ADVERTISEMENT

ನ್ಯೂಯಾರ್ಕ್‌: ತುರ್ತು ಪರಿಸ್ಥಿತಿ ಘೋಷಣೆ

ಅಮೆರಿಕದಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ 400ಕ್ಕೆ ಏರಿಕೆ * ಚೀನಾದ ವುಹಾನ್‌ನಲ್ಲಿ ಒಂದೇ ದಿನ 27 ಸಾವು

ಏಜೆನ್ಸೀಸ್
Published 8 ಮಾರ್ಚ್ 2020, 20:00 IST
Last Updated 8 ಮಾರ್ಚ್ 2020, 20:00 IST
ಇರಾನ್‌ನಲ್ಲಿ ಮಹಿಳೆಯರು ಮುಖಗವಸು ಧರಿಸಿ, ಗುಲಾಬಿ ಹಿಡಿದು ವಿಶ್ವ ಮಹಿಳಾ ದಿನವನ್ನು ಆಚರಿಸಿದರು – ಎಎಫ್‌ಪಿ ಚಿತ್ರ
ಇರಾನ್‌ನಲ್ಲಿ ಮಹಿಳೆಯರು ಮುಖಗವಸು ಧರಿಸಿ, ಗುಲಾಬಿ ಹಿಡಿದು ವಿಶ್ವ ಮಹಿಳಾ ದಿನವನ್ನು ಆಚರಿಸಿದರು – ಎಎಫ್‌ಪಿ ಚಿತ್ರ   

ಲಾಸ್‌ ಏಂಜಲೀಸ್‌ (ಎಎಫ್‌ಪಿ, ಎಪಿ, ಪಿಟಿಐ): ಕೋವಿಡ್‌ –19 ಸೋಂಕಿತರ ಸಂಖ್ಯೆ 400 ದಾಟಿದ್ದರಿಂದ ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಲಂಗರಿಗೆ ಬರಲುಗ್ರ್ಯಾಂಡ್‌ ಪ್ರಿನ್ಸೆಸ್‌ ಹಡಗಿಗೆ ಅನುಮತಿ ನೀಡಲಾಗಿದೆ. ಹಡಗಿನಲ್ಲಿದ್ದ 45 ಮಂದಿಯನ್ನು ‍ಪರೀಕ್ಷಿಸಿದಾಗ ಅವರಲ್ಲಿ 21 ಮಂದಿಗೆ ಸೋಂಕು ಇರುವುದು ಬೆಳಕಿಗೆ ಬಂದಿತ್ತು. ಆದ್ದರಿಂದ ಹಡಗನ್ನು ಸಮುದ್ರದಲ್ಲೇ ಇರಿಸಲಾಗಿತ್ತು.

ಅಮೆರಿಕದ 30 ರಾಜ್ಯಗಳಲ್ಲಿ ಸೋಂಕು ಹರಡಿದ್ದು, ಇಲ್ಲಿಯವರೆಗೆ 19 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಇರಾನ್‌ಲ್ಲಿ ಭಾನುವಾರ ಒಂದೇ ದಿನ ಸೋಂಕಿನಿಂದ 49 ಮಂದಿ ಮೃತಪಟ್ಟಿದ್ದು ಇಲ್ಲಿಯವರೆಗೆ ಒಟ್ಟು 194 ಮಂದಿ ಸಾವನ್ನಪ್ಪಿದ್ದಾರೆ. ಚೀನಾ ನಂತರ ಅತಿ ಹೆಚ್ಚು ಮಂದಿ ಇಲ್ಲಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬೀಜಿಂಗ್‌ ವರದಿ: ವೈರಸ್‌ನಿಂದ ಬಳಲುತ್ತಿದ್ದವರನ್ನು ಇರಿಸಲಾಗಿದ್ದ ಕ್ವನ್ಟೊವೊ ನಗರದ ಹೋಟೆಲ್‌ನ ಕಟ್ಟಡ ಶನಿವಾರ ಕುಸಿದು ಬಿದ್ದಿತ್ತು. ಈ ಅವಘಡದಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

71 ಮಂದಿ ಅವಶೇಷಗಳ ಅಡಿ ಶನಿವಾರ ಸಿಲುಕಿಕೊಂಡಿದ್ದರು. ಇವರಲ್ಲಿ 43 ಮಂದಿಯನ್ನು ಹೊರಗೆ ತೆಗೆಯಲಾಗಿದೆ. ಈ ಸಂದರ್ಭದಲ್ಲೇ ಆರು ಮಂದಿ ಮೃತಪಟ್ಟರು. ಆಸ್ಪತ್ರೆಗೆ ದಾಖಲಾದ ನಂತರಒಬ್ಬ ವ್ಯಕ್ತಿ ಮೃತಪಟ್ಟರು. ಇನ್ನೂ 23 ಮಂದಿಯ ರಕ್ಷಣೆ ಕಾರ್ಯ ಸಾಗಿದೆ ಎಂದು ವರದಿ ಹೇಳಿದೆ.

