ADVERTISEMENT

ಮತ್ತೆ ಮೂರು ಪ್ರಾಂತ್ಯಗಳ ರಾಜಧಾನಿಗಳು ತಾಲಿಬಾನ್‌ ವಶಕ್ಕೆ

ಅಫ್ಗಾನಿಸ್ತಾನದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಉಗ್ರಗಾಮಿ ಸಂಘಟನೆ

ಏಜೆನ್ಸೀಸ್
Published 11 ಆಗಸ್ಟ್ 2021, 12:32 IST
Last Updated 11 ಆಗಸ್ಟ್ 2021, 12:32 IST
ಬಘ್ಲಾನ್‌ ಪ್ರಾಂತ್ಯದ ರಾಜಧಾನಿ ಪುಲ್‌–ಇ–ಖುಮ್ರಿ ವಶಪಡಿಸಿಕೊಂಡ ತಾಲಿಬಾನಿಗಳು     ರಾಯಿಟರ್ಸ್‌ ಚಿತ್ರ
ಬಘ್ಲಾನ್‌ ಪ್ರಾಂತ್ಯದ ರಾಜಧಾನಿ ಪುಲ್‌–ಇ–ಖುಮ್ರಿ ವಶಪಡಿಸಿಕೊಂಡ ತಾಲಿಬಾನಿಗಳು     ರಾಯಿಟರ್ಸ್‌ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದ ಮೂರು ಪ್ರಾಂತ್ಯಗಳನ್ನು ತಾಲಿಬಾನ್‌ ಮತ್ತೆ ವಶಪಡಿಸಿಕೊಂಡಿದೆ. ಇದರಿಂದಾಗಿ, ದೇಶದ ಮೂರನೇ ಎರಡರಷ್ಟು ಭಾಗ ತಾಲಿಬಾನ್‌ ನಿಯಂತ್ರಣದಲ್ಲಿದೆ.

ಈಶಾನ್ಯ ಭಾಗದ ಬದಖ್‌ಷಾನ್‌ ಮತ್ತು ಪಶ್ಚಿಮ ಭಾಗದ ಬಘ್ಲಾನ್‌ ಹಾಗೂ ಫರಾಹ್‌ ಪ್ರಾಂತ್ಯಗಳ ರಾಜಧಾನಿಗಳನ್ನು ತಾಲಿಬಾನ್‌ ವಶಪಡಿಸಿಕೊಂಡಿದೆ.

ಅಫ್ಗಾನಿಸ್ತಾನದ ಅಧ್ಯಕ್ಷ ಅಷ್ರಫ್‌ ಘನಿ ಬಲ್ಖ್‌ ಪ್ರಾಂತ್ಯಕ್ಕೆ ಧಾವಿಸಿದ್ದು, ತಾಲಿಬಾನ್‌ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ADVERTISEMENT

ತಾಲಿಬಾನ್‌ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಾಬಲ್ಯವನ್ನು ತೀವ್ರ ಗತಿಯಲ್ಲಿ ಸಾಧಿಸುತ್ತಿರುವುದು ಅಫ್ಗಾನಿಸ್ತಾನದ ಸರ್ಕಾರವನ್ನು ಚಿಂತೆಗೀಡು ಮಾಡಿದೆ. ಹಲವೆಡೆ ಯುದ್ಧದ ಸ್ಥಳಗಳಿಂದ ವಿಶೇಷ ಕಾರ್ಯಾಚರಣೆ ಪಡೆಗಳೇ ಪಲಾಯನಗೈದಿವೆ. ಅಪಾರ ವೆಚ್ಚ ಮಾಡಿ ತರಬೇತಿ ಪಡೆದಿದ್ದರೂ ಸೇನಾ ಪಡೆಗಳು ಯುದ್ಧ ಭೂಮಿಯಿಂದ ಓಡಿ ಹೋಗುತ್ತಿರುವುದು ಏಕೆ ಎನ್ನುವ ಪ್ರಶ್ನೆ ಸರ್ಕಾರವನ್ನು ಕಾಡುತ್ತಿದೆ.

ಹಲವೆಡೆ ಸಂಭವಿಸಿರುವ ಹಿಂಸಾಚಾರದಿಂದಾಗಿ ಸಾವಿರಾರು ಮಂದಿ ಕಾಬೂಲ್‌ನಲ್ಲಿ ಆಶ್ರಯ ಪಡೆದಿದ್ದಾರೆ.

