ADVERTISEMENT

ಈ ನೋವು ನನ್ನನ್ನು ಬಲಪಡಿಸುತ್ತಿದೆ: ಕಾಬೂಲ್‌ ತೊರೆದ ಯುವ ಚಿತ್ರ ನಿರ್ದೇಶಕಿಯ ಮಾತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2021, 8:56 IST
Last Updated 27 ಆಗಸ್ಟ್ 2021, 8:56 IST
ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ರೋಯಾ ಹೈದರಿ
ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ರೋಯಾ ಹೈದರಿ   

ಕಾಬೂಲ್‌ ಮೇಲೆ ತಾಲಿಬಾನ್‌ ಹಿಡಿತ ಸಾಧಿಸಿದ ನಂತರ ಅಘ್ಗಾನಿಸ್ತಾನದ ಕೋಟ್ಯಾಂತರ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ಕ್ರಿಯಾಶೀಲ ಉದ್ಯಮಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರ ಭವಿಷ್ಯವೇ ಬರಡಾಗಿ ಹೋಗಿದೆ.

ತಮ್ಮ ಕ್ರಿಯಾಶೀಲ ಕೆಲಸಗಳನ್ನು ಮುಂದುವರಿಸಲಾಗದೇ ದೇಶ ಬಿಡುತ್ತಿರುವ ಮಹಿಳೆಯರ ದುರಂತ ಬದುಕಿಗೆ ಕಾಬೂಲ್ ವಿಮಾನ ನಿಲ್ದಾಣ ಸಾಕ್ಷಿಯಾಗುತ್ತಿದೆ.

ಚಿತ್ರ ನಿರ್ದೇಶಕಿ ರೋಯಾ ಹೈದರಿ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ತೆಗೆಸಿಕೊಂಡ ಫೋಟೊವೊಂದನ್ನು ಟ್ವೀಟ್‌ ಮಾಡಿದ್ದಾರೆ. ಆ ಮೂಲಕ ಹುಟ್ಟಿದ ನೆಲವನ್ನು ತೊರೆಯುತ್ತಿರುವ ಸಮಯದಲ್ಲಿ ತಾವು ಅನುಭವಿಸುತ್ತಿರುವ ನೋವನ್ನು ಹಂಚಿಕೊಂಡಿದ್ದಾರೆ.

ADVERTISEMENT

'ನಾನು ನನ್ನ ಇಡೀ ಬದುಕನ್ನು ಬಿಟ್ಟು ಹೋಗುತ್ತಿದ್ದೇನೆ. ಪ್ರತಿರೋಧದ ಧ್ವನಿಯನ್ನು ಮುಂದುವರಿಸಲು ನನ್ನ ಮನೆಯನ್ನು ತೊರೆಯುತ್ತಿದ್ದೇನೆ. ನಾನು ನನ್ನ ತಾಯ್ನಾಡಿನಿಂದ ಮತ್ತೊಮ್ಮೆ ಓಡಿಹೋಗುತ್ತಿದ್ದೇನೆ. ಮತ್ತೊಮ್ಮೆ, ನಾನು ಶೂನ್ಯದಿಂದಲೇ ಬದುಕನ್ನು ಪ್ರಾರಂಭಿಸಲಿದ್ದೇನೆ' ಎಂದು ರೋಯಾ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

'ಕ್ಯಾಮೆರಾ ಮತ್ತು ಸತ್ತ ಆತ್ಮವನ್ನು ನನ್ನೊಂದಿಗೆ ತೆಗೆದುಕೊಂಡು ಸಾಗರಗಳನ್ನು ದಾಟಿ ಹೋಗುತ್ತಿದ್ದೇನೆ. ಭಾರವಾದ ಹೃದಯದಿಂದಲೇ ಮಾತೃಭೂಮಿಗೆ ವಿದಾಯ ಹೇಳುತ್ತಿದ್ದೇನೆ' ಎಂದು ಚಿತ್ರ ನಿರ್ದೇಶಕಿ ಟ್ವೀಟ್‌ ಮಾಡಿದ್ದಾರೆ.

'ನಾನು ಎಂದಿಗೂ ಸುಮ್ಮನಿರುವುದಿಲ್ಲ. ಎದೆಯಲ್ಲಿನ ಈ ನೋವು ನನ್ನನ್ನು ಮತ್ತಷ್ಟು ಬಲಪಡಿಸುತ್ತಿದೆ. ಈ ಯುದ್ಧಕ್ಕಿಂತ ನನ್ನ ಕಲೆ ಪ್ರಬಲವಾಗಿದೆ. ನನ್ನ ಜನರು ಈ ಹೇಡಿಗಳಿಗಿಂತ ಬಲಶಾಲಿಗಳು. ನನ್ನ ಜನರಿಗಾಗಿ, ನನ್ನ ಮನೆಗಾಗಿ, ನನ್ನ ಅಫ್ಗಾನಿಸ್ತಾನಕ್ಕಾಗಿ ಮತ್ತೆ ಎದ್ದೇಳುತ್ತೇನೆ' ಎಂದು ರೋಯಾ ಹೈದರಿ ಮತ್ತೊಂದು ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅಫ್ಗಾನಿಸ್ತಾನ ಸೇನೆಗೆ ಅಮೆರಿಕ ಪಡೆಗಳ ಬೆಂಬಲ ಕ್ಷೀಣಿಸುತ್ತಿದ್ದಂತೆ ಒಂದೇ ತಿಂಗಳಲ್ಲಿ ತಾಲಿಬಾನಿಗಳು ಮತ್ತೆ ಅಧಿಕಾರ ಸ್ಥಾಪಿಸಿದ್ದಾರೆ. 20 ವರ್ಷಗಳ ಬಳಿಕ ಅಫ್ಗಾನಿಸ್ತಾನ ತಾಲಿಬಾನಿಗಳ ಕೈವಶವಾಗಿದೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.