ಚೀನಾದಲ್ಲಿ 27 ಸಾವು( ಬೀಜಿಂಗ್‌ ,ಎಎಫ್‌ಪಿ): ‘ಚೀನಾದ ವುಹಾನ್‌ ಪ್ರದೇಶದಲ್ಲಿ ಭಾನುವಾರ 27 ಮಂದಿ ಮೃತಪಟ್ಟಿದ್ದು, ದೇಶದಲ್ಲಿ ಮೃತಪಟ್ಟವರ ಸಂಖ್ಯೆ 3,097ಕ್ಕೆ ಏರಿಕೆಯಾಗಿದೆ.

ಎನ್‌ಐವಿ: ದಿನವಿಡೀ ಮಾದರಿಗಳ ಪರೀಕ್ಷೆ
ಪುಣೆ (ಪಿಟಿಐ):
‘ಕೋವಿಡ್‌’ ಸೋಂಕು ಭೀತಿ ಕಾಣಿಸಿಕೊಂಡ ಹಿಂದೆಯೇ ಇಲ್ಲಿರುವ, ದೇಶದ ಪ್ರಮುಖ ರಾಷ್ಟ್ರೀಯ ರೋಗಸೂಕ್ಷ್ಮಾಣು ಜೀವಿ ಅಧ್ಯಯನ ಕೇಂದ್ರ (ಎನ್ಐವಿ) ಬಿಡುವಿಲ್ಲದ ಚಟುವಟಿಕೆಗೆ ಸಾಕ್ಷಿಯಾಗಿದೆ.

ದೇಶದಾದ್ಯಂತ ಸೋಂಕು ಪೀಡಿತ ಶಂಕಿತರ ಮಾದರಿಗಳನ್ನು ಇಲ್ಲಿಗೆ ಕಳುಹಿಸಲಾಗುತ್ತಿದೆ. ಸುರಕ್ಷತಾ ವಸ್ತ್ರ, ಕನ್ನಡಕ, ಎನ್‌–95 ಮುಖ, ಕೈಗವಸು ಧರಿಸಿದ ವಿಜ್ಞಾನಿಗಳು ದಿನವಿಡೀ ಮಾದರಿಗಳ ಪರೀಕ್ಷೆ ನಡೆಸುತ್ತಿದ್ದಾರೆ.

ಜೊತೆಗೇ ಮಾದರಿಗಳ ಪರೀಕ್ಷೆಗಾಗಿ ದೇಶದಾದ್ಯಂತ ಆರಂಭಿಸಲಾಗಿರುವ ಪ್ರಯೋಗಾಲಯಗಳ ಸಿಬ್ಬಂದಿಗೆ ವಿಡಿಯೊ ಕಾನ್ಫರೆನ್ಸ್‌ ಹಾಗೂ ಇತರೆ ಸಂವಹನಗಳ ಮೂಲಕ ಅಗತ್ಯ ಸಲಹೆಗಳನ್ನೂ ನೀಡುತ್ತಿದ್ದಾರೆ.

ಮಾದರಿಗಳ ಪರೀಕ್ಷೆ, ಈಗಾಗಲೇ ಪರೀಕ್ಷಿಸಿದ ಪ್ರಕರಣಗಳಲ್ಲಿ ಸೋಂಕು ಸಾಧ್ಯತೆ ದೃಢಪಡಿಸುವುದು, ಇತರೆ ಪ್ರಯೋಗಾಲಯಗಳಿಗೆ ಅಗತ್ಯ ನೆರವು ನೀಡುವುದು ಹೀಗೇ ಕೇಂದ್ರದಲ್ಲಿ ದಿನವಿಡೀ ಇನ್ನಿಲ್ಲದ ಚಟುವಟಿಕೆ.