ಈ ತಿಂಗಳ ಅಂತ್ಯಕ್ಕೆ ಸೇನೆಯನ್ನು ವಾಪಸ್‌ ಕರೆಯಿಸಿಕೊಳ್ಳುವುದಾಗಿ ಹೇಳಿರುವ ಅಮೆರಿಕ, ಕೆಲವೆಡೆ ವಾಯು ದಾಳಿ ಮಾತ್ರ ನಡೆಸಿದೆ. ಆದರೆ, ಇತರ ಕಾರ್ಯಾಚರಣೆಯಿಂದ ದೂರವೇ ಉಳಿದಿದೆ.

ಫರಾಹ್‌ನಲ್ಲಿ ತಾಲಿಬಾನಿಗಳು ಅಫ್ಗಾನಿಸ್ತಾನದ ಭದ್ರತಾ ಪಡೆಗಳ ಯೋಧರ ದೇಹವನ್ನು ಬೀದಿಯಲ್ಲಿ ಎಳೆದಾಡಿ ‘ದೇವರು ದೊಡ್ಡವನು’ ಎಂದು ಘೋಷಣೆ ಹಾಕಿದ್ದಾರೆ.

‘ಪರಿಸ್ಥಿತಿ ನಿಯಂತ್ರಣದಲ್ಲಿದೆ. ಫರಾಹ್‌ ನಗರದಲ್ಲಿ ನಮ್ಮ ಮುಜಾಹಿದ್ದೀನ್‌ಗಳು ಗಸ್ತು ತಿರುಗುತ್ತಿದ್ದಾರೆ’ ಎಂದು ತಾಲಿಬಾನ್‌ ಉಗ್ರನೊಬ್ಬ ತಿಳಿಸಿದ್ದಾನೆ.

ತಾಲಿಬಾನಿಗಳು ಈ ಮೊದಲು ಕುಂದುಜ್‌ ಸೇರಿದಂತೆ ಆರು ಪ್ರಾಂತ್ಯಗಳ ರಾಜಧಾನಿಗಳನ್ನು ವಶಪಡಿಸಿಕೊಂಡಿದ್ದರು.

ಬುಧವಾರ ಕುಂದುಜ್‌ ವಿಮಾನ ನಿಲ್ದಾಣದಲ್ಲಿನ ಅಫ್ಗನ್‌ ರಾಷ್ಟ್ರೀಯ ಸೇನೆಯ ಪ್ರಧಾನ ಕಚೇರಿಯನ್ನು ಸಹ ತಾಲಿಬಾನ್‌ ವಶಪಡಿಸಿಕೊಂಡಿದೆ. ಇದರಿಂದ ಸೇನೆಗೆ ತೀವ್ರ ಹಿನ್ನಡೆಯಾದಂತಾಗಿದೆ ಎಂದು ಕುಂದುಜ್‌ ಪ್ರಾಂತ್ಯದ ಸದಸ್ಯ ಘುಲಾಮ್‌ ರಬಾನಿ ತಿಳಿಸಿದ್ದಾರೆ.

ಅಫ್ಗಾನಿಸ್ತಾನದ 400 ಜಿಲ್ಲೆಗಳ ಪೈಕಿ 230 ಜಿಲ್ಲೆಗಳಲ್ಲಿ ತಾಲಿಬಾನ್‌ ನಿಯಂತ್ರಣ ಸಾಧಿಸಿದೆ ಎಂದು ಐರೋಪ್ಯ ಒಕ್ಕೂಟದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಮಹಿಳೆಯರಿಗೆ ನಿರ್ಬಂಧ:

ತಾಲಿಬಾನಿಗಳು ತಾವು ವಶಪಡಿಸಿಕೊಂಡಿರುವ ಸ್ಥಳಗಳಲ್ಲಿ ಮಹಿಳೆಯರಿಗೆ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸುತ್ತಿದ್ದಾರೆ ಎಂದು ನಾಗರಿಕರು ತಿಳಿಸಿದ್ದಾರೆ.ಕೆಲವೆಡೆ ಶಾಲೆಗಳಿಗೂ ಬೆಂಕಿ ಹಚ್ಚಿದ್ದಾರೆ. ಜತೆಗೆ ಸೇಡಿಗಾಗಿ ಹಲವರನ್ನು ಹತ್ಯೆ ಮಾಡಿರುವ ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.