ವಿಶ್ವಸಂಸ್ಥೆ: ಕಳೆದ ವರ್ಷ (2017) ನಡೆದ ಸಮೀಕ್ಷೆ ಪ್ರಕಾರ ಭಾರತದಲ್ಲಿ 1.20 ಲಕ್ಷ ಹದಿಹರೆಯದವರು ಮತ್ತು ಮಕ್ಕಳು ಎಚ್‌ಐವಿ ಪೀಡಿತರಾಗಿದ್ದಾರೆ ಎಂದು ಯುನಿಸೆಫ್ ವರದಿ ತಿಳಿಸಿದೆ.
ಇದು ದಕ್ಷಿಣ ಏಷ್ಯಾದಲ್ಲೇ ಅತಿ ಹೆಚ್ಚು. ಪಾಕಿಸ್ತಾನದಲ್ಲಿ 5,800, ನೇಪಾಳದಲ್ಲಿ 1,600 ಹಾಗೂ ಬಾಂಗ್ಲಾದೇಶದಲ್ಲಿ 1 ಸಾವಿರಕ್ಕೂ ಕಡಿಮೆ ಇದ್ದಾರೆ. 0–19 ವಯಸ್ಸಿನವರನ್ನು ಗುರುತಿಸಿ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಎಚ್‌ಐವಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳದಿದ್ದರೆ 2030ರ ವೇಳೆಗೆ ಪ್ರತಿ ದಿನ 80 ಮಂದಿ ಹದಿಹರೆಯದವರು ಸಾವಿಗೀಡಾಗುತ್ತಾರೆ ಎಂದು ವರದಿ ಎಚ್ಚರಿಕೆ ನೀಡಿದೆ.
ಮಕ್ಕಳು, ಹದಿಹರೆಯದವರು, ಗರ್ಭಿಣಿಯರಿಗೆ ಎಚ್‌ಐವಿ ಹರಡದಂತೆ ದಕ್ಷಿಣ ಏಷ್ಯಾ ಉತ್ತಮ ಕ್ರಮಗಳನ್ನು ಕೈಗೊಂಡಿದೆ. 2017ರಲ್ಲಿ ಶೇಕಡ 43ರಷ್ಟು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಎಚ್‌ಐವಿ ಪತ್ತೆಯಾಗಿತ್ತು. 2010ಕ್ಕೆ ಹೋಲಿಸಿದರೆ ಇದು ಕಡಿಮೆ ಎಂದು ವಿವರಿಸಲಾಗಿದೆ.
ಏಡ್ಸ್‌ಗೆ ಸಂಬಂಧಿಸಿದ ಸಾವುಗಳು ಕ್ರಮೇಣ ಕಡಿಮೆಯಾಗುತ್ತಿವೆ. ಆದರೆ, ಎಚ್‌ಐವಿ ಪೀಡಿತ ಮಕ್ಕಳು ಐದು ವರ್ಷ ಪೂರೈಸುವ ಮುನ್ನವೇ ಸಾವಿಗೀಡಾಗುತ್ತಿವೆ. ಹೀಗಾಗಿ, ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ ಎಂದು ಸಲಹೆ ನೀಡಲಾಗಿದೆ.
ತಾಯಿಯಿಂದ ಮಗುವಿಗೆ ಎಚ್ಐವಿ ಸೋಂಕು ಹರಡುವುದು ಕಳೆದ ಎಂಟು ವರ್ಷಗಳಲ್ಲಿ ಶೇಕಡ 40ರಷ್ಟು ಕಡಿಮೆಯಾಗಿದೆ. ಜಾಗತಿಕವಾಗಿ ಪ್ರಸ್ತುತ 19 ವರ್ಷದ ಒಳಗಿನ 30 ಲಕ್ಷ ಜನರಿಗೆ ಎಚ್‌ಐವಿ ಇರುವುದು ಪತ್ತೆಯಾಗಿದೆ. ಸಮರ್ಪಕ ಚಿಕಿತ್ಸೆ, ಜಾಗೃತಿ ಮೂಡಿಸುವುದು ಹಾಗೂ ನಿಯಂತ್ರಣ ಕ್ರಮಗಳ ಮೂಲಕ 2030ರ ವೇಳೆಗೆ ಹೊಸದಾಗಿ 20 ಲಕ್ಷ ಮಂದಿಗೆ ಎಚ್‌ಐವಿ ತಗುಲದಂತೆ ಎಚ್ಚರವಹಿಸಬಹುದು ಎಂದು ತಿಳಿಸಿದೆ.
ಹಲವು ಮಕ್ಕಳು ಮತ್ತು ಹದಿಹರೆಯದವರು ತಮ್ಮ ಅನಾರೋಗ್ಯದ ಬಗ್ಗೆ ತಿಳಿದುಕೊಳ್ಳುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಎಚ್‌ಐವಿ ಇರುವುದು ದೃಢಪಟ್ಟರೂ ಸಮರ್ಪಕ ಚಿಕಿತ್ಸೆ ಪಡೆಯುವುದಿಲ್ಲ ಎನ್ನುವುದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.