ADVERTISEMENT

ಹಿಮ ಬಿರುಗಾಳಿಗೆ ಅಮೆರಿಕ ತತ್ತರ

ಒಟ್ಟು 7,100 ವಿಮಾನಗಳ ಸೇವೆ ರದ್ದು

​ಪ್ರಜಾವಾಣಿ ವಾರ್ತೆ
Published 23 ಜನವರಿ 2016, 19:56 IST
Last Updated 23 ಜನವರಿ 2016, 19:56 IST
ಹಿಮದಲ್ಲಿ ಸಿಕ್ಕಿಕೊಂಡಿರುವ ಕಾರು  ಎಎಫ್‌ಪಿ ಚಿತ್ರ
ಹಿಮದಲ್ಲಿ ಸಿಕ್ಕಿಕೊಂಡಿರುವ ಕಾರು ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌ (ಪಿಟಿಐ/ ರಾಯಿಟರ್ಸ್‌): ಅಮೆರಿಕದಲ್ಲಿ ಹಿಮದ ಬಿರುಗಾಳಿ ತೀವ್ರವಾಗಿಯೇ ಬೀಸುತ್ತಿದ್ದು, ಶನಿವಾರ ಇನ್ನಷ್ಟು ಕಡೆ ಭಾರಿ ಹಿಮ ಸುರಿದಿದೆ.  ಇದುವರೆಗೆ ಎಂಟು ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ವಾಷಿಂಗ್ಟನ್‌  ಒಳಗೊಂಡಂತೆ ಅನೇಕ ಕಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಶುಕ್ರವಾರ ಮತ್ತು ಶನಿವಾರ ದೇಶದಾದ್ಯಂತ ಒಟ್ಟು 7,100 ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ.

10 ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸ ಲಾಗಿದ್ದು, 1.20 ಲಕ್ಷ ಮನೆಗಳು ವಿದ್ಯುತ್‌ ಸಂಪರ್ಕ ಕಳೆದುಕೊಂಡಿವೆ.  20 ರಾಜ್ಯಗಳ  ಸುಮಾರು 8.5 ಕೋಟಿ ಮಂದಿ ತೊಂದರೆಗೆ ಒಳಗಾಗಿದ್ದಾರೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ಜಾರ್ಜಿಯಾ, ನಾರ್ಥ್‌ ಕರೋಲಿನಾ, ಟೆನೆಸ್ಸಿ, ಮೇರಿಲ್ಯಾಂಡ್‌, ವರ್ಜೀನಿಯಾ, ಪೆನ್ಸಿಲ್ವೇನಿಯಾ, ನ್ಯೂಜೆರ್ಸಿ, ನ್ಯೂಯಾರ್ಕ್‌ ಮತ್ತು ಕೆಂಟುಕಿಯಲ್ಲಿ ಹಿಮಮಾರುತದಿಂದ ಹೆಚ್ಚಿನ ಪ್ರಮಾಣದ ತೊಂದರೆಯಾಗಿದೆ.

ಅನೇಕ ಕಡೆ ಸಂಚಾರ ವ್ಯವಸ್ಥೆ ಸ್ತಬ್ಧವಾಗಿದ್ದು ರೈಲು ಮತ್ತು ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ. ನಾರ್ಥ್‌ ಕರೋಲಿನಾ ಮತ್ತು ನ್ಯೂಯಾರ್ಕ್‌ ನಡುವಣ ಸಂಪರ್ಕ ಕಡಿದುಹೋಗಿದೆ.

ಈ ವಾರಾಂತ್ಯಕ್ಕೆ ವಾಷಿಂಗ್ಟನ್‌ನಲ್ಲಿ ಎರಡೂವರೆ ಅಡಿಗಳಷ್ಟು (30 ಇಂಚು) ದಪ್ಪ ಹಿಮ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 1922 ರಲ್ಲಿ ಇಲ್ಲಿ 28 ಇಂಚುಗಳಷ್ಟು ಹಿಮ ಬಿದ್ದಿತ್ತು.

‘90 ವರ್ಷಗಳ ಇತಿಹಾಸದಲ್ಲಿ ಕೇಳಿರದಂತಹ ಹವಾಮಾನ ಮುನ್ಸೂಚನೆಯನ್ನು ನಾವು ಕೇಳುತ್ತಿದ್ದೇವೆ. ಸಾವು–ಬದುಕಿನ ನಡುವೆ ಸಿಲುಕಿದ್ದೇವೆ’ ಎಂದು ವಾಷಿಂಗ್ಟನ್‌ ಡಿಸಿ ಮೇಯರ್‌ ಮಿರಿಯೆಲ್‌ ಇ ಬೌಸೆರ್‌ ತಿಳಿಸಿದ್ದಾರೆ. 

ಹಿಮಮಾರುತ ಇನ್ನೂ 36 ಗಂಟೆ ಮುಂದುವರಿಯಲಿದ್ದು, ಕೆಲವು ಪ್ರದೇಶಗಳಲ್ಲಿ ಎರಡು ಅಡಿಗಳಷ್ಟು ಹಿಮ ಬೀಳಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶನಿವಾರ ಬೆಳಿಗ್ಗೆ ವಾಷಿಂಗ್ಟನ್‌ನಲ್ಲಿ ಗಂಟೆಗೆ 48 ರಿಂದ 80 ಕಿ.ಮೀ. ಗಳಷ್ಟು ವೇಗದಲ್ಲಿ ಬೀಸುತ್ತಿದ್ದ ಹಿಮಮಾರುತ, ಸಂಜೆಯ ವೇಳೆಗೆ ನ್ಯೂಯಾರ್ಕ್‌ನತ್ತ ಮುಖ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.