿಕದಲ್ಲಿ ಇನ್ನೂ ಎರಡು ಕೋಟಿ ಜನರು ಗುಲಾಮರಾಗಿದ್ದಾರೆ. ಗುಲಾಮಗಿರಿಯ ನೋವನ್ನು ಉಂಡವರಿಗೆ ತಮ್ಮ ಚಿತ್ರದ ಪ್ರಶಸ್ತಿಯನ್ನು ಅರ್ಪಿಸುವುದಾಗಿ ಹೇಳಿದರು.
ಬಾಹ್ಯಾಕಾಶದಲ್ಲಿ ನಡೆಯುವ ದುರಂತ ನಾಟಕೀಯ ಘಟನೆಗಳನ್ನು ಕುತೂಹಲಕಾರಿಯಾಗಿ ಚಿತ್ರಿಸಿದ ‘ಗ್ರ್ಯಾವಿಟಿ’ 3ಡಿ ಚಿತ್ರ ವಿವಿಧ ವಿಭಾಗಗಳಲ್ಲಿ ಏಳು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಉತ್ತಮ ನಿರ್ದೇಶಕ ಪ್ರಶಸ್ತಿ ಕೂಡಾ ‘ಗ್ರ್ಯಾವಿಟಿ’ ನಿರ್ದೇಶಕ ಅಲ್ಫಾನ್ಸೋ ಕ್ಯೂರಾನ್ ಅವರ ಪಾಲಾಗಿದೆ. ಈ ಚಿತ್ರದಲ್ಲಿ ಉನ್ನತ ತಾಂತ್ರಿಕ ಪರಿಣತಿಯನ್ನು ತೆರೆ ಮೇಲೆ ಅನಾವರಣಗೊಳಿಸಿಸುವ ಮೂಲಕ 52 ವರ್ಷದ ಕ್ಯೂರಾನ್ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದ್ದರು.
ವೂಡಿ ಅಲೆನ್ಸ್ ನಿರ್ದೇಶನದ ‘ಬ್ಲೂ ಜಾಸ್ಮಿನ್’ ಚಿತ್ರದಲ್ಲಿ ಹತಾಶ ಶ್ರೀಮಂತ ಮಹಿಳೆಯ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿದ ನಟಿ ಕೇಟ್ ಬ್ಲಾಂಚೆಟ್ ‘ಉತ್ತಮ ನಟಿ’ ಪ್ರಶಸ್ತಿ ಪಡೆದಿದ್ದಾರೆ.
ಏಡ್ಸ್ ಜಾಗೃತಿಗಾಗಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ರಾನ್ ವೂಡ್‌ರೂಫ್ ನೈಜ ಜೀವನ ಕಥೆಯನ್ನು ಆಧರಿಸಿದ ಚಿತ್ರದ ಅಭಿನಯಕ್ಕಾಗಿ ನಾಯಕ ನಟ ಮ್ಯಾಥ್ಯೂ ಮ್ಯಾಕ್ ಕೊನಾಗ್ ‘ಉತ್ತಮ ನಟ’ ಪ್ರಶಸ್ತಿ ಬಾಚಿಕೊಂಡಿದ್ದಾರೆ.
‘12 ಇಯರ್‍ಸ್ ಎ ಸ್ಲೇವ್’ ಚಿತ್ರದ ಅಭಿನಯಕ್ಕಾಗಿ ಲುಪಿಟಾ ನ್ಯಾಂಗೊ ಉತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು. ಪತ್ರಕರ್ತನ ಜೀವನ ಕುರಿತಾದ ಇಟಲಿಯ ‘ದಿ ಗ್ರೇಟ್ ಬ್ಯೂಟಿ’ ವಿದೇಶಿ ಚಿತ್ರಗಳ ವಿಭಾಗದ ಪ್ರಶಸ್ತಿ ಪಡೆಯಿತು.ಇದಕ್ಕೂ ಮೊದಲು ಈ ವಿಭಾಗದಲ್ಲಿ ಇಟಲಿಯ 27 ಚಿತ್ರಗಳು ಪ್ರಶಸ್ತಿ ಪಡೆದಿವೆ.
ಭಾರತದ ಗುಜರಾತಿ ಚಿತ್ರ ‘ದಿ ಗುಡ್ ರೋಡ್’ ವಿದೇಶಿ ವಿಭಾಗ ಚಿತ್ರದಲ್ಲಿ ಪ್ರವೇಶ ಪಡೆದಿತ್ತು. ಆದರೆ, ಪೈಪೋಟಿ ನೀಡಲು ಅದು ವಿಫಲವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.