‘ಪ್ರತಿದಿನ ಸರಾಸರಿ 25 ಮಾದರಿಗಳು ಹೊಸದಾಗಿ ಬರುತ್ತಿವೆ‘ ಎಂದು ಎನ್‌ಐವಿಯ ಐಸಿಎಂಆರ್ ವಿಭಾಗದ ಮುಖ್ಯಸ್ಥರಾದ ರಾಮನ್‌ ಆರ್.ಗಂಗಖೇಡ್ಕರ್ ಪ್ರತಿಕ್ರಿಯಿಸಿದರು.

ಮಾರ್ಚ್‌ 6ರವರೆಗೂ ಪುಣೆಯ ಎನ್‌ಐವಿ ಕೇಂದ್ರವು ನೆಟ್‌ವರ್ಕ್ ಕೇಂದ್ರಗಳ ಸಹಯೋಗದಲ್ಲಿ 3,404 ಜನರಿಗೆ ಸಂಬಂಧಿಸಿದಂತೆ ಒಟ್ಟು 4,058 ಮಾದರಿಗಳ ಪರೀಕ್ಷೆಯನ್ನು ನಡೆಸಿದೆ.

ದೇಶದಲ್ಲಿ 39 ಪ್ರಕರಣ ದೃಢಪಟ್ಟಿದೆ. ಆರೋಗ್ಯ ಸಚಿವಾಲಯ ದೇಶದಾದ್ಯಂತ 52 ಪ್ರಯೋಗಾಲಯ ತೆರೆದಿದ್ದು, ಮಾದರಿಗಳ ಸಂಗ್ರಹ ಸೇರಿ ಪೂರಕವಾಗಿ ಕಾರ್ಯನಿರ್ವಹಿಸಲು 57 ಕೇಂದ್ರಗಳನ್ನು ಸಜ್ಜುಗೊಳಿಸಿದೆ.

*ಕೋವಿಡ್‌ ಸೋಂಕು ತಡೆಯಲು ಆದಷ್ಟು ಕಟ್ಟೆಚ್ಚರ ವಹಿಸಬೇಕು ಎಂದು ಸೇನೆ, ಕೇಂದ್ರ ಮೀಸಲು ಪೊಲೀಸ್‌ ಪಡೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ತನ್ನ ಸಿಬ್ಬಂದಿಗೆ ತಾಕೀತು ಮಾಡಿದೆ. ರಜೆ ಮುಗಿಸಿ ಕರ್ತವ್ಯಕ್ಕೆ ಮರಳುವ ಸಿಬ್ಬಂದಿಯನ್ನು ಕಟ್ಟುನಿಟ್ಟಿನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಲಾಗಿದೆ ಎಂದು ಸಿಆರ್‌ಪಿಎಫ್‌ನ ಹೆಚ್ಚುವರಿ ಮಹಾ ನಿರ್ದೇಶಕ ಜುಲ್ಫಿಕರ್‌ ಹಸನ್ ತಿಳಿಸಿದರು.

*ಸೋಂಕು ತಡೆಯಲು ವಿದೇಶಿಯರಿಗೆ ಗಡಿ ಪ್ರವೇಶಿಸದಂತೆ ಅರುಣಾಚಲ ಪ್ರದೇಶ ಸರ್ಕಾರ ನಿರ್ಬಂಧ ಹೇರಿದೆ. ಚೀನಾ ಗಡಿಗೆ ಹೊಂದಿಕೊಂಡಿರುವ ರಾಜ್ಯವನ್ನು ಪ್ರವೇಶಿಸಲು ವಿದೇಶಿಯರಿಗೆ ನಿರ್ಬಂಧಿತ ಪ್ರದೇಶ ಅನುಮತಿ (ಪಿಎಪಿ) ಅಗತ್ಯವಿದೆ.

*ಜಯಪ್ರಕಾಶ್‌ ನಾರಾಯಣ್‌ ಅಪೆಕ್ಸ್ ತುರ್ತು ಚಿಕಿತ್ಸಾ ಕೇಂದ್ರದ ಒಂದು ಭಾಗವನ್ನು ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು. ಪ್ರತ್ಯೇಕ ಹಾಸಿಗೆಗಳನ್ನು ಕಾಯ್ದಿರಿಸಬೇಕು‘ ಎಂದು ಆರೋಗ್ಯ ಸಚಿವಾಲಯ ಏಮ್ಸ್‌ ಆಡಳಿತಕ್ಕೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.