ಟೆಹರಾನ್: ಆಗ್ನೇಯ ಇರಾನ್‌ನಲ್ಲಿನ ಪೊಲೀಸ್ ಠಾಣೆ ಮೇಲೆ ಶನಿವಾರ ನಾಲ್ವರು ಉಗ್ರರು ದಾಳಿ ನಡೆಸಿ, ಭದ್ರತಾ ಪಡೆಯ ಇಬ್ಬರು ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ ಎಂದು ಸರ್ಕಾರಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನದ ಗಡಿಯಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಇರಾನ್‌ನ ಸಿಸ್ತಾನ್ ಮತ್ತು ಬಲೂಚಿಸ್ತಾನ ಪ್ರಾಂತ್ಯದ ಜಹೇದಾನ್ ನಗರದ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಪೊಲೀಸ್ ಠಾಣೆ ಪ್ರವೇಶಿಸಲು ಪ್ರಯತ್ನಿಸಿದ ಉಗ್ರರು, ಗ್ರೆನೇಡ್‌ಗಳನ್ನು ಹೊಂದಿದ್ದರು ಎಂದು ಪ್ರಾಂತ್ಯದ ಡೆಪ್ಯುಟಿ ಗವರ್ನರ್ ಅಲಿರೆಜಾ ಮರ್ಹಮತಿ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ಇರಾನ್‌ನ ಪ್ರಬಲ ರೆವಲ್ಯೂಷನರಿ ಗಾರ್ಡ್ ಹೇಳಿಕೆಯಲ್ಲಿ ತಿಳಿಸಿದೆ.
ಇರಾನ್‌ನ ಪವಿತ್ರ ಸ್ಥಳ ಶಾ ಚೇರಾಗ್ ಮಸೀದಿ ಮೇಲೆ ಅ. 26 ರಂದು ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಅಧಿಕಾರಿಗಳು ಶನಿವಾರ ಗಲ್ಲಿಗೇರಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಐಆರ್‌ಎನ್‌ಎ ಸುದ್ದಿ ಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.