ಲಾಹೋರ್ (ಪಿಟಿಐ): ಪಾಕಿಸ್ತಾನ ಜೈಲಿನಲ್ಲಿ ಮೃತಪಟ್ಟ ಭಾರತೀಯ ಕೈದಿ ಚಮೇಲ್ ಸಿಂಗ್ ಅವರ ಸಾವಿನ ಪ್ರಕರಣ ಕುರಿತು ನ್ಯಾಯಾಂಗ ತನಿಖೆ ನಡೆಸಲು ಪಾಕಿಸ್ತಾನ ಸರ್ಕಾರ ಶನಿವಾರ ಆದೇಶಿಸಿದೆ.
ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಲಾಹೋರ್‌ನ ಲಖ್‌ಪತ್ ಜೈಲಿನಲ್ಲಿ ಐದು ವರ್ಷ ಶಿಕ್ಷೆ ಅನುಭವಿಸುತ್ತಿದ್ದ ಸಿಂಗ್ ಅವರನ್ನು ಜೈಲು ಸಿಬ್ಬಂದಿ ಥಳಿಸಿದ್ದೇ ಅವರ ಸಾವಿಗೆ ಕಾರಣ ಎಂದು ವಕೀಲರೊಬ್ಬರು ಆರೋಪಿಸಿದ್ದನ್ನು ಇಲ್ಲಿನ ಮಾಧ್ಯಮಗಳು ಶುಕ್ರವಾರ ವರದಿ ಮಾಡಿದ್ದವು. ಮಾಧ್ಯಮಗಳ ಆರೋಪವನ್ನು ಅಲ್ಲಗಳೆದಿರುವ ಲಖ್‌ಪತ್ ಜೈಲಿನ ಹೆಚ್ಚುವರಿ ವರಿಷ್ಠಾಧಿಕಾರಿ ಇಷ್ತಿಯಾಕ್ ಹಮೀದ್ ಅವರು, `ತಿಂಡಿ ತಿನ್ನುವಾಗ ಸಿಂಗ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಇಲ್ಲಿನ ಜಿನ್ನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಸಿಂಗ್ ಅವರನ್ನು ತಪಾಸಣೆ ನಡೆಸಿದ ವೈದ್ಯರು ಸಾವಿಗೆ ಹೃದಯಾಘಾತವೇ ಕಾರಣ ಎಂದು ಹೇಳಿದ್ದಾರೆ' ಎಂದಿದ್ದಾರೆ.
`ಘಟನೆ ಕುರಿತು ಚಮೇಲ್ ಸಿಂಗ್ ಬ್ಯಾರಕ್‌ನಲ್ಲಿದ್ದ ಹದಿನಾಲ್ಕು ಭಾರತೀಯ ಕೈದಿಗಳು ನೀಡಿರುವ ಹೇಳಿಕೆಯನ್ನು ಇಲ್ಲಿನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಫ್ಜಲ್ ಅಬ್ಬಾಸ್ ಅವರು ದಾಖಲಿಸಿಕೊಂಡ್ದ್ದಿದಾರೆ. ಹಾಗಾಗಿ ಜೈಲು ಸಿಬ್ಬಂದಿ ಸಿಂಗ್‌ಗೆ ಹಿಂಸೆ ನೀಡಿದ್ದಾರೆ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ' ಎಂದು ಹಮೀದ್ ಹೇಳಿದ್ದಾರೆ.
`ಸಿಂಗ್ ಅವರ ಶವಪರೀಕ್ಷೆ ನಡೆದ ನಂತರ ಸಾವಿನ ಕಾರಣ ಗೊತ್ತಾಗಲಿದೆ' ಎಂದು ಜಿನ್ನಾ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಹುಸೇನ್ ಮುದಾಸೀರ್ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.