ADVERTISEMENT

ಮೆಕ್ಸಿಕೊ ಕಾರಾಗೃಹದ ಮೇಲೆ ಭೀಕರ ದಾಳಿ: 14 ಮಂದಿ ದುರ್ಮರಣ, 24 ಕೈದಿಗಳು ಪರಾರಿ

ಏಜೆನ್ಸೀಸ್
Published 2 ಜನವರಿ 2023, 4:02 IST
Last Updated 2 ಜನವರಿ 2023, 4:02 IST
ಕಾರಾಗೃಹದ ಬಳಿ ಸೈನಿಕರ ನಿಯೋಜನೆ
ಕಾರಾಗೃಹದ ಬಳಿ ಸೈನಿಕರ ನಿಯೋಜನೆ    

ಮೆಕ್ಸಿಕೊ ಸಿಟಿ: ಟೆಕ್ಸಾಸ್‌ನ ಎಲ್ ಪಾಸೊ ಪ್ರಾಂತ್ಯದ ಗಡಿಯಾಚೆಗಿನ ಸಿಯುಡಾಡ್ ಜುರೆಜ್‌ ಎಂಬಲ್ಲಿರುವ ಮೆಕ್ಸಿಕೊದ ಕಾರಾಗೃಹದ ಮೇಲೆ ಬಂದೂಕುಧಾರಿಗಳು ಭಾನುವಾರ ದಾಳಿ ಮಾಡಿದ್ದು, ಹತ್ತು ಭದ್ರತಾ ಸಿಬ್ಬಂದಿ ಮತ್ತು ನಾಲ್ವರು ಕೈದಿಗಳು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕಾರಾಗೃಹದ ಬಳಿಗೆ ಹಲವು ಶಸ್ತ್ರಸಜ್ಜಿತ ವಾಹನಗಳು ಬಂದವು. ಅದರಲ್ಲಿದ್ದ ಬಂದೂಕುಧಾರಿಗಳು ಕಾವಲುಗಾರರ ಮೇಲೆ ಗುಂಡಿನ ಮಳೆಗರೆದರು ಎಂದು ಚಿಹೋವಾ ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಘಟನೆಯಲ್ಲಿ 13 ಜನರು ಗಾಯಗೊಂಡಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡ 24 ಕೈದಿಗಳು ಪರಾರಿಯಾಗಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮೆಕ್ಸಿಕನ್ ಸೈನಿಕರು ಮತ್ತು ಪೊಲೀಸರು ಜೈಲನ್ನು ನಿಯಂತ್ರಣಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ADVERTISEMENT

ಆಗಸ್ಟ್‌ನಲ್ಲಿ, ಅದೇ ಜೈಲಿನೊಳಗಿನ ಗಲಭೆ ನಡೆದಿತ್ತು. ಜೈಲಿನಲ್ಲಿದ್ದ ಇಬ್ಬರು ಕೈದಿಗಳನ್ನು ಗುಂಪೊಂದು ಕೊಂದು ಹಾಕಿತ್ತು. ನಂತರ ಜುರೆಜ್‌ ಬೀದಿಗಳಿಗೂ ಹಿಂಸಾಚಾರ ಹಬ್ಬಿತ್ತು. ಹತ್ಯೆ ಮಾಡಿದ್ದ ಗುಂಪು ಜುರೆಜ್‌ ಪಟ್ಟಣದಲ್ಲಿ ಗುಂಡಿನ ದಾಳಿ ನಡೆಸಿತ್ತು. ಒಟ್ಟಾರೆ ಘಟನೆಯಲ್ಲಿ ಆಗ 11 ಜನರು ಮೃತಪಟ್ಟಿದ್ದರು.

ಮೆಕ್ಸಿಕನ್ ಜೈಲುಗಳಲ್ಲಿ ಆಗಾಗ್ಗೆ ಹಿಂಸಾಚಾರಗಳು ನಡೆಯುತ್ತಲೇ ಇರುತ್ತವೆ. ಕೈದಿಗಳ ಗುಂಪುಗಳ ನಡುವೆ ಘರ್ಷಣೆಗಳು ನಿಯಮಿತವಾಗಿ ಸ್ಫೋಟಗೊಳ್ಳುತ್ತಲೇ ಇರುತ್ತವೆ.

ಭಾನುವಾರದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಂತರದ ಘಟನೆಯಲ್ಲಿ ಪೊಲೀಸರು ಇಬ್ಬರು ಬಂದೂಕುಧಾರಿಗಳನ್ನೂ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.