ಕಾಬೂಲ್: ಮಕ್ಕಳ ಹಕ್ಕುಗಳನ್ನು ಉತ್ತೇಜಿಸಲು ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ವಿಶ್ವ ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ. ಆದರೆ, ಯುದ್ಧ ಪೀಡಿತ ಅಫ್ಗಾನಿಸ್ತಾನದ ಅನೇಕ ಮಕ್ಕಳು ತಮ್ಮ ಕುಟುಂಬಗಳಿಗೆ ನೆರವಾಗಲೆಂದು ಮಕ್ಕಳ ದಿನವೂ ಬೀದಿಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ.
‘ನಾನು ಶಾಲೆಗೆ ಹೋಗುತ್ತಿದ್ದೆ. ಆದರೆ ಈಗ ಇಲ್ಲ. ಏಕೆಂದರೆ ಯುದ್ಧ, ಬಡತನವು ನಮ್ಮನ್ನು ಕಾಡುತ್ತಿದೆ. ನನ್ನಪ್ಪ ಜೀವನ ನಿರ್ವಹಣೆಗಾಗಿ ಹಸುವೊಂದನ್ನು ಖರೀದಿಸಿ ತಂದಿದ್ದಾರೆ. ಅದಕ್ಕೆ ನಾನು ಮೇವು ಹೊಂದಿಸಬೇಕಿದೆ,’ ಎಂದು 14 ವರ್ಷದ ಮಲಿಕ್ ಶನಿವಾರ ಸುದ್ದಿ ಮಾಧ್ಯಮ ‘ಕ್ಸಿನ್ಹುವಾ’ಗೆ ಹೇಳಿಕೊಂಡಿದ್ದಾನೆ.
‘ತನ್ನ ತಂದೆಗೆ ಈಗ ಕೆಲಸವಿಲ್ಲ. ನಾನು ಕುಟುಂಬದ ಹಿರಿಯ ಮಗನಾಗಿ ಜೀವನೋಪಾಯಕ್ಕಾಗಿ ದುಡಿಯಲೇಬೇಕಾಗಿದೆ,’ ಎಂದು ಆತ ನೋವಿನಿಂದ ಹೇಳಿಕೊಂಡಿದ್ದಾನೆ. ಮೂರು ವರ್ಷಗಳಿಂದ ಶಾಲೆಗೆ ಹೋಗದೇ ಇದ್ದಿದ್ದಕ್ಕೆ ಮಲೀಕ್ ಬೇಸರವನ್ನು ತೋಡಿಕೊಂಡಿದ್ದಾನೆ.
‘ಹಸುವನ್ನು ಮೇಯಿಸುವುದರ ಜೊತೆಗೆ ಮಲಿಕ್, ವಸ್ತುಗಳನ್ನು ಮಾರುವ ಕಾಯಕವನ್ನೂ ಮಾಡಬೇಕಾಗಿ ಬಂದಿದೆ. ನಮ್ಮ ಬಡತನಕ್ಕೆ ಯುದ್ಧವೇ ಮುಖ್ಯ ಕಾರಣ. ಯುದ್ಧದಲ್ಲಿ ದೇಶವು ಎಲ್ಲವನ್ನೂ ಕಳೆದುಕೊಂಡಿದೆ,’ ಎಂದು ಆತ ಹೇಳಿಕೊಂಡಿದ್ದಾನೆ.
ಮತ್ತೊಬ್ಬ ಬಾಲಕ, ಐದನೇ ತರಗತಿಯ ಅಮಿನುಲ್ಲಾ ಪೊಪಾಲ್‌ಜೈ ಮುಂದಿನ ತನ್ನ ವಿದ್ಯಾಭ್ಯಾಸದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾನೆ. ಕುಟುಂಬದ ಬಡತನದ ಕಾರಣದಿಂದಾಗಿ ಆತ ಶಾಲೆ ಮುಗಿಸಿ ಬಂದು ದುಡಿಮೆಗೆ ಹೋಗಬೇಕಾಗಿ ಬಂದಿದೆ.
‘ವಯಸ್ಸಾದ ನನ್ನ ತಂದೆಗೆ ಉದ್ಯೋಗ ಮತ್ತು ಆದಾಯವಿಲ್ಲ. ನನ್ನ ಕುಟುಂಬಕ್ಕೆ ನೆರವಾಗಲು ನಾನು ಕೆಲಸ ಮಾಡಲೇಬೇಕಾಗಿ ಬಂದಿದೆ,‘ ಎಂದು ಪೊಪಾಲ್‌ಜೈ ಹೇಳಿದ್ದಾನೆ. ಸಂಸಾರದ ಹೊರೆ ಹೆಚ್ಚಾದರೆ ಮುಂದೊಂದು ದಿನ ಶಾಲೆ ಬಿಡಬೇಕಾಗಬಹುದು ಎಂಬ ಭಯವೂ ಅವನಲ್ಲಿತ್ತು.
‘ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕಿದೆ. ಅಫ್ಗಾನಿಸ್ತಾನದ ಮಕ್ಕಳು ಶಾಲೆಗೆ ಹೋಗುವುದನ್ನು ಬೆಂಬಲಿಸುವಂತೆ, ನೆರವು ಒದಗಿಸುವಂತೆ ನಾನು ಅಂತರರಾಷ್ಟ್ರೀಯ ಸಮುದಾಯವನ್ನು ವಿನಂತಿಸುತ್ತಿದ್ದೇನೆ’ ಎಂದು ಕಾಬೂಲ್ ನಿವಾಸಿ ಅಜೀಜ್ ಹೇಳಿದ್ದಾರೆ.
ಅಫ್ಗನ್‌ನ ಹಲವು ಮಕ್ಕಳ ಮನೆಗಳಲ್ಲಿ ದುಡಿದು ತರುವವರು ಯಾರೂ ಇಲ್ಲ. ಹೀಗಾಗಿ ಜೀವನೋಪಾಯಕ್ಕಾಗಿ ಅವರೇ ದುಡಿಯಬೇಕಾದ ಪರಿಸ್ಥಿತಿ ಇದೆ. ಅರ್ಧ ದಿನ ಶಾಲೆಗೆ ಹೋಗಿ, ಇನ್ನರ್ಧ ದಿನ ದುಡಿಯುವುದು ಅನಿವಾರ್ಯ ಎಂಬಂತಾಗಿದೆ. ಎಂದು ಅಜೀಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ಮಕ್ಕಳು ಸೇರಿದಂತೆ 22 ದಶಲಕ್ಷಕ್ಕೂ ಹೆಚ್ಚು ಆಫ್ಗನ್ನರು ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ. ಯುದ್ಧ ಪೀಡಿತ ದೇಶಕ್ಕೆ ಮಾನವೀಯ ನೆರವು ಪೂರೈಸುವಲ್ಲಿ ಆಗುವ ಯಾವುದೇ ವಿಳಂಬವು ಮುಂಬರುವ ಚಳಿಗಾಲದಲ್ಲಿ ದುರಂತವನ್ನೇ ಸೃಷ್ಟಿ ಮಾಡಲಿದೆ ಎಂದು ವಿಶ್ವ ಸಂಸ್ಥೆಯ ನೆರವು ವಿಭಾಗವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.